ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳು ರಾಜಕೀಯ ಕೇಂದ್ರಗಳಾಗದಿರಲಿ

ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ
Last Updated 14 ಅಕ್ಟೋಬರ್ 2021, 3:30 IST
ಅಕ್ಷರ ಗಾತ್ರ

ದಾವಣಗೆರೆ: ದೇಶದ ಕೆಲವು ವಿಶ್ವವಿದ್ಯಾಲಯಗಳು ಸಂಶೋಧನಾ ಕೇಂದ್ರ, ವಿದ್ಯಾಕೇಂದ್ರಗಳಾಗುವ ಬದಲು ರಾಜಕೀಯ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ವಿಶ್ವವಿದ್ಯಾಲಯಗಳಲ್ಲಿ ರಾಜಕೀಯ ವಿಚಾರಗಳು ತಲೆ ಎತ್ತಬಾರದು. ದೇಶಕ್ಕೆ ಕೊಡುಗೆ ನೀಡುವ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ವಿಶ್ವವಿದ್ಯಾಲಯದ 13ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಚಿತ್ರದುರ್ಗ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದ ಪುರುಷರ ವಸತಿನಿಲಯ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ತಮ್ಮ ವಿಚಾರ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಸಂವಿಧಾನನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ವಿಷ ಬಿತ್ತುವ ಕೆಲಸ ಎಡಪಂಥೀಯರಿಂದ ಆಗುತ್ತಿದೆ. ಇದರಿಂದಾಗಿ ವಿಶ್ವವಿದ್ಯಾಲಯಗಳು ರಾಜಕೀಯ ಕೇಂದ್ರಗಳಾಗುತ್ತಿವೆ. ದೇಶಕ್ಕೆ ಒಳಿತಾಗುವ ಎಲ್ಲವನ್ನೂ ವಿರೋಧಿಸುವ ದೇಶವಿರೋಧಿ ಶಕ್ತಿಗಳು ಸಮಾಜದಲ್ಲಿ ಭ್ರಮೆ ಹುಟ್ಟಿಸುವ ಕೆಲಸ ಮಾಡುತ್ತಿವೆ. ನಕಾರಾತ್ಮಕ ಚಿಂತನೆ ಬಿತ್ತುತ್ತಿವೆ ಎಂದು ತಿಳಿಸಿದರು.

ದೇಶ ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಅನಕ್ಷರತೆಯ ಪ್ರಮಾಣ ಹೆಚ್ಚಿತ್ತು. ಅಲ್ಲಿಂದ ಇಲ್ಲಿಯವರೆಗೆ ಸರ್ಕಾರಗಳು ಶಿಕ್ಷಣಕ್ಕೆ ಆದ್ಯತೆ ನೀಡಿ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದ್ದರಿಂದ ಇಂದು ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಿದೆ. ಶಿಕ್ಷಣ ಇಲ್ಲದವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಎಸ್ಸೆಸ್ಸೆಲ್ಸಿಯ ಬಳಿಕ ಶೇ 50ರಷ್ಟು ಮಂದಿ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ ಎಂದರು.

ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸುವುದನ್ನು ತಪ್ಪಿಸುವುದಕ್ಕಾಗಿಯೇ ಸರ್ಕಾರ ವಿದ್ಯಾರ್ಥಿಸ್ನೇಹಿಯಾದ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದೆ. ದೇಶದ 2.60 ಲಕ್ಷ ಸಂಸ್ಥೆಗಳ, ಸಮಾಜಸೇವಕರ, ಚಿಂತಕರ ಸಲಹೆ ಪಡೆದು ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. ಇದರಿಂದಾಗಿ ಅರ್ಧಕ್ಕೆ ಓದು ಕೈಬಿಡುವವರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ. ಕೌಶಲಾಭಿವೃದ್ಧಿ, ಜೀವನ ಮೌಲ್ಯಗಳನ್ನು ಹೊಸ ಶಿಕ್ಷಣ ನೀತಿ ಒಳಗೊಂಡಿದೆ ಎಂದು ವಿವರಿಸಿದರು.

ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಬೇರೆ ದೇಶಗಳಲ್ಲಿ ಸಂಶೋಧನೆಗಳನ್ನು ವ್ಯಾವಹಾರಿಕವಾಗಿ ನೋಡಲಾಗುತ್ತದೆ. ನಾವೂ ಅದೇ ಮಾನದಂಡದಲ್ಲಿ ನೋಡಬೇಕಿದೆ. ಸಂಶೋಧನೆಯು ನಿಜಾಂಶದಿಂದ ಕೂಡಿರುವ ಜೊತೆಗೆ ಸಮಾಜಕ್ಕೆ ಅನುಕೂಲ ಆಗುವಂತಿರಬೇಕು ಎಂದು ಸಲಹೆ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಸಿರಿಗೆರೆ ತರಳಬಾಳು ಶ್ರೀಗಳ ಆಶಯದಂತೆ ಜನ್ಮ ತಳೆದ ದಾವಣಗೆರೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಈಗಿನ ಕುಲಪತಿಗಳು ಸಾಕಷ್ಟು ಶ್ರಮ ಹಾಕಿದ್ದಾರೆ. ₹ 12 ಕೋಟಿ ವೆಚ್ಚದ ಆಡಿಟೋರಿಯಂಗೆ ಬೇಡಿಕೆ ಸಲ್ಲಿಸಿದ್ದು, ಕೇಂದ್ರ ಸಚಿವರ ಸಹಕಾರದಿಂದ ಅದನ್ನು ಸಾಕಾರಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ‘ಹಲವರ ಹೋರಾಟ, ಹಿರಿಯ ಮಾರ್ಗದರ್ಶನ, ಗುರುಗಳ ಆಶೀರ್ವಾದದಿಂದ ದಾವಣಗೆರೆ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ವಿಶ್ವವಿದ್ಯಾಲಯವನ್ನು ಜಾಗತಿಕ ಮಟ್ಟಕ್ಕೆ ಒಯ್ಯುವ ಪ್ರಯತ್ನಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ, ಸಹಭಾಗಿತ್ವ ಅಗತ್ಯ’ ಎಂದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಸಿಂಡಿಕೇಟ್ ಸದಸ್ಯರಾದ ಮಾಡಾಳ್ ಮಲ್ಲಿಕಾರ್ಜುನ, ಪವನ್‍, ಡಾ.ಶ್ರೀಧರ, ವಿಜಯಲಕ್ಷ್ಮೀ ಹಿರೇಮಠ್ ಅವರೂ ಇದ್ದರು.

ಡಾ.ಎಚ್. ವಿಶ್ವನಾಥ್ ಹಾಗೂ ಡಾ.ವೆಂಕಟೇಶ ಪಲಾಟೆ ಅವರ ಕೃತಿ ಬಿಡುಗಡೆಗೊಳಿಸಲಾಯಿತು. ಪ್ರಾಧ್ಯಾಪಕರು, ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರೋತ್ಸಾಹಧನ ಮತ್ತು ಸಂಶೋಧನಾ ಪ್ರಬಂಧ ಪ್ರಕಟಿಸಿದವರಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.

ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಸ್ವಾಗತಿಸಿದರು. ಡಾ. ಜಯರಾಮಯ್ಯ ವಂದಿಸಿದರು. ಡಾ. ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT