ವೀರಶೈವ, ಲಿಂಗಾಯತ ಬೇರೆ ಬೇರೆ: ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯ

7
ವಚನ ಸ್ಪರ್ಧೆ ಉದ್ಘಾಟನೆ

ವೀರಶೈವ, ಲಿಂಗಾಯತ ಬೇರೆ ಬೇರೆ: ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯ

Published:
Updated:
Deccan Herald

ದಾವಣಗೆರೆ: ವೀರಶೈವ ಲಿಂಗಾಯತ ಒಂದೇ ಎಂದು ಕೆಲವರು ಹೇಳುತ್ತಾರೆ. ಆದರೆ ಇವೆರಡೂ ಬೇರೆಯಾಗಿವೆ. ಈ ಗೊಂದಲ ನಿವಾರಣೆಗೆ ವಚನಗಳ ಅಧ್ಯಯನ ಅವಶ್ಯ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯ ಪಟ್ಟರು.

ನಗರದ ದೊಡ್ಡಪೇಟೆಯ ವಿರಕ್ತಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾದ ಮಕ್ಕಳಿಗೆ ವಚನಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಪದಗಳ ಅರ್ಥವಾಗಬೇಕಾದರೆ ಸಂಪೂರ್ಣವಾದ ವಚನಗಳ ಅಧ್ಯಯನ ಮಾಡಬೇಕು. ಬಸವಣ್ಣನವರೇ ನಮ್ಮ ಧರ್ಮಗುರು ಆಗಿದ್ದಾರೆ. ಜಾಗತೀಕ ವ್ಯಕ್ತಿಯೂ ಆಗಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಸಾಮಾಜಿಕವಾಗಿ ನಾವು ಹಿಂದೂಗಳು ಆಗಿದ್ದೇವೆ. ಧರ್ಮದಲ್ಲಿ ನಾವು ಲಿಂಗಾಯತರಾಗಿದ್ದೇವೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ನಮ್ಮ ಹಕ್ಕಾಗಿದೆ ಎಂದು ಹೇಳಿದರು.

ವಚನಗಳ ಅಧ್ಯಯನ ಹಾಗೂ ಪಾಲನೆಯಿಂದ ವಿಶ್ವದಲ್ಲಿ ದೇಶ-ವಿದೇಶಗಳ ಮಧ್ಯೆ ನಡೆಯುವ ಯುದ್ಧವನ್ನು ತಡೆಗಟ್ಟಬಹುದು. ದ್ವೇಷವನ್ನು ಅಳಿಸಿ ಹಾಕಿ, ಪ್ರೀತಿ, ವಿಶ್ವಾಸವನ್ನು ಮೂಡಿಸಲು ಸಾಧ್ಯ. ನೀತಿವಂತರಾಗಿ ಬಾಳಲು ಹೇಳಿಕೊಡುತ್ತದೆ. ಮಾನಸಿಕ ನೆಮ್ಮದಿ ಬರುತ್ತದೆ. ಸಹನಾ ಶಕ್ತಿ ದೊರೆಯುತ್ತದೆ. ಜಗತ್ತಿನ ಸಮಸ್ಯೆಗಳ ನಿವಾರಣೆಗೆ ವಚನಗಳ ಪಾಲನೆಯಿಂದ ಮಾತ್ರ ಸಾಧ್ಯ ಎಂದು ನುಡಿದರು.

ಸಣ್ಣವರಿದ್ದಾಗಲೇ ಮಕ್ಕಳಿಗೆ ವಚನಗಳ ಕಂಠ ಪಾಠ ಮಾಡಿಸಿ, ಅವುಗಳ ಅರ್ಥವನ್ನು ತಿಳಿಸಬೇಕು. ಇವುಗಳಿಂದ ಉತ್ತಮ ಸಂಸ್ಕಾರ, ಸಂಸ್ಕೃತಿ ದೊರೆಯುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ, ವೈಚಾರಿಕ, ಸಮಾನತೆಯ ಮನೋಭಾವನೆ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಝಂಜರವಾಡ ಬಸವರಾಜೇಂದ್ರ ಶರಣರು ಮಾತನಾಡಿ, ‘ಇತ್ತಿಚೆಗೆ ಹೊಡಿಮಗಾ ಸಾಹಿತ್ಯ ಹೆಚ್ಚಾಗುತ್ತಿದ್ದು, ಮಕ್ಕಳು ಇಂತಹ ಸಾಹಿತ್ಯಕ್ಕೆ ಹೆಚ್ಚು ಆಸಕ್ತಿದಾಯಕರಾಗುತ್ತಿದ್ದಾರೆ. ಇದು ಹೋಗಬೇಕು. ಹೊಡಿಮಗಾ ಎಂಬ ಬದಲು ಹಿಡಿಮಗಾ ಜಯದೇವರ ಪಾದವ ಎಂಬಂತಾಗಬೇಕು’ ಎಂದು ಸಲಹೆ ನೀಡಿದರು.

ವಚನ ಸಾಹಿತ್ಯದಲ್ಲಿ ಎಲ್ಲವೂ ಅಡಗಿದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ಸರಳವಾಗಿ ತಿಳಿಸಲಾಗಿದೆ. ಬಸವಣ್ಣನೇ ಸಾಹಿತ್ಯದ ಹೀರೋ ಆಗಿದ್ದಾರೆ. ಬಸವಣ್ಣನಿಲ್ಲದ ಸಾಹಿತ್ಯ ಜೀರೋ ಎಂದರು.

ಶಿವಯೋಗಾಶ್ರಮ ಟ್ರಸ್ಟ್‌ನ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ ಮಾತನಾಡಿದರು. ಬಸವಕೇಂದ್ರದ ದಮಯಂತಿ ಗೌಡರ್, ಮುಖ್ಯಗುರು ಐ.ಜಿ. ಲತಾ ಅವರು ಉಪಸ್ಥಿತರಿದ್ದರು. ವಿವಿಧ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !