ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿಯ ಹಿರೇಕಲ್ಮಠದ ಚನ್ನಪ್ಪಸ್ವಾಮಿಗಳ ರಥೋತ್ಸವ ಸಂಭ್ರಮ

Published 13 ಸೆಪ್ಟೆಂಬರ್ 2023, 6:39 IST
Last Updated 13 ಸೆಪ್ಟೆಂಬರ್ 2023, 6:39 IST
ಅಕ್ಷರ ಗಾತ್ರ

ಹೊನ್ನಾಳಿ: ಇಲ್ಲಿನ ಸುಕ್ಷೇತ್ರ ಹಿರೇಕಲ್ಮಠದ ಚನ್ನಪ್ಪಸ್ವಾಮಿಗಳ ಮಹಾ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ಮಂಗಳವಾರ ಬೆಳಿಗ್ಗೆ ಮಠದ ಆವರಣದಲ್ಲಿ ವೀರಭದ್ರದೇವರ ಕೆಂಡದಾರ್ಚನೆ ನಡೆಯಿತು. ರಥ ಎಳೆಯುವ ಮುನ್ನ ರಥದ ಚಕ್ರಕ್ಕೆ ತೆಂಗಿನಕಾಯಿಗಳನ್ನು ಒಡೆದು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಲಾಯಿತು.

ನಂತರ ಚನ್ನಪ್ಪಸ್ವಾಮಿ ಮಠದ ಪೀಠಾಧ್ಯಕ್ಷ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ರಥದ ಬಳಿ ಬಂದ ಬಳಿಕ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸ್ವಾಮೀಜಿ ರಥದಲ್ಲಿ ಆಸೀನರಾದರು. ರಥ ಚಲಿಸುತ್ತಿದ್ದಂತೆ ‘ಚನ್ನಪ್ಪಸ್ವಾಮಿಗಳಿಗೆ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗೆ ಜಯವಾಗಲಿ’ ಎಂದು ಭಕ್ತರು ಘೋಷಣೆ ಕೂಗಿದರು.

ರಥೋತ್ಸವದ ಉದ್ದಕ್ಕೂ ಶಹನಾಯ್, ಭಜನೆ, ಡೊಳ್ಳು, ನಂದಿ ಕೋಲು, ಚಂಡೆ ವಾದ್ಯ, ಕೀಲು ಕುದುರೆ, ಪುರುವಂತರ ಉರುವಣೆ ಭಕ್ತರಲ್ಲಿ ಭಕ್ತಿಯ ಸಂಚಲನವನ್ನುಂಟು ಮಾಡಿದವು. ವಿವಿಧ ಬಣ್ಣಗಳಿಂದ ಕೂಡಿದ ಧ್ವಜಗಳಿಂದ ಅಲಂಕಾರ ಮಾಡಿದ್ದ ರಥವನ್ನು ಹಿರೇಕಲ್ಮಠದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ಎಳೆದುತಂದು ಭಕ್ತಿ ಸಮರ್ಪಿಸಲಾಯಿತು.

ರಥೋತ್ಸವಕ್ಕೆ ಬಂದ ಸಾವಿರಾರು ಭಕ್ತರಿಗೆ ಮಠದ ಆವರಣದಲ್ಲಿ ಸಾಮೂಹಿಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶ್ರಾವಣ ಮಾಸ ಆರಂಭದಿಂದ ಪ್ರತಿದಿನ ಬೆಳಿಗ್ಗೆ ಮಠದ ಕರ್ತೃ ಗದ್ದುಗೆಗಳಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ, ದೀಪೋತ್ಸವ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು.

ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT