ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಪಾಲನೆಯಾಗದ ಸಂಚಾರ ನಿಯಮ!

2022ರಲ್ಲಿ ₹ 2.25 ಕೋಟಿ ದಂಡ l ಸಂಚಾರ ಜಾಗೃತಿಗೆ ಪೊಲೀಸರಿಂದ ಪಾಠ
Last Updated 6 ಫೆಬ್ರುವರಿ 2023, 5:19 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ‘ಸ್ಮಾರ್ಟ್‌ ಸಿಟಿ’ ಯೋಜನೆ ಅಡಿ ಅಭಿವೃದ್ಧಿ ಆಗುತ್ತಿದೆ. ವಾಹನಗಳ ಸಂಚಾರ ದಟ್ಟಣೆ ಗಮನಿಸಿ ‘ಟ್ರಾಫಿಕ್‌ ಸಿಗ್ನಲ್‌ಗಳು’ ತಂತಾನೇ ಕೆಲಸ ಮಾಡುವಂತಾಗಿದೆ. ಆದರೆ, ಸಂಚಾರ ನಿಯಮಗಳ ಪಾಲನೆ ವಿಷಯದಲ್ಲಿ ಜನರು ಮಾತ್ರ ಸ್ಮಾರ್ಟ್ ಆಗಿಲ್ಲ.

ಹಸಿರು ಸಿಗ್ನಲ್ ಬೀಳಲು ಇನ್ನೂ ಕೆಲವು ಸೆಕೆಂಡ್ ಬಾಕಿ ಇರುವಾಗಲೇ ‘ಬರ‍್ರ್’ ಎಂದು ವಾಹನ ನುಗ್ಗಿಸುವವರಿದ್ದಾರೆ. ಕೆಲವರು ಕೆಂಪು ದೀಪ ಹೊತ್ತಿದರೂ ನಿಲ್ಲದಂತೆ ಮುನ್ನುಗ್ಗುತ್ತಾರೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಗೆ ಸವಾರರು, ವಾಹನ ಚಾಲಕರು ಇದುವರಗೂ ಹೊಂದಿಕೊಂಡಂತೆ ಕಾಣುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಸಿರು ಸಿಗ್ನಲ್‌ ಬರುವವರೆಗೆ ಅನೇಕ ಸವಾರರಿಗೆ ಕಾಯುವ ತಾಳ್ಮೆಯಾಗಲೀ, ನಿಯಮಗಳ ಪಾಲನೆಯ ಜವಾಬ್ದಾರಿಯಾಗಲೀ ಇಲ್ಲದಾಗಿದೆ.

ಬಹುತೇಕ ಕಡೆ ರಸ್ತೆಯನ್ನು ಅಗೆದು ಜಲಸಿರಿ ಯೋಜನೆಯ ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿ, ಸ್ಮಾರ್ಟ್‌ ಸಿಟಿಯ ರಸ್ತೆ ಅಭಿವೃದ್ಧಿ ಕಾಮಗಾರಿ, ಯಾವುದಾದರೂ ಕೇಬಲ್‌ ಅಳವಡಿಕೆ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ಇದರಿಂದಾಗಿ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ನಗರದ ಹದಡಿ ರಸ್ತೆ, ಪಿ.ಬಿ. ರಸ್ತೆ, ರಿಂಗ್ ರಸ್ತೆ, ಅಶೋಕ ರೈಲ್ವೆ ಗೇಟ್, ಹಳೇ ದಾವಣಗೆರೆಯ ಯಾವುದೇ ಭಾಗದಲ್ಲಿ ನೋಡಿದರೂ ಪಾದಚಾರಿಗಳು ಸಂಚರಿಸಲು ಮಾರ್ಗಗಳಿಲ್ಲ. ಅಕ್ಕಮಹಾದೇವಿ ರಸ್ತೆ, ಪ್ರವಾಸಿಮಂದಿರ ರಸ್ತೆಗಳಲ್ಲಿ ಫುಟ್‌‍ಪಾತ್ ಇದ್ದರೂ ವ್ಯಾಪಾರಿಗಳು ಫುಟ್‌ಪಾತ್ ಅನ್ನು ಆಕ್ರಮಿಸಿದ್ದಾರೆ. ಹಲವೆಡೆ ವಾಣಿಜ್ಯ ಮಳಿಗೆ ಮಾಲೀಕರು ಫುಟ್‌ಪಾತ್ ಅನ್ನು ಆಕ್ರಮಿಸಿದ್ದಾರೆ.

ಕೆಲವು ಕಡೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಪಾದಚಾರಿಗಳಿಗೆ ದೀಪ ಹಸಿರಾದರೂ ಜನರು ರಸ್ತೆ ದಾಟಲು ಬಿಡದಂತೆ ವಾಹನಗಳು ನುಗ್ಗುತ್ತಿವೆ. ಅಜಾಗರೂಕ ಚಾಲನೆ, ರಸ್ತೆ ಮಧ್ಯದಲ್ಲಿ ವಾಹನ ನಿಲ್ಲಿಸುವುದು, ಕರ್ಕಶ ಹಾರ್ನ್ ಬಳಕೆ, ಮದ್ಯಪಾನ ಮಾಡಿ ಚಾಲನೆ, ಏಕಮುಖ ರಸ್ತೆಯಲ್ಲಿ ಸಂಚಾರ, ಆಟೊಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವುದು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುವುದು, ರಸ್ತೆ ಪಕ್ಕ ನಿಂತು ಕೈಮಾಡುವ ಪೊಲೀಸರನ್ನೂ ಲೆಕ್ಕಿಸದೇ ವೇಗವಾಗಿ ವಾಹನ ಓಡಿಸುವ ಪ್ರಕರಣಗಳು ಕಂಡುಬರುತ್ತಿವೆ.

ಮನೆಗೆ ಬರುತ್ತೇ ನೋಟಿಸ್: ನಗರದ 109 ಕಡೆಗಳಲ್ಲಿ ಸಿಸಿಟಿವಿ ಸರ್ವೆಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 211 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳ ಸಹಾಯದಿಂದ ಕಳ್ಳತನ ಹಾಗೂ ಸಂಚಾರ ನಿಯಮ ಉಲ್ಲಂಘನೆಯಂತಹ ಪ್ರಕರಣಗಳನ್ನು ಪತ್ತೆ ಮಾಡುವುದು ಸುಲಭವಾಗಿದೆ. ಆದರೂಉಲ್ಲಂಘನೆ ಪ್ರಕರಣಗಳು ಕಂಡುಬರುತ್ತಲೇ ಇವೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರ ಮನೆಗೆ ಅಂಚೆ ಮೂಲಕ ನೋಟಿಸ್ ನೀಡುತ್ತಿದ್ದು, 2022ರಲ್ಲಿ ಜುಲೈನಿಂದ ಅಕ್ಟೋಬರ್‌ವರೆಗೆ ಒಟ್ಟು 30,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇಲಾಖೆ ನೋಟಿಸ್ ಜಾರಿ ಮಾಡಿದೆ.

₹ 2.25 ಕೋಟಿ ದಂಡ: ‘ಎಜುಕೇಷನ್ (ಶಿಕ್ಷಣ), ಎನ್‌ಫೋರ್ಸ್‌ಮೆಂಟ್ (ಜಾರಿ) ಹಾಗೂ ತಂತ್ರಜ್ಞಾನದ ಸಹಾಯದ ಮೂಲಕ ಜನರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಸಂಚಾರ ವಿಭಾಗದ ಸಿಪಿಐ ಆರ್.ಪಿ. ಅನಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲೇ ದಂಡ ವಿಧಿಸುವುದರ ಜೊತೆಗೆ ಕೆಲವರ ಮನೆಮನೆಗೂ ನೋಟಿಸ್ ಕಳುಹಿಸಿದ್ದೇವೆ. ಪ್ರತಿ ವರ್ಷ ಕನಿಷ್ಠ ಎಂದರೂ ಜಿಲ್ಲೆಯಲ್ಲಿ ಭಾರಿ ದಂಡ ಸಂಹ್ರಹಿಸಲಾಗುತ್ತಿದೆ. 2022ರಲ್ಲಿ ₹ 2.25 ಕೋಟಿ ದಂಡ ವಿಧಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ನನ್ನನ್ನು ಯಾರೂ ನೋಡುತ್ತಿಲ್ಲ ಎಂದು ಭಾವಿಸುವ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುತ್ತಾರೆ. ಆ ಭಾವನೆ ತಪ್ಪು. ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘಿಸಿದ 39 ಪ್ರಕರಣಗಳಿಗೆ ಒಬ್ಬರಿಗೆ ₹ 20,000 ದಂಡ ವಿಧಿಸಿದ್ದೇವೆ. ಅದೇ ರೀತಿ, 28, 18 ಬಾರಿ ಉಲ್ಲಂಘನೆ ಮಾಡಿರುವಂತಹ ಗರಿಷ್ಠ ಪ್ರಕರಣಗಳು ಇವೆ’ ಎಂದರು.

‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರೊಂದಿಗೆ ತೆರಳಿ ಶಾಲೆ– ಕಾಲೇಜುಗಳಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಇದರ ಜೊತೆಗೆ ಸಂಚಾರ ನಿಯಮ ಕುರಿತು ಹಲವು ವಿಡಿಯೊಗಳನ್ನು ಸಿದ್ಧಪಡಿಸಿದ್ದು, ಅವುಗಳನ್ನು ಮಕ್ಕಳಿಗೆ ತೋರಿಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.

‘ಐಎಸ್‌ಎ ಗುರುತು ಇಲ್ಲದ ಹೆಲ್ಮೆಟ್‌ ಧರಿಸದ ಸವಾರರಿಗೆ ದಂಡ ವಿಧಿಸುವುದರ ಜೊತೆಗೆ ಐಎಸ್‌ಐ ಮಾರ್ಕ್ ಇಲ್ಲದ ಹೆಲ್ಮೆಟ್‌ಗಳನ್ನು ಮಾರಾಟ ಮಾಡುವಂತೆ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ. ದಾವಣಗೆರೆ ‘ಸ್ಮಾರ್ಟ್‌ ಸಿಟಿ’ಗೆ ಸುರಕ್ಷಿತ ನಗರ ಎಂಬ ಪ್ರಶಸ್ತಿ ಬರಲು ನಾವು ಕಾರಣರಾಗಿದ್ದೇವೆ’ ಎಂದು ಸಮರ್ಥಿಸಿಕೊಂಡರು.

‘ಅತಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ವಿದ್ಯಾರ್ಥಿಗಳನ್ನು ಸಿ.ಸಿ. ಟಿವಿ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಿದ್ದೇವೆ. ಅಲ್ಲದೆ, ತ್ರಿಬಲ್‌ ರೈಡಿಂಗ್ ಮಾಡುತ್ತಿದ್ದ 225 ಮಂದಿಗೆ ದಂಡ ವಿಧಿಸಿ 3 ತಿಂಗಳ ಅವಧಿಗೆ ಅವರ ಚಾಲನಾ ಪರವಾನಗಿ ಅಮಾನತು ಮಾಡಿದ್ದೇವೆ. ಅದಾಗ್ಯೂ ಅವರು ಬೈಕ್ ಚಲಾಯಿಸಿದರೆ 2ನೇ ಬಾರಿ ದಂಡ ಹಾಕುತ್ತೇವೆ. ಈಗಾಗಲೇ ಕರ್ಕಶ ಶಬ್ದ ಮಾಡುತ್ತಿದ್ದ 250 ಬೈಕ್‌ಗಳ ಸೈಲೆನ್ಸರ್‌ಗಳನ್ನು ನಾಶ ಮಾಡಲಾಗಿದೆ. ಎಷ್ಟೇ ಬಾರಿ ನಿಯಮ ಉಲ್ಲಂಘಿಸಿದವರೂ ಒಮ್ಮೆ ಸಿಕ್ಕಾಗ ಭಾರಿ ಪ್ರಮಾಣದ ದಂಡ ನೀಡಬೇಕಾಗುತ್ತದೆ’ ಎಂದು ತಿಳಿಸಿದರು.

ಗ್ರಾಮಾಂತರ ಉಪ ವಿಭಾಗದಲ್ಲಿ ₹ 63 ಲಕ್ಷ ದಂಡ

ಗ್ರಾಮಾಂತರ ಉಪ ವಿಭಾಗದ ಹರಿಹರ ನಗರ, ಹರಿಹರ ಗ್ರಾಮಾಂತರ, ಮಲೇಬೆನ್ನೂರು, ಜಗಳೂರು, ಬಿಳಿಚೋಡು, ಮಾಯಕೊಂಡ, ಹದಡಿ, ದಾವಣಗೆರೆ ಗ್ರಾಮಾಂತರ ಠಾಣೆಗಳ ವ್ಯಾಪ್ತಿಯಲ್ಲಿ 2022ರಲ್ಲಿ ವಿವಿಧ 15,000 ಪ್ರಕರಣ ದಾಖಲಿಸಿದ್ದು, ₹ 63 ಲಕ್ಷ ದಂಡ ವಿಧಿಸಲಾಗಿದೆ. ‘ಹೆಲ್ಮೆಟ್‌ರಹಿತ ಚಾಲನೆ, ಟ್ರಿಪಲ್ ರೈಡಿಂಗ್, ಮದ್ಯ ಸೇವಿಸಿ ವಾಹನ ಚಲಾಯಿಸುವಂಥ ಮುಖ್ಯ ಪ್ರಕರಣಗಳಾಗಿವೆ. ಸಂಚಾರ ಜಾಗೃತಿ ಮೂಡಿಸುವ ಜೊತೆಗೆ ದಂಡ ವಿಧಿಸುತ್ತಿದ್ದೇವೆ’ ಎಂದು ಗ್ರಾಮಾಂತರ ಉಪವಿಭಾಗದ ಎಎಸ್‌ಪಿ ಕನಿಕಾ ಸಿಕ್ರಿವಾಲ್ ತಿಳಿಸಿದರು. ಚನ್ನಗಿರಿ ತಾಲ್ಲೂಕಿನ ಚನ್ನಗಿರಿ ಪಟ್ಟಣ, ಬಸವಾಪಟ್ಟಣ ಹಾಗೂ ಸಂತೇಬೆನ್ನೂರು ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ವರ್ಷ 585 ಹೆಲ್ಮೆಟ್ ಪ್ರಕರಣ ದಾಖಲಿಸಿ ₹ 5.85 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಹೊನ್ನಾಳಿ ತಾಲ್ಲೂಕಿನ ಹೊನ್ನಾಳಿ ಪಟ್ಟಣ, ಸಾಸ್ವೆಹಳ್ಳಿ ಹಾಗೂ ನ್ಯಾಮತಿ ಠಾಣೆಗಳ ವ್ಯಾಪ್ತಿಯಲ್ಲಿ 225 ಪ್ರಕರಣಗಳನ್ನು ದಾಖಲಿಸಿ ₹1,12,500 ದಂಡ ವಿಧಿಸಲಾಗಿದೆ.

ಹರಿಹರ: ₹ 20,000 ದಂಡ

ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ನೇ ಸಾಲಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ‌ ಮಾಡಿದ 41 ಪ್ರಕರಣಗಳು ದಾಖಲಾಗಿದ್ದು, ₹ 20,500 ದಂಡ ವಸೂಲಿ ಮಾಡಲಾಗಿದೆ’ ಎಂದು ನಗರ ಠಾಣೆ ಸಿಪಿಐ ಎಸ್.ದೇವಾನಂದ್ ತಿಳಿಸಿದ್ದಾರೆ. ‘ದಂಡ ವಿಧಿಸುವ ಮೂಲಕ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ಜಾಗೃತಿ ಮುಡಿಸಲಾಗುತ್ತಿದೆ. ಹೆಲ್ಮೆಟ್‌ ಧರಿಸುವುದರ ಮಹತ್ವ ವಾಹನ ಚಾಲಕರಲ್ಲಿ ಮೂಡಿಬರಬೇಕು’ ಎಂದು ಅವರು ತಿಳಿಸಿದರು.

ದಂಡ ವಿಧಿಸಿದರೆ ಸಾಲದು

ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಚಾಲನಾ ಪರವಾನಗಿ (ಡಿ.ಎಲ್‌) ಅಮಾನತುಪಡಿಸಿದರೆ ಸಾಲದು. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅವರ ದಂಡ ಕಟ್ಟುವವರೆಗೂ ಅವರ ಸೇವೆಯನ್ನು ಬ್ಲಾಕ್ ಮಾಡಬೇಕು. ಅಲ್ಲದೇ ಇ–ಕೆವೈಸಿ ತರಹ ವಾಹನಗಳಿಗೂ ಕೆವೈಸಿ ಮಾಡಬೇಕು. ಇ–ಪರಿವಾಹನ್‌ ಆ್ಯಪ್‌ನಲ್ಲಿ ವಾಯುಮಾಲಿನ್ಯ ತಪಾಸಣೆಯ ಪತ್ರ ಸಿಗುತ್ತಿಲ್ಲ. ಇದು ಸಿಗುವ ಹಾಗೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ
ಎಂ.ಜಿ.ಶ್ರೀಕಾಂತ್ ಒತ್ತಾಯಿಸಿದರು.

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ ಹಲವು ಶಾಲಾ–ಕಾಲೇಜುಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
–ಸಿ.ಬಿ. ರಿಷ್ಯಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪೂರಕ ಮಾಹಿತಿ: ಇನಾಯತ್ ಉಲ್ಲಾ ಟಿ., ಎನ್‌.ಕೆ. ಆಂಜನೇಯ, ಎಚ್‌.ವಿ. ನಟರಾಜ್‌,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT