ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಠಕ್ಕಾಗಿ ದುಡಿಯುವವರಿಗೆ ಮಾತ್ರ ಆಶೀರ್ವಾದ: ವಚನಾನಂದ ಸ್ವಾಮೀಜಿ

ವಿವಿಧ ಘಟಕಗಳಿಗೆ ನೂತನ ಸದಸ್ಯರ ಪದಗ್ರಹಣ ಸಮಾರಂಭ
Last Updated 5 ಜನವರಿ 2020, 12:48 IST
ಅಕ್ಷರ ಗಾತ್ರ

ದಾವಣಗೆರೆ: ‘ಸಮಾಜಕ್ಕಾಗಿ, ಪೀಠಕ್ಕಾಗಿ ದುಡಿಯುವವರಿಗೆ ಮಾತ್ರ ಆಶೀರ್ವಾದ ಮಾಡುತ್ತೇನೆ. ಕೇವಲ ಭರವಸೆಗಳನ್ನು ಕೊಟ್ಟು, ಅಭಿವೃದ್ಧಿ ಕೆಲಸಗಳನ್ನು ಮಾಡದವರಿಗೆ ಆಶೀರ್ವಾದ ಮಾಡುವುದಿಲ್ಲ’ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಎಚ್ಚರಿಸಿದರು.

ನಗರದ ರೇಣುಕಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ದಾವಣಗೆರೆ ಜಿಲ್ಲಾ ಘಟಕ ಹಾಗೂ ವಿವಿಧ ಘಟಕಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹೆಸರಿಗಾಗಿ, ಪದನಿಮಿತ್ತ ಪದಾಧಿಕಾರಿಗಳಾಗಬೇಡಿ, ಅಭಿವೃದ್ಧಿಗಾಗಿ ಸಮಾಜದ ಹಿತಕ್ಕಾಗಿ ದುಡಿಯುವವರಾಗಿ. ಪೀಠ ಆರಂಭಗೊಂಡು 12 ವರ್ಷಗಳಾಗಿವೆ. ಅದು ಸಬಲವಾಗಿ ಅಭಿವೃದ್ಧಿ ಹೊಂದಲು ಇನ್ನೂ 12 ವರ್ಷಗಳು ಬೇಕು. ಈ ನಿಟ್ಟಿನಲ್ಲಿ ನೀವು ಪೀಠಕ್ಕಾಗಿ, ಸಮಾಜಕ್ಕಾಗಿ ಏನು ಮಾಡಬೇಕು, ಮುಂದಿನ ಪೀಳಿಗೆಗೆ ಏನು ಕೊಡವಿರಿ ಎಂಬುದನ್ನು ಆಲೋಚಿಸಿ ಅಭಿವೃದ್ಧಿಗಾಗಿ ಈಗಿನಿಂದಲೇ ಶ್ರಮಿಸಬೇಕಾದ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ’ ಎಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

‘ಪಂಚಮಸಾಲಿ ಪೀಠ ಜಾಗೃತವಾಗಿದೆ. ಇದನ್ನು ಇನ್ನೂ ಗಟ್ಟಿಗೊಳಿಸಬೇಕಿದೆ. ಸರ್ಕಾರ ರಚಿಸುವಷ್ಟು ಸಂಖ್ಯಾಬಲ ನಮ್ಮಲಿದೆ. ಮಠದ ಅಭಿವೃದ್ಧಿಗಾಗಿ ಹಿಂದಿನ ಯಾವ ಸರ್ಕಾರವೂ ನೆರವು ನೀಡಿಲ್ಲ. ಸದ್ಯ ಮಠದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ರಸ್ತೆ ಕಾಮಗಾರಿ ನಡೆಯುತ್ತಿದೆ. 10 ಲಕ್ಷ ಲೀಟರ್‌ ಸಿಹಿ ನೀರಿನ ವ್ಯವಸ್ಥೆ ಆಗಲಿದೆ’ ಎಂದು ತಿಳಿಸಿದರು.

‘14, 15ಕ್ಕೆ ಹರ ಜಾತ್ರೆ: ಯಶಸ್ವಿಗೊಳಿಸಲು ಮನವಿ

‘ಜ.14, 15ರಂದು ಹರ ಜಾತ್ರೆ ನಡೆಯಲಿದೆ. ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಕಹಿಯನ್ನು ಕಳೆದು ಸಿಹಿಯನ್ನು ಸವಿಯುವ ಸಮಯ. ಹಾಗಾಗಿ, ಸಂಕ್ರಾಂತಿಯಂದೇ ಈ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ. ಇದು ಜಾತ್ಯತೀತ, ಬೇರೆ ಸಮುದಾಯಗಳನ್ನು ಪ್ರೀತಿಸುವ ಜಾತ್ರೆಯಾಗಬೇಕೆಂಬುದು ನನ್ನ ಕನಸು’ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

‘ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸ್ಥಾಪನೆಯಾಗಿ 25 ವರ್ಷಗಳು ಕಳೆದ ಸವಿನೆನಪಿಗಾಗಿ ‘ಬೆಳ್ಳಿಬೆಡಗು’ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಸ್ಥಾಪನೆಯಾಗಿ 12 ವರ್ಷಗಳು ಕಳೆದಿವೆ. ಈ ನಿಮಿತ್ತ ‘ದ್ವಾದಶೋತ್ಸವ’, ನಾನು ಪೀಠಾಧ್ಯಕ್ಷನಾಗಿ ಎರಡು ವರ್ಷಗಳು ಸಂದಿವೆ. ಹಾಗಾಗಿ, ‘ಎರಡನೇ ವಾರ್ಷಿಕೋತ್ಸವ’, ಹಾಗೂ ಸಮಾಜದ ಮಹಾನ್‌ ಶರಣೆ ಅಕ್ಕಮಹಾದೇವಿ ಸ್ಮರಣೆಗಾಗಿ ‘ಅಕ್ಕಮಹಾದೇವಿ ವಚನ ವಿಜಯೋತ್ಸವ’ ಕಾರ್ಯಕ್ರಮಗಳು ಎಕಕಾಲದಲ್ಲಿ ನಡೆಯಲಿವೆ’ ಎಂದು ತಿಳಿಸಿದರು.

‘ಕಾರ್ಯಕ್ರಮದ ಉದ್ಘಾಟನೆಯನ್ನು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನೆರವೇರಿಸಲಿದ್ದು, ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ಮುರುಗೇಶ್‌ ನಿರಾಣಿ, ಬಸನಗೌಡ ಪಾಟೀಲ್‌ ಯತ್ನಾಳ, ಸ್ಥಳೀಯ ರಾಜಕಾರಣಿಗಳು, ಮುಂತಾದವರು ಭಾಗವಹಿಸಲಿದ್ದಾರೆ. ಹಾಗಾಗಿ, ಬೃಹತ್‌ ಮಟ್ಟದಲ್ಲಿ ನಡೆಯುವ ಈ ಜಾತ್ರೆಗೆ ಬಂಧು ಬಳಗದವರನ್ನೆಲ್ಲ ಕರೆತಂದು ಯಶಸ್ವಿಗೊಳಿಸಬೇಕು’ ಎಂದು ಸ್ವಾಮೀಜಿ ಮನವಿ ಮಾಡಿದರು.

ಪಂಚಮಸಾಲಿ ಸಮಾಜದ ಅಧ್ಯಕ್ಷ ಬಿ.ಸಿ. ಉಮಾಪತಿ, ‘2001ರಲ್ಲಿ ಸಂಘಟನೆ ಆರಂಭಿಸಲು ಮುಂದಾದಾಗ ಕೇವಲ ಹನ್ನೇರಡು ಜನ ಇದ್ದರು. ಆದರೆ, ಈಗ 85 ಲಕ್ಷ ಜನ ಇದ್ದಾರೆ. ಸಮಾಜದಿಂದ ಈ ತನಕ 1,036 ಸಾಮೂಹಿಕ ವಿವಾಹ, 3,800 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಸಂಘಟನೆ ಕೊರತೆಯಿಂದಾಗಿ ಸಮಾಜದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಲೇಬೇಕು’ ಎಂದರು.

‘ರಾಜಕಾರಣಿಗಳು ನಮ್ಮನ್ನು ಬೇಕಾದಾಗ ಬಳಸಿಕೊಂಡರೇ ವಿನಃ ಸಮಾಜದ ಏಳ್ಗೆಗಾಗಿ ದುಡಿಯಲಿಲ್ಲ. ಪಂಚಮಸಾಲಿ ಪೀಠ ಸ್ಥಾಪಿಸುವಲ್ಲಿ ಯಾವ ಸರ್ಕಾರವೂ ನೆರವಾಗಿಲ್ಲ. ನಾವು ಬಹುಸಂಖ್ಯಾತರಾಗಿದ್ದರೂ ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದೇವೆ. ನಾವು ಅಧಿಕಾರ ಹಿಡಿಯಬೇಕೆಂದರೆ ಪಕ್ಷಾತೀತವಾಗಿ ಸಮಾಜವನ್ನು ಪ್ರತಿನಿಧಿಸುವ ರಾಜಕಾರಣಿಗಳಿಗೆ ಬೆಂಬಲ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಕಾಶೀನಾಥ್ ಸ್ವಾಗತಿಸಿದರು. ಬಸವರಾಜ ಉಚ್ಚಂಗಿದುರ್ಗ ನಿರೂಪಿಸಿದರು. ಮಂಜುನಾಥ್ ಪುರವಂತರ್‌ ವಂದಿಸಿದರು.

ಎಸ್.‌ಕಾಶೀನಾಥ್, ಸುಶೀಲಮ್ಮ ಕೆಂಚಿಕೆರೆ, ರಶ್ಮಿ ಕುಂಕೋದ್, ವಾಣಿ ಶಿವಣ್ಣ, ಬಾದಾಮಿ ಕರಿಬಸಪ್ಪ, ಪೃಥ್ವಿರಾಜ್ ಬಾದಾಮಿ, ಅಂದನೂರು ಮುರುಗೇಶ್, ಸತೀಶ್ ಮುತ್ತೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT