ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜವೇ ಆಸ್ತಿಯೆಂದು ಭಾವಿಸಿದ್ದ ವಾಜಪೇಯಿ’

ಬಿಜೆಪಿ ಯುವ ಮೋರ್ಚಾದಿಂದ ಶ್ರದ್ಧಾಂಜಲಿ ಸಭೆ
Last Updated 17 ಆಗಸ್ಟ್ 2018, 17:05 IST
ಅಕ್ಷರ ಗಾತ್ರ

ದಾವಣಗೆರೆ: ‘ಸರ್ವ ಜನಾಂಗದ ಪ್ರೀತಿ– ವಿಶ್ವಾಸಕ್ಕೆ ಪಾತ್ರರಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಸಮಾಜವೇ ತಮ್ಮ ಆಸ್ತಿ ಎಂದು ಭಾವಿಸಿದ್ದರು’ ಎಂದು ಬಿಜೆಪಿ ಮುಖಂಡ ಎಲ್‌. ಬಸವರಾಜ್‌ ತಿಳಿಸಿದರು.

ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಚರ್ಚ್‌ ರಸ್ತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಟಲ್‌ ಬಿಹಾರಿ ವಾಜಪೇಯಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.

‘ವಾಜಪೇಯಿ ತಮಗಾಗಿ ಆಸ್ತಿಯನ್ನು ಮಾಡಲಿಲ್ಲ. ಅವರೊಬ್ಬ ದಕ್ಷ ಆಡಳಿತಗಾರರಾಗಿದ್ದರು. ಎಲ್ಲಾ ಜನಾಂಗಕ್ಕೂ ಬೇಕಾಗಿದ್ದ ವ್ಯಕ್ತಿಯಾಗಿದ್ದರು. 10 ಬಾರಿ ಸಂಸದರಾಗಿ ದೇಶ ಸೇವೆ ಮಾಡಿದ್ದರು’ ಎಂದು ಸ್ಮರಿಸಿದರು.

‘ಒಂದು ಪಕ್ಷದ ಬಲದಿಂದ ಆಡಳಿತ ನಡೆಸುವುದು ಕಷ್ಟವಾಗಿರುವ ಇಂದಿನ ದಿನಮಾನದಲ್ಲಿ ಅವರು 24 ಪಕ್ಷಗಳನ್ನು ಕಟ್ಟಿಕೊಂಡು ಸಮರ್ಥವಾಗಿ ಆಡಳಿತ ನಡೆಸಿದ್ದರು. ಅವರ ನಿಧನದಿಂದ ಬರೀ ಬಿಜೆಪಿಗಲ್ಲ; ಬದಲಾಗಿ ಇಡೀ ದೇಶಕ್ಕೇ ಹಾನಿಯಾಗಿದೆ. ಅವರು ಇಂದು ಭೌತಿಕವಾಗಿ ನಮ್ಮ ಜೊತೆ ಇಲ್ಲದಿರಬಹುದು. ಆದರೆ, ಅವರ ವಿಚಾರಧಾರೆಗಳು ಇಂದಿಗೂ ನಮ್ಮ ಜೊತೆಗೆ ಇದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಪಿ.ಸಿ. ಮಹಾಬಲೇಶ್ವರ, ‘ಸಾಮಾನ್ಯ ಶಿಕ್ಷಕರ ಮಗನಾಗಿದ್ದ ವಾಜಪೇಯಿ ಮೂರು ಬಾರಿ ಪ್ರಧಾನಿಯಾದರು. ಕಾಂಗ್ರೆಸ್ಸೇತರ ಸರ್ಕಾರವನ್ನು ಪೂರ್ಣಾವಧಿಗೆ ನಡೆಸಿದ ಮೊದಲ ಪ್ರಧಾನಿ ಎಂಬ ಗರಿಮೆ ಅವರಿಗೆ ಸಲ್ಲುತ್ತದೆ. ಅವರು ಮತ್ತೊಮ್ಮೆ ಪ್ರಧಾನಿಯಾಗಿದ್ದರೆ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದರು’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ. ಶ್ರೀನಿವಾಸ್‌ ನಿರೂಪಿಸಿದರು. ಮೊಂಬತ್ತಿ ಬೆಳಗಿ ಮೌನಾಚರಣೆ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನೀರಾವರಿ ತಜ್ಞ ಪ್ರೊ. ನರಸಿಂಹಪ್ಪ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಜಯಪ್ರಕಾಶ್‌ ಅಂಬರಕರ್‌, ಅಣಬೇರು ಶಿವಪ್ರಕಾಶ್‌, ಗೌತಮ್‌ ಜೈನ್‌, ಎಸ್‌.ಸಿ. ಜಯಮ್ಮ, ನಿರಂಜನ್‌, ವಿಜಯ್‌ ಸಾವಂತ್‌, ರಾಜು ನೀಲಗುಂದ, ಧನುಷ್‌, ಟಿಂಕರ್‌ ಮಂಜಣ್ಣ ಅವರೂ ಹಾಜರಿದ್ದರು.

ಸುವರ್ಣ ಕರ್ನಾಟಕ ವೇದಿಕೆ: ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ಸಂಜೆ ಸುವರ್ಣ ಕರ್ನಾಟಕ ವೇದಿಕೆಯ ಕಾರ್ಯಕರ್ತರು ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ವಾಜಪೇಯಿ ಅವರ ಬೃಹತ್‌ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸುವ ಮೂಲಕ ಗೌರವ ಸಲ್ಲಿಸಲಾಯಿತು. ವೇದಿಕೆಯ ಮುಖಂಡರಾದ ಸಂತೋಷ ಕುಮಾರ, ಮಹಾಂತೇಶ ವಿ. ಹೊನ್ನರೊಟ್ಟಿ, ಪರಶುರಾಮ, ಶಿವಕುಮಾರ ಅವರೂ ಹಾಜರಿದ್ದರು.

ನಗರದ ವಿವಿಧೆಡೆ ಹಲವು ಸಂಘಟನೆಗಳು, ಅಭಿಮಾನಿಗಳು ವಾಜಪೇಯಿ ಅವರ ಭಾವಚಿತ್ರವುಳ್ಳ ಬ್ಯಾನರ್‌, ಫ್ಲೆಕ್ಸ್‌ಗಳನ್ನು ಹಾಕಿ ಶ್ರದ್ಧಾಂಜಲಿ ಸಲ್ಲಿಸಿರುವುದು ಕಂಡು ಬಂತು.

ಕಾಂಗ್ರೆಸ್‌ ಕಾರ್ಮಿಕ ವಿಭಾಗ: ಕೆ.ಪಿ.ಸಿ.ಸಿ ಕಾರ್ಯದರ್ಶಿ ಡಿ. ಬಸವರಾಜ್‌ ಅವರ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ವಿಭಾಗದಿಂದ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಜ್ಯ ಕಾಂಗ್ರೆಸ್‌ ಕಾರ್ಮಿಕ ಘಟಕದ ಕಾರ್ಯದರ್ಶಿ ಕೆ.ಜಿ. ರಹಮತ್‌ ಉಲ್ಲಾ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಅಲ್ಲಾವುಲಿ ಘಾಜಿಖಾನ್, ಡಿ. ಬುಡ್ಡಪ್ಪ, ಕೋಳಿ ಇಬ್ರಾಹಿಂ ಸಾಬ್, ಡಿ. ಶಿವಕುಮಾರ್, ಖಾಜಿ ಖಲೀಲ್, ಜಿಯಾವುಲ್ಲಾ ಖಾನ್, ಎಂ. ಅಶೋಕ್‌ಕುಮಾರ್‌, ಚನ್ನಪ್ಪ ಯಲ್ಲಪ್ಪ, ಗೋವಿಂದ, ಅಶ್ರಫ್ಅಲಿ, ರಮೇಶ್, ಗೌಸ್‌ಸಾಬ್‌, ಅಬ್ದುಲ್ ಜಬ್ಬಾರ್, ಭೀಮೇಶ್ ಎಲ್., ಎಂ.ಕೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಮಿಕ ಘಟಕದ ಅಧ್ಯಕ್ಷ ಎಂ.ಕೆ. ಲಿಯಾಖತ್ಅಲಿ, ಪರಮೇಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT