ಶನಿವಾರ, ಡಿಸೆಂಬರ್ 14, 2019
20 °C

ವಶಪಡಿಸಿಕೊಂಡ ಅಕ್ರಮ ಮರಳು ಕಾಮಗಾರಿಗೆ ಬಳಸಿ: ಬೀಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಕ್ರಮವಾಗಿ ಶೇಖರಿಸುವ ಮರಳನ್ನು ವಶಪಡೆಸಿಕೊಳ್ಳಬೇಕು. ಪಿಡಬ್ಲ್ಯುಡಿ ಮೂಲಕ ಅವಶ್ಯ ಇರುವ ಸರ್ಕಾರಿ ಕಟ್ಟಡ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಅಕ್ರಮ ಮರುಳುಗಾರಿಕೆ ತಡೆಯುವಿಕೆ ಕುರಿತು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನದಿ ದಂಡೆಯ ಗ್ರಾಮದ ರೈತರು ಮತ್ತು ಜನರು ಅಕ್ರಮವಾಗಿ ಚಕ್ಕಡಿಗಳ ಮೂಲಕ ಮರುಳ ಶೇಖರಿಸುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಜನರಿಗೆ ತೊಂದರೆಯಾಗದಂತೆ ಮರಳನ್ನು ವಶಪಡಿಸಿಕೊಂಡು ತಾಲ್ಲೂಕು ಮರುಳು ಸಂಗ್ರಹಣಾ ಕೇಂದ್ರದಲ್ಲಿ ಶೇಖರಿಸಿಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 11 ಚೇಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ನದಿ ತೀರದ ಗ್ರಾಮಗಳಲ್ಲಿ ಹೆಚ್ಚಿನ ಚೆಕ್‌ಪೊಸ್ಟ್‌ಗಳನ್ನು ಪ್ರಾರಂಭಿಸಬೇಕು. ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ, ಬಿದರಕಟ್ಟಿ, ಗೋವಿನಕೋವಿ, ಬೀರಗೊಂಡನಹಳ್ಳಿಗಳಲ್ಲಿ ಸ್ಥಳೀಯರು ಜನರು ಚಕ್ಕಡಿಗಳ ಮೂಲಕ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಕುರಿತು ತಾಲ್ಲೂಕಿನ ತಹಶೀಲ್ದಾರ್‌ ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾನೂನು ರೀತಿ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಗ್ರಾಮಂತರ ಡಿವೈಎಸ್‌ಪಿ ಗಂಗಲ್, ಜಿಲ್ಲೆಯಲ್ಲಿರುವ ಎಲ್ಲಾ ಚೆಕ್‌ಪೋಸ್ಟ್‌ಗಳ ಬಗ್ಗೆ ಮಾಹಿತಿ ನೀಡಿದರು. ಚೆಕ್‌ಪೋಸ್ಟ್‌ಗಳನ್ನು ಪ್ರಾರಂಭಿಸಬೇಕಾದ ಸ್ಥಳಗಳ ವಿವರ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ‘ಪೊಲೀಸರು ಕಷ್ಟಪಟ್ಟು ಮರಳನ್ನು ಜಪ್ತಿ ಮಾಡುತ್ತಿದ್ದಾರೆ. ಆದರೆ ಅದರ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಆ ಬಗ್ಗೆ ಪೊಲೀಸರಿಗೆ ಮಾಹಿತಿಯೂ ಸಿಗುತ್ತಿಲ್ಲ’ ಎಂದರು.

ಹೊನ್ನಾಳಿ ತಾಲ್ಲೂಕಿನಲ್ಲಿ 5 ವರ್ಷಗಳ ಹಿಂದೆ 920 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡು, ಹೊನ್ನಾಳಿ ಎ.ಪಿ.ಎಂ.ಸಿ ಯಾರ್ಡ್‌ನಲ್ಲಿ ಶೇಖರಿಸಿಡಲಾಗಿದೆ. ಆ ಮರಳನ್ನು ಯಾವುದೇ ಸರ್ಕಾರಿ ಇಲಾಖೆಯವರು ಬಳಸಿಕೊಂಡಿಲ್ಲ ಎಂದು ಹೊನ್ನಾಳಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ವಶಪಡಿಸಿಕೊಂಡಿರುವ ಮರಳನ್ನು ಸರ್ಕಾರಿ ಇಲಾಖೆಗಳ ಕಾಮಗಾರಿಗಳಿಗೆ ಬಳಸಲು ಆಗದಿದ್ದರೆ ಎಸ್‌ಆರ್ ಕಾಯ್ದೆ ಅನ್ವಯ ಅದೇ ದರದಲ್ಲಿ ಸಾರ್ವಜನಿಕರಿಗೆ ನೀಡಲು ಯೋಚಿಸಬೇಕು ಎಂದು ಸಲಹೆ ನೀಡಿದರು.

ನದಿ ತೀರದಲ್ಲಿರುವ ಗ್ರಾಮಗಳ ಹೆಸರು, ಗ್ರಾಮದಲ್ಲಿ ವಾಸಿಸುವ ಕುಟುಂಬಗಳ ಸಂಖ್ಯೆ, ವಸತಿ ಸಹಿತ, ವಸತಿ ರಹಿತ ಕುಟುಂಬಗಳು, ಕಾಮಗಾರಿ ನಡೆಯುತ್ತಿರುವ ಮನೆಗಳ ಸಂಖ್ಯೆ ಮತ್ತು ಊರಿನಲ್ಲಿರುವ ಚಕ್ಕಡಿ ಬಂಡಿಗಳ ಸಂಖ್ಯೆ ಹಾಗೂ ಅವುಗಳನ್ನು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗೆ ಬಳಸುತ್ತಿರುವ ಬಗ್ಗೆ ಪಟ್ಟಿಯನ್ನು ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರೂ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು