ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಮನೆಗೆ ತಲುಪಲಿದೆ ಕಡಿಮೆ ದರದಲ್ಲಿ ತರಕಾರಿ

ಮಾರುಕಟ್ಟೆಗೆ ಜನ ಮುಗಿಬೀಳುವುದನ್ನು ತಪ್ಪಿಸಲು ಪಾಲಿಕೆ ಕ್ರಮ
Last Updated 30 ಮಾರ್ಚ್ 2020, 15:32 IST
ಅಕ್ಷರ ಗಾತ್ರ

ದಾವಣಗೆರೆ: ನಿತ್ಯ ಬಳಕೆಯ ತರಕಾರಿಗಳಿಗಾಗಿ ಜನರು ಮಾರುಕಟ್ಟೆಗೆ ಮುಗಿ ಬೀಳುವುದನ್ನು ತಪ್ಪಿಸಲು ಪಾಲಿಕೆ ಕ್ರಮ ಕೈಗೊಂಡಿದೆ. ಮನೆ ಬಾಗಿಲಿಗೆ ತರಕಾರಿ ತಲುಪಿಸುವ ವ್ಯವಸ್ಥೆ ಮಾಡಿದೆ.

ಮಹಾನಗರ ಪಾಲಿಕೆ ಆವರಣದಲ್ಲಿ ಸೋಮವಾರ ಸಂಜೆ ಜಿಲ್ಲಾ ಹಾಪ್‌ಕಾಮ್ಸ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ತರಕಾರಿ ತಲುಪಿಸುವ ತರಕಾರಿ ಮಾರಾಟ ಮಾಡುವ ವಾಹನಗಳಿಗೆ ಚಾಲನೆ ನೀಡಲಾಯಿತು.

ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ತರಕಾರಿ ಪೂರೈಕೆ ಮಾಡಲಾಗುತ್ತಿದೆ ಎಂದು ಮೇಯರ್ ಬಿ.ಜಿ. ಅಜಯ್‌ಕುಮಾರ್‌ ಅವರು ಹೇಳಿದರು.

ನಗರದಲ್ಲಿ ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್ ಇದ್ದುದರಿಂದ ತರಕಾರಿ ಮಾರುವವರು ಇದನ್ನೆ ಬಂಡವಾಳವಾಗಿಸಿಕೊಂಡು ಅಧಿಕ ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಕುರಿತು ದೂರು ಬರುತ್ತಿದೆ. ಅದನ್ನು ತಪ್ಪಿಸಲು ಕಡಿಮೆ ಬೆಲೆಗೆ ಎಲ್ಲ ವಾರ್ಡುಗಳಿಗೆ ವಾಹನ ಮೂಲಕ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ವಿತರಿಸಲು ನಿರ್ಧರಿಸಲಾಯಿತು. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ನುಕು-ನುಗ್ಗಲಿಲ್ಲದೇ ತರಕಾರಿ ಕೊಂಡುಕೊಳ್ಳಬೇಕು ತಿಳಿಸಿದರು.

ಈಗಾಗಲೇ 250 ಕ್ಕೂ ಅಧಿಕ ತಳ್ಳುಗಾಡಿಗಳ ಮೂಲಕ ತರಕಾರಿ ಮಾರಾಟ ಮಾಡಲಾಗುತ್ತಿದೆ. ಆದರೆ ಅವರು ನಗರದ ಹೊರವಲಯ, ದೂರದ ವಾರ್ಡುಗಳಿಗೆ ತೆರಳಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಹೊಸ ವಾಹನಗಳು ಎಲ್ಲ ವಾರ್ಡ್‌ಗಳಿಗೆ ತೆರಳಲಿವೆ ಎಂದರು.

ಜಿಲ್ಲಾ ಹಾಪ್‌ಕಾಮ್ಸ್‌ನ ಜೆ.ಆರ್. ಷಣ್ಮುಕಪ್ಪ ಮಾತನಾಡಿ, ‘ತರಕಾರಿ ಮಾರಾಟ ಮಾಡುವ ಎರಡು ವಾಹನಗಳಿಗೆ ಚಾಲನೆ ನೀಡಲಾಗಿದೆ. ಮಾರ್ಚ್‌ 31ರಂದು 5 ವಾಹನಗಳು, ನಂತರ 25 ವಾಹನಗಳು ಲಭ್ಯವಾಗಲಿವೆ’ ಎಂದು ತಿಳಿಸಿದರು.

ಹಾಪ್ ಕಾಮ್ಸ್ ಮ್ಯಾನೇಜಿಂಗ್ ಡೈರೆಕ್ಷರ್ ಮಂಜಾನಾಯ್ಕ್, ‘ರೈತರು ತಾವು ಬೆಳೆದ ತರಕಾರಿ ಹಣ್ಣುಗಳನ್ನು ಹಾಪ್‌ಕಾಮ್ಸ್‌ಗೆ ಮಾರಾಟ ಮಾಡಬಹುದು. ಆಸಕ್ತರು 9902752350 (ಮಂಜಾನಾಯ್ಕ್), 9886291143 (ವರುಣ) ಸಂಪರ್ಕಿಸಬಹುದು’ ಎಂದು ತಿಳಿಸಿದರು.

ಪಾಲಿಕೆ ಸದಸ್ಯರಾದ ಕೆ. ಚಮನ್‌ಸಾಬ್‌, ವಿನಾಯಕ್ ಪೈಲ್ವಾನ್, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಪರಿಸರ ಎಂಜಿನಿಯರ್‌ ಸುನೀಲ್, ಆರೋಗ್ಯ ಅಧಿಕಾರಿ ಸಂತೋಷ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮನ್ನರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT