ಗುರುವಾರ , ಸೆಪ್ಟೆಂಬರ್ 29, 2022
26 °C
ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್

ಸೆ.26ರಂದು ವಿಧಾನಸೌಧ ಚಲೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಬ್ಬಿಗೆ ನೀಡುವ ಎಫ್ಆರ್‌ಪಿ ಮೊತ್ತವನ್ನು ಪುನರ್ ಪರಿಶೀಲಿಸಬೇಕು, ವಿದ್ಯುತ್ ತಿದ್ದುಪಡಿ ಕೈಬಿಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.26ರಂದು ‘ವಿಧಾನಸೌಧ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

‘ವಿದ್ಯುತ್‌ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ರೈತರಿಂದ ಹಣ ವಸೂಲಿ ಮಾಡುವ ಹುನ್ನಾರ ನಡೆಸಿದೆ. ರಾಜ್ಯದಲ್ಲಿ 40 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಖಾಸಗೀಕರಣ ಪ್ರಸ್ತಾವ ಕೈಬಿಡಬೇಕು’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.

‘ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲಬೆಲೆ (ಎಂಎಸ್‌ಪಿ)ಯ ಖಾತರಿ ನೀಡಬೇಕು. ಬೆಂಬಲಬೆಲೆ ನಿಗದಿಗಾಗಿ ಕೇಂದ್ರ ಸರ್ಕಾರ ರಚಿಸಿರುವ 26 ಜನರ ಸಮಿತಿಯಲ್ಲಿ ರೈತ ವಿರೋಧಿ, ಸರ್ಕಾರದ ಪರ ಸದಸ್ಯರೇ ಇದ್ದು, ಅವರನ್ನು ಕೂಡಲೇ ಬದಲಿಸಬೇಕು’ ಎಂದು ಆಗ್ರಹಿಸಿದರು.

10 ಲಕ್ಷ ಹೆಕ್ಟೇರ್ ಬೆಳೆ ನಾಶ: ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿದೆ. ಆದರೆ, ಕೃಷಿ ಸಚಿವರು 6.80 ಲಕ್ಷ ಹೆಕ್ಟೇರ್‌ ಲೆಕ್ಕ ಕೊಡುತ್ತಿದ್ದಾರೆ. ಕೇಂದ್ರ ತಂಡ ಕಾಟಾಚಾರದ ಸಮೀಕ್ಷೆ ನಡೆಸಿದ್ದು, ನಷ್ಟದ ಅಂದಾಜು ಮಾಡಲು ವಿಫಲವಾಗಿದೆ ಎಂದು ಅವರು ದೂರಿದರು.

ಬೆಳೆ ನಷ್ಟವಾದ 24 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಪರಿಹಾರವೇ ಸಿಗುವುದಿಲ್ಲ. ಕೆಲವು ಜಿಲ್ಲೆಗಳ ಉಸ್ತುವಾರಿ ಸಚಿವರೇ ನಾಪತ್ತೆಯಾಗಿದ್ದಾರೆ. ಬೆಳೆನಷ್ಟದ ಸಂಪೂರ್ಣ ಪರಿಹಾರ ನೀಡಬೇಕು. ಸಣ್ಣಪುಟ್ಟ ಮೊತ್ತದ ಚೆಕ್ ನೀಡಿದರೆ ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಚೆಕ್ ಸುಡುವ ಚಳವಳಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಪೊಟ್ಯಾಶ್, ಡಿಎಪಿ ಗೊಬ್ಬರದ ದರ ಹೆಚ್ಚಿದೆ. ಕೂಲಿ, ಸಾಗಣೆ ವೆಚ್ಚ, ಬಿತ್ತನೆಬೀಜದ ಬೆಲೆ ಏರಿಕೆಯಾಗಿದೆ. ಆದರೆ, ಸರ್ಕಾರ ಟನ್‌ ಕಬ್ಬಿಗೆ ₹ 3,050 ನಿಗದಿ ಮಾಡಿದೆ. ಈ ದರವನ್ನು ಪುನರ್ ಪರಿಶೀಲಿಸಿ ಉತ್ತರ ಪ್ರದೇಶ ಮಾದರಿಯಂತೆಯೇ ಕನಿಷ್ಠ ₹ 3,500 ನೀಡಬೇಕು’ ಎಂದು ಕೋರಿದರು.

‘ಸಾಲದ ಹೊರೆಯಿಂದ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಮೂರೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರಿ ಉದ್ಯಮಿಗಳ ₹ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮಾದರಿಯಲ್ಲೇ ರೈತರ ಸಾಲವನ್ನೂ ಮನ್ನಾ ಮಾಡಬೇಕು.ಮೆಕ್ಕೆಜೋಳಕ್ಕೆ ₹ 440 ವಿಮೆ ಹಣ ಕಟ್ಟಿದ್ದ ರೈತನಿಗೆ ₹ 160  ಪರಿಹಾರ ಬಂದಿದೆ. ಇದು ಟೋಪಿ ಹಾಕುವ ವಿಮೆ ಯೋಜನೆಯಾಗಿದ್ದು, ಕೂಡಲೇ ಮಾನದಂಡ ಬದಲಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್, ಬಲ್ಲೂರು ರವಿಕುಮಾರ್, ಹನುಮೇಗೌಡ, ಸಿ.ಬಿ. ಶಂಕರ್, ಶಂಕರೇಗೌಡ, ಪ್ರಸಾದ್, ಕುಮಾರಸ್ವಾಮಿ, ಅಂಜಿನಪ್ಪ, ಬರಡನಪುರ ನಾಗರಾಜ್ ಇದ್ದರು.

25ರಂದು ಕಿಸಾನ್ ಅಧಿವೇಶನ

‘ಮೂರು ಕೃಷಿ ಕಾಯ್ದೆಗಳನ್ನು ರದ್ದುಮಾಡಿ ಎಂಎಸ್‌ಪಿ ಖಾತರಿ ಕಾನೂನು ಜಾರಿ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್‌ನಲ್ಲಿ ನೀಡಿದ್ದ ಭರವಸೆ ಹುಸಿಯಾಗಿದೆ. ಅವರು ರೈತ ಮುಖಂಡರಿಲ್ಲದ  ಸಮಿತಿ ರಚಿಸಿ ನಾಟಕವಾಡುತ್ತಿದ್ದಾರೆ. ದೇಶದಾದ್ಯಂತ ರೈತ ಚಳವಳಿಯನ್ನು ಮತ್ತಷ್ಟು ಪ್ರಬಲಗೊಳಿಸಲು ಸೆ.25ರಂದು ಬೆಂಗಳೂರಿನಲ್ಲಿ ಕಿಸಾನ್ ಅಧಿವೇಶನ ನಡೆಯಲಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು