ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿಯ ಮನವೊಲಿಸಿ ಲಸಿಕೆ ಹಾಕಿ: ಜಿ.ಪಂ. ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್

Last Updated 20 ಫೆಬ್ರುವರಿ 2021, 4:00 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಆಸಕ್ತಿ ವಹಿಸಿ, ಆರೋಗ್ಯ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಕರ್ತರಾಗಿರುವ ಸಿಬ್ಬಂದಿಯ ಮನವೊಲಿಸಿ ಕೊರೊನಾ ಲಸಿಕೆ ಹಾಕಿಸುವ ಮೂಲಕ ನಿಗದಿತ ಗುರಿ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್ ಲಸಿಕೆ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.

ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಮೊದಲನೇ ಡೋಸ್‍ಗೆ ಫೆ.25 ಕಡೆಯ ದಿನವಾಗಿದೆ ಹಾಗೂ ಫ್ರಂಟ್‍ಲೈನ್ ವರ್ಕರ್ಸ್‌ಗೆ(ಪೋಲಿಸ್, ಕಂದಾಯ, ನಗರ ಸ್ಥಳೀಯ ಸಂಸ್ಥೆಗಳು, ಇತರೆ) ಮಾರ್ಚ್ 6 ಕಡೆಯ ದಿನ. ಅದರೊಳಗೆ ನೋಂದಾಯಿಸಿಕೊಂಡ ಎಲ್ಲರಿಗೆ ಲಸಿಕೆ ನೀಡುವ ಕೆಲಸ ಆಗಬೇಕು ಎಂದರು.

ಲಸಿಕೆ ನೀಡುವುದರಲ್ಲಿ ರಾಜ್ಯದಲ್ಲಿ ಜಿಲ್ಲೆ 13 ನೇ ಸ್ಥಾನದಲ್ಲಿದೆ. ಒಟ್ಟು 18,920 ಜನರು ನೋಂದಾಯಿಸಿಕೊಂಡಿದ್ದು, 10,047 ಮೊದಲನೇ ಡೋಸ್, 1590 ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಭಾಗಶಃ ಲಸಿಕೆ (1ನೇ ಡೋಸ್) ಶೇ 53.1 ಆಗಿದೆ. ಮೊದಲನೇ ಹಂತದ ನೋಂದಣಿಯಲ್ಲಿ ಆಗಿರುವ ನಕಲುಗಳನ್ನು ರದ್ದುಪಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.

ಹೋಂಗಾರ್ಡ್ಸ್‌ ಶೇ 14.8, ಪೊಲೀಸ್ ಶೇ 38.8, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ 22 ಮತ್ತು ಕಂದಾಯ ಇಲಾಖೆಯಲ್ಲಿ ಶೇ 12.6 ಪ್ರಗತಿ ಆಗಿದೆ. ಬಾಪೂಜಿ ಮತ್ತು ಎಸ್‍ಎಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರಗತಿ ಕಡಿಮೆ ಇದೆ ಎಂದು ತಿಳಿಸಿದರು.

ಬಾಪೂಜಿ ಸಂಸ್ಥೆಯಿಂದ ನೋಂದಾಯಿಸಲಾದ 3 ಸಾವಿರ ಸಂಖ್ಯೆಯಲ್ಲಿ 600 ವಿದ್ಯಾರ್ಥಿಗಳಿದ್ದಾರೆ. ಈಗ ಪರೀಕ್ಷೆ ನಡೆಯುತ್ತಿರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳು ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ಇನ್ನುಳಿದಂತೆ 300 ಜನ ಆಸಕ್ತಿ ಹೊಂದದ್ದವರ ಹೆಸರು ಪೋರ್ಟಲ್‍ನಲ್ಲಿ ಬಂದಿಲ್ಲ. ಜೊತೆಗೆ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸುತ್ತಿವೆ. ಇದನ್ನು ಸರಿಪಡಿಸಬೇಕು ಎಂದು ಬಾಪೂಜಿ ಮೆಡಿಕಲ್ ಕಾಲೇಜಿನ ಡಾ.ಬಾಲು ಸಲಹೆ ನೀಡಿದರು. ಎಸ್‍ಎಸ್ ಮೆಡಿಕಲ್ ಕಾಲೇಜಿನ ಡಾ.ಅಶ್ವಿನ್ ಕೂಡ ಅದೇ ಸಮಸ್ಯೆ ತಿಳಿಸಿದರು.

ತೀವ್ರತರ ಮಿಷನ್ ಇಂದ್ರಧನುಷ್ 3.0 : ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕಿಸುವ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಫೆಬ್ರವರಿ ಮತ್ತು ಮಾರ್ಚ್ ಮಾಹೆಯ 22, 23, 24 ಮತ್ತು 26 ರಂದು ಏರ್ಪಡಿಸಲಾಗಿದ್ದು ಈ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಿಇಒ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಒ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಡಿಎಚ್‍ಒ ಡಾ.ನಾಗರಾಜ್,ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ.ಜಯಪ್ರಕಾಶ್, ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ ಅವರು ತೀವ್ರತರವಾದ ಮಿಷನ್ ಇಂದ್ರಧನುಷ್ 3.0 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.

ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಗಂಗಾಧರ್, ಡಾ.ನಟರಾಜ್, ಡಾ.ರೇಣುಕಾರಾಧ್ಯ, ಡಾ.ಮುರಳೀಧರ, ನಗರಾಭಿವೃದ್ಧಿ ಕೋಶದ ಎಇಇ ವಂಸತಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ವಿಜಯಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ವೆಂಕಟೇಶ್, ಡಾ.ಪ್ರಭು, ಡಾ.ಚಂದ್ರಮೋಹನ್, ಡಾ.ಕೆಂಚಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT