ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನಹಳ್ಳಿಯಲ್ಲಿ ಫೆ. 8, 9ರಂದು ವಾಲ್ಮೀಕಿ ಜಾತ್ರೆ

ಅದ್ಧೂರಿಯಾಗಿ ವಾಲ್ಮೀಕಿ ಜಾತ್ರೆ ಆಚರಣೆ: ಎಸ್.ವಿ. ರಾಮಚಂದ್ರ
Last Updated 2 ಫೆಬ್ರುವರಿ 2023, 4:59 IST
ಅಕ್ಷರ ಗಾತ್ರ

ಹರಿಹರ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9ರಂದು ನಡೆಯುವ 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಗುರುಪೀಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ಸಂಘಟನೆ ಮತ್ತು ಜಾಗೃತಿಗಾಗಿ ಪ್ರತಿ ವರ್ಷ ಜಾತ್ರೆ ಆಚರಿಸುತ್ತಿದ್ದು, ಎರಡು ವರ್ಷ ಕೋವಿಡ್ ಕಾರಣಕ್ಕೆ ಜಾತ್ರೆ ನಡೆಸದೇ, ಸರಳವಾಗಿ ಧಾರ್ಮಿಕ ಆಚರಣೆಗಳನ್ನು ಪೂರೈಸಲಾಗಿತ್ತು. ಪ್ರಸಕ್ತ ವರ್ಷ ಪ್ರಸನ್ನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಸಲು ನಿರ್ಣಯಿಸಲಾಗಿದೆ’ ಎಂದರು.

‘ಎರಡು ದಿನಗಳ ಕಾರ್ಯಕ್ರಮದಲ್ಲಿ ಮಠದ 25ನೇ ವಾರ್ಷಿಕೋತ್ಸವ, ಲಿಂ. ಪುಣ್ಯಾನಂದಪುರಿ ಶ್ರೀಗಳ 15ನೇ ಪುಣ್ಯಾರಾಧನೆ, ಪ್ರಸನ್ನಾನಂದ ಸ್ವಾಮೀಜಿ 16ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಹಾಗೂ ನೂತನ ವಾಲ್ಮೀಕಿ ರಥದ ಲೋಕಾರ್ಪಣೆಯಾಗಲಿದೆ. ಈಗಾಗಲೇ ಶ್ರೀಗಳು ಜಾತ್ರೆ ಹಿನ್ನೆಲೆಯಲ್ಲಿ ರಾಜ್ಯದ 161 ತಾಲ್ಲೂಕುಗಳಿಗೆ ಭೇಟಿ ನೀಡಿ ಭಕ್ತರನ್ನು ಆಹ್ವಾನಿಸಿದ್ದಾರೆ. 4 ರಿಂದ 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

‘ಸರ್ಕಾರ ಸಮುದಾಯದ ಬಹುದೊಡ್ಡ ಬೇಡಿಕೆಯಾದ ಎಸ್‌ಟಿ ಮೀಸಲಾತಿ ಹೆಚ್ಚಿಸಿರುವುದು ಮತ್ತು ₹ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ 63 ಅಡಿ ಎತ್ತರದ ವಾಲ್ಮೀಕಿ ರಥ ಲೋಕಾರ್ಪಣೆಯಾಗುತ್ತಿರುವುದು ಈ ವರ್ಷದ ಜಾತ್ರೆಗೆ ಮತ್ತಷ್ಟು ಸಡಗರ ತಂದಿದೆ’ ಎಂದರು.

ಕಾರ್ಯಕ್ರಮದ ವಿವರ: ಫೆ. 8ರಂದು ಬೆಳಿಗ್ಗೆ 7ಕ್ಕೆ ರಾಜನಹಳ್ಳಿಯಿಂದ ಶ್ರೀಮಠದವರಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಭವ್ಯ ಮೆರವಣಿಗೆ, ನಂತರ ಮಠದ ಆವರಣದಲ್ಲಿ ವಾಲ್ಮೀಕಿ ಧ್ವಜಾರೋಹಣ, 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಜರಗಲಿದೆ. ಬೆಳಿಗ್ಗೆ 9ರಿಂದ 11.30ರವರೆಗೆ ಮಹಿಳಾ ಗೋಷ್ಠಿ ಇದೆ. ಮಧ್ಯಾಹ್ನ 12 ರಿಂದ 2.30ರವರೆಗೆ ಉದ್ಯೋಗ ಮೇಳ ನಡೆಯಲಿದೆ.

ರೈತ ಗೋಷ್ಠಿ: ಮಧ್ಯಾಹ್ನ 3ರಿಂದ 5ರ ವರೆಗೆ ರೈತ ಗೋಷ್ಠಿ, ಸಂಜೆ 6ರಿಂದ 8.30ರವರೆಗೆ ಬುಡಕಟ್ಟು ಸಾಂಸ್ಕೃತಿಕ ವೈಭವ ನಡೆಯಲಿದೆ.

ನೂತನ ರಥಕ್ಕೆ ಚಾಲನೆ: ಫೆ. 9ರಂದು ಬೆಳಿಗ್ಗೆ 9ಕ್ಕೆ ನಾಡಿನ ವಿವಿಧ ಶ್ರೀಗಳು ಮಹರ್ಷಿ ವಾಲ್ಮೀಕಿ ನೂತನ ರಥಕ್ಕೆ ಚಾಲನೆ ನೀಡುವರು.

ಜನಜಾಗೃತಿ ಜಾತ್ರೆ: ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಜಾಗೃತಿ ಜಾತ್ರಾ ಮಹೋತ್ಸವ ಉದ್ಘಾಟಿಸುವರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ‘ವಾಲ್ಮೀಕಿ ವಿಜಯ’ ಸ್ಮರಣ ಸಂಪುಟ ಬಿಡುಗಡೆ ಮಾಡುವರು. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ವಾಲ್ಮೀಕಿ ರತ್ನ ಮತ್ತು ಮದಕರಿ ನಾಯಕ ಪ್ರಶಸ್ತಿ ಪ್ರದಾನ ಮಾಡುವರು. ಪ್ರಸಕ್ತ ಸಾಲಿನ ವಾಲ್ಮೀಕಿ ರತ್ನ ಪ್ರಶಸ್ತಿಯನ್ನು ಪ್ರೊ.ರಂಗರಾಜು ವನದುರ್ಗ ಹಾಗೂ ಮದಕರಿ ನಾಯಕ ಪ್ರಶಸ್ತಿಯನ್ನು ಆನಂದ್ ಸಿಂಗ್‌ ಅವರಿಗೆ ನೀಡಲಾಗುವುದು.

‘ವಾಲ್ಮೀಕಿ ಜಾತ್ರೆ ವೈಚಾರಿಕ ಜಾತ್ರೆಯಾಗಿದ್ದು. ಐತಿಹಾಸಿಕ ಹಬ್ಬವಾಗಿ ಹೊರಹೊಮ್ಮುತ್ತಿದೆ. ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿರುವುದು ಈ ಹಬ್ಬಕ್ಕೆ ಹೆಚ್ಚಿನ ಮೆರುಗು ತಂದಿದೆ. ಫೆ. 30ರವರೆಗೆ ನಡೆಯುವ ಸಂಸತ್ ಅಧಿವೇಶನದಲ್ಲಿ ಮೀಸಲಾತಿಯ ಬಿಲ್ ಪಾಸಾಗುವ ವಿಶ್ವಾಸವಿದೆ’ ಎಂದು ಪ್ರಸನ್ನಾನಂದ ಸ್ವಾಮೀಜಿ‌ ತಿಳಿಸಿದರು.

ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಕೆ.ಪಿ. ಪಾಲಯ್ಯ, ಧರ್ಮದರ್ಶಿ ಶಾಂತಲಾ ರಾಜಣ್ಣ, ಬಿ. ವೀರಣ್ಣ, ಮುಖಂಡರಾದ ವೆಂಕಟರಮಣ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಚಂದ್ರಶೇಖರಪ್ಪ ಜಿ.ಟಿ., ಹರ್ತಿಕೋಟಿ ವೀರೇಂದ್ರಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಲಂಕೇಶ್, ಲೋಕೇಶ್ವರಪ್ಪ, ನಗರಸಭಾ ಸದಸ್ಯ ದಿನೇಶ್ ಬಾಬು, ಕೆ.ಬಿ. ಮಂಜಣ್ಣ, ಜಿಗಳಿ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT