ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್ ವೇಳೆಗೆ ಎಲ್ಲಾ ವಯೋಮಾನದವರಿಗೂ ಲಸಿಕೆ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಆರೋಗ್ಯ ಸಚಿವ ಡಾ.ಕೆ. ಸುಧಾಕರ್
Last Updated 22 ಮೇ 2021, 4:02 IST
ಅಕ್ಷರ ಗಾತ್ರ

ದಾವಣಗೆರೆ: ಡಿಸೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಎಲ್ಲಾ ವಯೋಮಾನದವರಿಗೂ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ‘ರಾಜ್ಯದಲ್ಲಿ ಎಲ್ಲಿಯೂ ಆಕ್ಸಿಜನ್‌ ಕೊರತೆ ಇಲ್ಲ. ರೆಮ್‌ಡಿಸಿವಿರ್ ಪ್ರತಿ ಜಿಲ್ಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿವೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ನನ್ನೊಂದಿಗೆ ಮಾತನಾಡಿದ್ದು, ಇದುವರೆಗೆ ಅವರು ರೆಮ್‌ಡಿಸಿವಿರ್‌ನ 10 ಲಕ್ಷ ವಯಲ್‌ಗಳನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದಾರೆ’ ಎಂದರು.

ಪ್ರಾರಂಭದ ದಿನಗಳಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿದ್ದ ಬೆಂಗಳೂರು ಮಹಾನಗರ ಹಾಗೂ ಜಿಲ್ಲೆಗಳಲ್ಲಿ ಈಗ ಸೋಂಕು ಇಳಿಮುಖವಾಗಿದೆ. ಶೇ 47ರಷ್ಟಿದ್ದ ಅದರ ಪ್ರಮಾಣ ಶೇ 23ರಿಂದ 24ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದರು.

ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆಯೇ, ಜನರು ಜಾಗೃತರಾಗಿ ನಿಯಮಗಳ ಪಾಲನೆ ಮಾಡುತ್ತಿದ್ದಾರೆಯೇ ಎಂಬುದನ್ನು ಇನ್ನೂ ಕೆಲವು ದಿನ ಕಾದು ನೋಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಔಷಧಗಳ ಕೊರತೆ: ‘ಕಪ್ಪು ಶಿಲೀಂಧ್ರ ಸೋಂಕು ಅಥವಾ ಮ್ಯೂಕರ್ ಮೈಕೊಸಿಸ್ ಚಿಕಿತ್ಸೆಗೆ ಔಷಧಗಳ ಕೊರತೆ ಇದ್ದು, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಇದಕ್ಕಾಗಿ ಶತಪ್ರಯತ್ನ ಮಾಡುತ್ತಿದ್ದಾರೆ. ಕೆಲವು ಕಂಪನಿಗಳ ಜತೆಗೆ ಮಾತನಾಡಿ ಔಷಧಗಳನ್ನು ಸರಬರಾಜು ಮಾಡುವ ಭರವಸೆ ನೀಡಿದ್ದಾರೆ’ ಎಂದು
ತಿಳಿಸಿದರು.

2150 ವೈದ್ಯರ ನೇಮಕ: ರಾಜ್ಯದಲ್ಲಿ 2150 ವೈದ್ಯರು, 780 ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಅವರಿಗೆ ಸ್ಥಳ ನಿಯುಕ್ತಿ ಆದೇಶ ಆಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT