ಮಂಗಳವಾರ, ಸೆಪ್ಟೆಂಬರ್ 21, 2021
26 °C

ಹನ್ನೊಂದು ತರಕಾರಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ‘ತೋಟಗಾರಿಕೆ ಕೇವಲ ಶ್ರೀಮಂತ ರೈತರಿಗೆ ಮಾತ್ರ ಎಂಬುದನ್ನು ಅಳಿಸಿ, ಪ್ರತಿಯೊಬ್ಬ ರೈತರಿಗೆ, ಜನಸಾಮಾನ್ಯರಿಗೂ ಇದೆ ಎಂಬುದನ್ನು ತೋರಿಸಿಕೊಟ್ಟ ತೃಪ್ತಿ ನನಗಿದೆ’ ಎಂದು ಮಾಜಿ ತೋಟಗಾರಿಕಾ ಸಚಿವ ಹಾಗೂ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.

ನಗರದ 11 ಫಲಾನುಭವಿಗಳಿಗೆ ತೋಟಗಾರಿಕೆ ಇಲಾಖೆಯಿಂದ ತರಕಾರಿ ಮತ್ತು ಸೊಪ್ಪು ಮಾರಾಟಗಾರರಿಗೆ ತಳ್ಳುವ ಗಾಡಿಗಳನ್ನು ವಿತರಿಸಿ ಅವರು ಮಾತನಾಡಿದರು.

‘ಮೊದಲ ಬಾರಿಗೆ ನನಗೆ ತೋಟಗಾರಿಕೆ ಖಾತೆ ನೀಡಿದಾಗ ಮೂಗು ಮುರಿದವರೇ ಹೆಚ್ಚು. ಆದರೆ, ಈ ಇಲಾಖೆಯಿಂದ ಜನಸಾಮಾನ್ಯರಿಗೆ ಏನು ಉಪಯೋಗವಾಗಲಿದೆ ಎಂಬುದನ್ನು ತಿಳಿದುಕೊಂಡೆ. ಅದನ್ನು ತಲುಪಿಸಿ ಜನಸಾಮಾನ್ಯರಿಗೂ ತೋಟಗಾರಿಕೆ ಇಲಾಖೆ ಇದೆ ಎಂಬುದನ್ನು ತೋರಿಸಿಕೊಟ್ಟೆ’ ಎಂದು ತಿಳಿಸಿದರು.

‘ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತೋಟಗಾರಿಕೆಯಿಂದ ನಷ್ಟ ಆಗುವುದಿಲ್ಲ ಎಂಬುದನ್ನು ತಿಳಿಸಿಕೊಟ್ಟು, ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ. ಅದೇ ರೀತಿ ನಗರ ಪ್ರದೇಶಗಳ ಜನರಿಗೂ ತೋಟಗಾರಿಕೆ ಇಲಾಖೆಯಿಂದ ತಾರಸಿ ಮತ್ತು ಕೈತೋಟದಲ್ಲಿ ಆರೋಗ್ಯಕರ ಬೆಳೆ ಬೆಳೆಯಲು ಕಿಟ್ ಒದಗಿಸುವ ಮೂಲಕ ಪ್ರತಿಯೊಬ್ಬರಿಗೂ ತೋಟಗಾರಿಕೆ ಸೌಲಭ್ಯ ದೊರೆಯುವಂತೆ ಮಾಡಲಾಗಿದೆ. ದಾವಣಗೆರೆಯಲ್ಲಿ ಇದುವರೆಗೆ 500ಕ್ಕೂ ಹೆಚ್ಚು ತಳ್ಳುವ ಗಾಡಿಗಳನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವೇದಮೂರ್ತಿ, ಯತಿರಾಜ್, ಮಹಾನಗರ ಪಾಲಿಕೆ ಸದಸ್ಯ ಎಚ್.ಬಿ. ಗೋಣೆಪ್ಪ, ಸುರೇಶ್ ಶೆಟ್ಟಿ, ಅಜ್ಜಣ್ಣ, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳು, ವೀರಭದ್ರೇಶ್ವರ ದೇವಸ್ಥಾನ ಸಮಿತಿಯವರು ಹಾಜರಿದ್ದರು.

ಕೊಡಬಾಳ್ ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರಿಬಸಪ್ಪ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು