ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತ ಮಕ್ಕಳ ಸೇವೆಯಲ್ಲಿ ವಿಬಿಪಿ ಫೌಂಡೇಶನ್‌

ವೈಯಕ್ತಿಕ ಜೀವನವನ್ನು ಮರೆತು ಕೆಲಸ ಮಾಡುತ್ತಿರುವ ಶಿವಕುಮಾರ್ ಮೇಗಳಮನೆ ತಂಡ
Last Updated 13 ಮೇ 2022, 2:50 IST
ಅಕ್ಷರ ಗಾತ್ರ

ದಾವಣಗೆರೆ: ತಮ್ಮದಲ್ಲದ ತಪ್ಪಿಗೆ ಸೋಂಕಿತರಾಗುವ ಮಕ್ಕಳನ್ನು ಪೊರೆಯುವ ಕೆಲಸವನ್ನು ವಿಬಿಪಿ ಫೌಂಡೇಶನ್‌ ಮಾಡುತ್ತಿದೆ. ವೈಯಕ್ತಿಕ ಬದುಕನ್ನೇ ಮರೆತು ಈ ಮಕ್ಕಳನ್ನು ನೋಡಿಕೊಳ್ಳುವ ಶಿವಕುಮಾರ್ ಮೇಗಳಮನೆ ಮತ್ತು ಅವರ ಗೆಳೆಯರು ನಿಜಾರ್ಥದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಫರ್ನಿಚರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶಿವಕುಮಾರ್‌ ಅವರಿಗೆ ಕೆಲಸದ ಜತೆಗೆ ಸೇವೆ ಮಾಡಬೇಕು ಎಂದು ಅನ್ನಿಸಿದ್ದರಿಂದ ಗೆಳೆಯರ ಜತೆ ಸೇರಿ 2018ರಲ್ಲಿ ವಿಬಿಪಿ ಫೌಂಡೇಶನ್‌ ಎಂಬ ಸಂಸ್ಥೆ ಆರಂಭಿಸಿದರು. ಫರ್ಟಿಲೈಸರ್‌ ಕಂಪನಿಯಲ್ಲಿ ಮ್ಯಾನೇಜರ್‌ ಶಂಭು ಹೊಸಮನೆ, ಬೆಳ್ಳೂಡಿ ನಾಗರಾಜ್‌ ಸಹಿತ ಕೆಲವು ಗೆಳೆಯರು ಕೈ ಜೋಡಿಸಿದ್ದರು.

ಸ್ವಚ್ಛತಾ ಕಾರ್ಯಕ್ರಮ, ಗಿಡ ನೆಡುವುದು, ಜಾಗೃತಿ ಕಾರ್ಯಕ್ರಮಗಳು, ಶಾಲೆಗಳಿಗೆ ತೆರಳಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಗುರು ಕಾರುಣ್ಯ, ಮನಪರಿವರ್ತನಾ ಯಾತ್ರೆ ಹೀಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹೀಗಿರುವಾಗ ಒಂದು ದಿನ ಟಿವಿಯಲ್ಲಿ ಎಚ್‌ಐವಿ ಸೋಂಕಿತ ಮಕ್ಕಳನ್ನು ಆರೈಕೆ ಮಾಡುತ್ತಿರುವ ಸಂಸ್ಥೆಯ ಬಗ್ಗೆ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ಅದನ್ನು ನೋಡಿದ ಮೇಲೆ ಬೆಳಗಾವಿಗೆ ತೆರಳಿ ಆ ಸಂಸ್ಥೆಯವರ ಜತೆಗೆ ಮಾತನಾಡಿದಾಗ ಹೆತ್ತವರಿಂದ ಈ ಮಕ್ಕಳಿಗೆ ಸೋಂಕು ಬಂದಿರುತ್ತದೆ. ಈ ಮಕ್ಕಳಿಗೆ ಪೌಷ್ಟಿಕ ಆಹಾರ, ಸರಿಯಾದ ಆರೈಕೆ ಅಗತ್ಯ. ಆದರೆ ರಾಜ್ಯದಲ್ಲಿ ಈ ಮಕ್ಕಳಿಗಾಗಿ ಇರುವ ಸೇವಾ ಸಂಸ್ಥೆಗಳು ಎರಡು–ಮೂರಷ್ಟೇ ಇವೆ ಎಂದು ವಿವರ ಸಿಕ್ಕಿತು.

ಅದರಿಂದ ಪ್ರೇರಣೆ ಪಡೆದು 2019ರಲ್ಲಿ ವಿಬಿಪಿ ಫೌಂಡೇಶನ್‌ ಅಡಿಯಲ್ಲಿ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರವನ್ನು ಆರಂಭಿಸಿದರು. 14 ಮಕ್ಕಳನ್ನು ಆರೈಕೆ ಮಾಡುತ್ತಿದ್ದರು. ಬಾತಿ ಬಳಿ ವಿಶಾಲವಾದ ಭೂಮಿಯಲ್ಲಿ ಇದ್ದ ತಗಡು ಶೀಟಿನ ಚಾವಣಿ ಹೊಂದಿರುವ ಕಟ್ಟಡದಲ್ಲಿ ಇದ್ದುಕೊಂಡು ಮರಗಿಡಗಳ ಮಧ್ಯೆ ಪರಿಸರವನ್ನು ಆಸ್ವಾದಿಸುತ್ತಾ ಮಕ್ಕಳು ಚೆನ್ನಾಗಿ ಇದ್ದರು. ಆದರೆ ಸರ್ಕಾರದ ನಿಯಮಾವಳಿ ಪ್ರಕಾರ ಆರ್‌ಸಿಸಿ ಕಟ್ಟಡವೇ ಆಗಬೇಕು. ಆ ಕಟ್ಟಡದಲ್ಲಿ ಬೇರೆಯವರು ವಾಸಿಸಿರಬಾರದು ಎಂದು ಇಲಾಖೆ ತಿಳಿಸಿದ್ದರಿಂದ ಅನಿವಾರ್ಯವಾಗಿ ಎಂಸಿಸಿ ‘ಬಿ’ ಬ್ಲಾಕ್‌ಗೆ ದುಬಾರಿ ಬಾಡಿಗೆ ನೀಡಿ ಬಂದಿದ್ದಾರೆ.

‘ನಮ್ಮಲ್ಲಿ 14 ಮಕ್ಕಳಿದ್ದರು. ಪುಟ್ಟ ಹುಡುಗಿಯರಿಗೆ ಪ್ರತ್ಯೇಕ ಕೊಠಡಿ ಇತ್ತು. ಆದರೆ ಪ್ರತ್ಯೇಕ ಕಟ್ಟಡವೇ ಇರಬೇಕು ಎಂದು ನಿಯಮ ಮಾಡಿದ್ದರಿಂದ ಈಗ ಹುಡುಗರನ್ನಷ್ಟೇ ಆರೈಕೆ ಮಾಡುತ್ತಿದ್ದೇವೆ. ಮುಂದೆ ಹುಡುಗಿಯರಿಗೂ ಆರೈಕೆ ಕೇಂದ್ರ ತೆರೆಯಬೇಕು ಎಂಬ ಉದ್ದೇಶ ಇದೆ. ಸದ್ಯ ಏಳು ಮಕ್ಕಳಿದ್ದಾರೆ’ ಎಂದು ಶಿವಕುಮಾರ್ ಮೇಗಳಮನೆ ‘ಪ್ರಜಾವಾಣಿ’ಗೆ ವಿವರಿಸಿದರು.

ಚುರುಕಿನ ಮಕ್ಕಳಾಗಿದ್ದು, ಎಲ್ಲ ರೀತಿಯ ಪ್ರತಿಭೆಗಳಿವೆ. ಆದರೆ ತಮ್ಮದಲ್ಲದ ತಪ್ಪಿಗೆ ಸೋಂಕಿತರಾಗಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಊಟ, ಮಾತ್ರೆಗಳನ್ನು ನೀಡಬೇಕು. ಬಹುತೇಕರು ತಂದೆ ಇಲ್ಲವೇ ತಾಯಿಯನ್ನು ಸೋಂಕಿನ ಕಾರಣಕ್ಕೆ ಕಳೆದುಕೊಂಡಿರುತ್ತಾರೆ. ಇರುವವರು ಸ್ವತಃ ತಾವೇ ಸರಿಯಾಗಿ ಔಷಧ ತೆಗೆದುಕೊಳ್ಳುವುದಿಲ್ಲ. ಇನ್ನು ಮಕ್ಕಳಿಗೆ ನೀಡುತ್ತಾರಾ? ಆ ಕಾರಣದಿಂದ ಮಕ್ಕಳು ಕೂಡ ದೈಹಿಕವಾಗಿ ಸೊರಗುತ್ತಿದ್ದರು. ಆ ಮಕ್ಕಳು ನಮ್ಮ ಆರೈಕೆಗೆ ಬಂದಾಗ ಆರೋಗ್ಯವಾಗಿ ಇರುತ್ತಾರೆ. ಊರಿಗೆ ಹೋಗಿ ಒಂದುವಾರ ಇದ್ದರೂ ಮತ್ತೆ ಸಮಸ್ಯೆಯಾಗುತ್ತದೆ. ಇಲ್ಲಿಗೆ ಓಡಿ ಬರುತ್ತಾರೆ ಎಂದು ತಿಳಿಸಿದರು.

ಬಾತಿಯಲ್ಲಿ ₹ 6 ಸಾವಿರ ಬಾಡಿಗೆಗೆ ಕಟ್ಟಡ ಮತ್ತು ವಿಶಾಲವಾದ ಜಮೀನು ಸಿಕ್ಕಿತ್ತು. ಈಗ ₹ 13 ಸಾವಿರ ಬಾಡಿಗೆ ನೀಡಬೇಕು. ಮಕ್ಕಳಿಗೆ ನಿತ್ಯ ಪೌಷ್ಟಿಕ ಆಹಾರ ನೀಡಬೇಕು. ಔಷಧ ಒದಗಿಸಬೇಕು. ಶಂಭು ಹೊಸಮನೆ, ಫಕಿರೇಶ್‌ ಕುಂಕೂರು, ಮಂಜುನಾಥ ಸವಣೂರು, ನಾಗರಾಜ್‌ ಬೆಳ್ಳೂಡಿ, ಲಿಂಗನಗೌಡ್ರು, ಚೌಡಪ್ಪ, ಅಜಯ್‌, ಪ್ರಭು ಎ.ಎನ್‌., ಅಣ್ಣಪ್ಪ ಎಂ., ಅನಿಲ್‌ ಜಿ. ಗುಜ್ಜಾರ್‌ ಮುಂತಾದ ಗೆಳೆಯರ ಸಹಕಾರದಲ್ಲಿ ವೆಚ್ಚ ಭರಿಸುತ್ತಿದ್ದೇವೆ. ದಾನಿಗಳು ಸಹಾಯ ಮಾಡಿದರೆ ಇನ್ನಷ್ಟು ಮಕ್ಕಳ ಆರೈಕೆ ಮಾಡಲು ಸಾಧ್ಯ ಎಂದು ಹೇಳಿದರು.

ಸಹಾಯ ಮಾಡುವವರು: ಮೊಬೈಲ್‌ 7795794757, 9743941066 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT