ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನಹಳ್ಳಿ: ವಾಲ್ಮೀಕಿ ಜಾತ್ರೆ ಇಂದಿನಿಂದ

ನಾಯಕ ಸಮುದಾಯದವರ ಸಂಘಟನೆಯ ಗುರಿ
Last Updated 8 ಫೆಬ್ರುವರಿ 2023, 6:03 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಫೆ. 8 ಮತ್ತು 9ರಂದು ಆಯೋಜಿಸಿರುವ 5ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ರಾಜ್ಯದ ನಾನಾ ಮೂಲೆಗಳಿಂದ ಬರುವ ವಾಲ್ಮೀಕಿ ಸಮುದಾಯದ ಜನತೆಗೆ ಜ್ಞಾನ, ಅನ್ನ ದಾಸೋಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೋಷಿತ ವರ್ಗಕ್ಕೆ ಸೇರಿದ ಈ ಸಮುದಾಯವನ್ನು ಸಾಂಸ್ಕೃತಿಕವಾಗಿ ಎಚ್ಚರಿಸಲು, ಸಂಘಟಿತರಾಗಲು ಜಾತ್ರಾ ಮಹೋತ್ಸವವನ್ನು ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಲಾಗುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಲವು ಸಚಿವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ವಿರೋಧ ಪಕ್ಷದ ನಾಯಕರು, ನಾಡಿನ ವಿವಿಧ ಮಠಾಧೀಶರು, ಚಿಂತಕರು, ಸಾಹಿತಿ, ಲೇಖಕರು, ಚಲನಚಿತ್ರ ನಟರು ಎರಡು ದಿನಗಳ ಮಹೋತ್ಸವದಲ್ಲಿ ಭಾಗವಹಿಸುವರು.

ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದ್ದು, ಬಂದವರಿಗೆ ಅನ್ನ ದಾಸೋಹವನ್ನು 450 ಜನ ಬಾಣಸಿಗರು ಸಿದ್ಧ ಮಾಡುತ್ತಿದ್ದಾರೆ. 100 ಊಟದ ಕೌಂಟರ್‌ಗಳಿವೆ. ವೇದಿಕೆ ಮುಂಭಾಗದ ಪೆಂಡಾಲ್‌ನಲ್ಲಿ 30 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ.

ಫೆ. 8ರ ಕಾರ್ಯಕ್ರಮ: ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಫೆ. 8 ರಂದು ಬೆಳಿಗ್ಗೆ 7ಕ್ಕೆ ರಾಜನಹಳ್ಳಿ ಗ್ರಾಮದಿಂದ ಶ್ರೀಮಠದವರಗೆ ಮಹರ್ಪಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ, ನಂತರ ಮಹರ್ಷಿ ವಾಲ್ಮೀಕಿ ಧ್ವಜಾರೋಹಣ ನಡೆಯಲಿದೆ. ರಾಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಲಂಕೇಶ್ ಜಾತ್ರೆಗೆ ಚಾಲನೆ ನೀಡುವರು.

ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷ ಎಸ್.ವಿ. ರಾಮಚಂದ್ರ, ಸಂಚಾಲಕ ಕೆ.ಪಿ. ಪಾಲಯ್ಯ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ ಹಾಗೂ ಗುರುಪೀಠದ ಧರ್ಮದರ್ಶಿಗಳು
ಉಪಸ್ಥಿತರಿರುವರು. 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ನಡೆಯಲಿದೆ.

ಮಹಿಳಾ ಗೋಷ್ಠಿ: ಬೆಳಗ್ಗೆ 9 ರಿಂದ 11.30 ರವರೆಗೆ ಮಹಿಳಾ ಗೋಷ್ಠಿಯ ಉದ್ಘಾಟನೆಯನ್ನು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಾಗಾಂಬಿಕಾ ದೇವಿ ನೆರವೇರಿಸುವರು. ಧರ್ಮದರ್ಶಿ ಶಾಂತಲಾ ರಾಜಣ್ಣ ಅಧ್ಯಕ್ಷತೆ ವಹಿಸುವರು. ಮಾತೆ ಶಬರಿ ಭಾವಚಿತ್ರವನ್ನು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅನಾವರಣ ಮಾಡುವರು. ಐಪಿಎಸ್ ಅಧಿಕಾರಿ ಜಿ. ರಾಧಿಕಾ, ಎಸ್. ವರಲಕ್ಷ್ಮಿ, ಸಂಸದೆ ಜೆ. ಶಾಂತಾ ಭಾಗವಹಿಸುವರು.

ಉದ್ಯೋಗ ಮೇಳ: ಮಧ್ಯಾಹ್ನ 12 ರಿಂದ 2.30ರವರೆಗೆ ನಡೆಯುವ ಉದ್ಯೋಗ ಮೇಳವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಉದ್ಘಾಟಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಶಾಸಕರಾದ ನರಸಿಂಹ ನಾಯಕ, ರಾಜ ವೆಂಕಟಪ್ಪ ನಾಯಕ ಭಾಗವಹಿಸುವರು.

ರೈತ ಗೋಷ್ಠಿ: ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ನಡೆಯುವ ರೈತ ಗೋಷ್ಠಿಯನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಉದ್ಘಾಟಿಸುವರು. ಮಾಜಿ ಸಚಿವ ತುಕಾರಾಂ, ಸಂಸದ ರಾಜ ಅಮರೇಶ ನಾಯಕ, ಶಿವನಗೌಡ ನಾಯಕ, ಜೆ.ಎಂ. ವೀರಸಂಗಯ್ಯ, ಸೋಮಲಿಂಗಪ್ಪ, ಬಸವನಗೌಡ ದದ್ದಲ್, ಬಸವನಗೌಡ ತುರುವಿಹಾಳ್, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ. ಹನುಮಂತಪ್ಪ, ವಾದಿರಾಜ್ ಹಾಗೂ ರೈತ ಮುಖಂಡರು ಭಾಗವಹಿಸುವರು.

ಬುಡಕಟ್ಟು ಸಾಂಸ್ಕೃತಿಕ ವೈಭವ: ಸಂಜೆ 6ರಿಂದ ರಾತ್ರಿ 8.30ರವರೆಗೆ ಬುಡಕಟ್ಟು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಬುಡಕಟ್ಟು ಕಲ್ಯಾಣ ಸಚಿವ ಬಿ. ಶ್ರೀರಾಮುಲು ಉದ್ಘಾಟಿಸುವರು. ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ ಭಾಗವಹಿಸುವರು. ರಾತ್ರಿ 8.30 ರಿಂದ ಹಾಸನದ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದಿಂದ ವಾಲ್ಮೀಕಿ ವಿರಚಿತ ಸಂಪೂರ್ಣ ರಾಮಾಯಣ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

...........

63 ಅಡಿ ರಥ ವಿಶೇಷ

ಗುರುಪೀಠದ ಆವರಣದಲ್ಲಿ ಎರಡು ವರ್ಷಗಳಿಂದ ನೂತನ ರಥ ಸಿದ್ಧಗೊಳ್ಳುತ್ತಿದ್ದು, ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಫೆ. 9ರಂದು ಪ್ರಥಮ ಬಾರಿಗೆ ಭಕ್ತರು ಇದನ್ನು ಎಳೆದು ಸಂತಸ ಪಡಲಿದ್ದಾರೆ. 63 ಅಡಿ ಎತ್ತರ, 6 ಬೃಹತ್ ಚಕ್ರಗಳ ಈ ರಥದ ಸುತ್ತ ಒಂದು ಸುತ್ತು ಹಾಕಿದರೆ ರಾಮಾಯಣವನ್ನು ಓದಿದಂತಾಗುತ್ತದೆ.

ಶ್ರೀರಾಮನ ಬಾಲ್ಯದಿಂದ ಪಟ್ಟಾಭಿಷೇಕದವರೆಗಿನ ಘಟನಾವಳಿಗಳು ರಥದ ಮೇಲೆ ಚಿತ್ರರೂಪದಲ್ಲಿ ಮೂಡಿದೆ. ವಿದ್ಯುತ್ ಚಾಲಿತ ಯಂತ್ರ ಹೊಂದಿರುವ ಈ ರಥ ರಿಮೋಟ್ ಮೂಲಕ ಚಲಿಸುತ್ತದೆ. ತಂತ್ರಜ್ಞರಾದ ಬೆಂಗಳೂರಿನ ಗಿರೀಶ್, ಶಿಲ್ಪಿ ಯಲ್ಲಾಪುರದ ಸಂತೋಷ್ ಗುಡಿಗಾರ್, ಹುಬ್ಬಳ್ಳಿಯ ಸಾಲಿಮಠ ಅವರು ಸೇರಿ ರಥವನ್ನು ಎರಡು ವರ್ಷಗಳ ಅವಧಿಯಲ್ಲಿ
ಸಿದ್ಧಗೊಳಿಸಿದ್ದಾರೆ. ರಥಕ್ಕೆ ₹ 2 ಕೋಟಿ ವೆಚ್ಚವಾಗಿದೆ ಎಂದು ಗುರುಪೀಠದವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT