ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಕಾರ ನೀಡಿದ ಗ್ರಾಮಸ್ಥರು

7
ಅಕ್ರಮ ಅರಣ್ಯ ಸಾಗುವಳಿಗೆ ತಡೆ

ಅರಣ್ಯ ಇಲಾಖೆ ಸಿಬ್ಬಂದಿಗೆ ಸಹಕಾರ ನೀಡಿದ ಗ್ರಾಮಸ್ಥರು

Published:
Updated:
ಹರಪನಹಳ್ಳಿ ತಾಲ್ಲೂಕಿನ ನಾರಾಯಣಪುರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ ಅವರು ರೈತರ ಜತೆ ಚರ್ಚಿಸಿದರು.

ಹರಪನಹಳ್ಳಿ: ತಾಲ್ಲೂಕಿನ ಯಲ್ಲಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಸಾಗುವಳಿಗಾಗಿ ಅಕ್ರಮವಾಗಿ ಒತ್ತುವರಿಗೆ ಮುಂದಾಗಿದ್ದ ಜನರಿಗೆ ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳು ಗುರುವಾರ ತಡೆಯೊಡ್ಡಿದ್ದಾರೆ.

ತಾಲ್ಲೂಕಿನ ನಾರಾಯಣಪುರ ಸರ್ವೆ ನಂ. 1ರಲ್ಲಿ ಒಟ್ಟು 1331 ಎಕರೆ ಭೂಮಿಯಿದೆ. ಆ ಪೈಕಿ ಅರಣ್ಯ ಇಲಾಖೆಗೆ 375 ಎಕರೆ ನೀಡಲಾಗಿದೆ. ಅದರಲ್ಲಿ ಕೆಲವರು ಹದಿನೈದು ದಿನಗಳಿಂದ ಸಾಮಾಜಿಕ ಅರಣ್ಯವಲಯ ಇಲಾಖೆಯಿಂದ ನೀಲಗಿರಿ ಹಾಗೂ ಗಿಡ–ಸಸಿಗಳನ್ನು ಕಡಿದು, ಉಳುಮೆಗೆ ಮುಂದಾಗಿದ್ದರು. ಇದನ್ನು ವಿರೋಧಿಸಿ ಯಲ್ಲಾಪುರ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ತಡೆ ಒಡ್ಡಿದ್ದಾರೆ.

ಅರಣ್ಯ ನಾಶವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ ನೇತೃತ್ವದ ತಂಡ ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆ ಗಿಡ-ಮರ ಕಡಿಯುತ್ತಿದ್ದವರು ತಲೆಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದಿದ್ದ ಅದೇ ಗ್ರಾಮದ ಮತ್ತೊಂದು ಗುಂಪಿನವರು, ‘ಅರಣ್ಯ ಉಳಿಸಬೇಕು. ಇಲ್ಲದಿದ್ದರೆ ನಮಗೂ ಭೂಮಿ ಕೊಡಿ’ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಈ ವೇಳೆ ಅಧಿಕಾರಿಗಳು ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ ಮಾತನಾಡಿ, ‘ಇಲಾಖೆ ಸರ್ವೆ ವಿಭಾಗದ ಅಧಿಕಾರಿಗಳಿಂದ ಶೀಘ್ರ ಸರ್ವೆ ಮಾಡಿಸಲಾಗುವುದು. ವಾರದೊಳಗೆ ಸಮೀಕ್ಷೆ ಕೈಗೊಂಡು ಹದ್ದುಬಸ್ತು ಗುರುತಿಸುತ್ತೇವೆ. ಅರಣ್ಯ ಬೆಳೆಸುವುದಕ್ಕೆ ಈ ಭಾಗದ ರೈತರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು. ಆಗ ಮಾತ್ರ ಮಳೆ–ಬೆಳೆ ಉತ್ತಮವಾಗಿ ಆಗಲು ಸಾಧ್ಯ. ಇದನ್ನು ಮೀರಿ ರೈತರು ಅರಣ್ಯ ಗಿಡಗಳನ್ನು ಕಡಿಯಲು ಮುಂದಾದರೆ ಅರಣ್ಯ ಕಾಯ್ದೆ ಅನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಲಯ ಅರಣ್ಯಾಧಿಕಾರಿ ಶಂಕರನಾಯ್ಕ ಮಾತನಾಡಿ, ‘375 ಎಕರೆ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ಬೆಳೆಸಲಾಗುತ್ತಿದೆ. ಏಕಾಏಕಿ ಸಸಿ ಕಡಿಯಲು ಬಂದಿರುವುದು ಕಾನೂನಿನ ಪ್ರಕಾರ ಅಪರಾಧ. ಜನರು ನಿಯಮ ಉಲ್ಲಂಘಿಸದೆ ಇಲಾಖೆ ಜತೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಾಂತೇಶ್, ಸಹಾಯಕ ಅರಣ್ಯಾಧಿಕಾರಿಗಳಾದ ರಮೇಶ್ ರಾಥೋಡ್, ಶಿವಕುಮಾರ, ಶ್ರೀಕಾಂತ, ಅಶೋಕ, ಮಂಜನಾಯ್ಕ, ಅಂಬರೀಶ್, ಮಂಜುನಾಥ ಹಾಗೂ ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !