ಭಾನುವಾರ, ಫೆಬ್ರವರಿ 28, 2021
31 °C
ಸ್ವೀಪ್‌ ಕಾರ್ಯಕ್ರಮ ಮಾಡದೆಯೂ ಶೇ 85ಕ್ಕಿಂತ ಅಧಿಕ ಮಂದಿಯಿಂದ ಹಕ್ಕು ಚಲಾವಣೆ

ಊರಿನೊಂದಿಗಿನ ಜನರ ಅವಿನಾಭಾವ ಸಂಬಂಧಗಳಿಂದ ಮತದಾನ ಪ್ರಮಾಣ ಹೆಚ್ಚಳ: ಡಿ.ಸಿ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿಧಾನಸಭೆ, ಲೋಕಸಭೆ ಚುನಾವಣೆಗಳ ಸಹಿತ ಉಳಿದೆಲ್ಲ ಚುನಾವಣೆ ಸಂದರ್ಭದಲ್ಲಿ ನಡೆಯುವ ಮತದಾನಕ್ಕಿಂತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಅತ್ಯುತ್ತಮ ಮತ ಚಲಾವಣೆಯಾಗಿದೆ.  ಗ್ರಾಮ ಪಂಚಾಯಿತಿಗೆ ಯಾವುದೇ ಜಾಗೃತಿ ಕಾರ್ಯಕ್ರಮ ಇಲ್ಲದೇ ಇದ್ದರೂ ಶೇ 85ಕ್ಕಿಂತ ಅಧಿಕ ಮತದಾನವಾಗಿದೆ. ತಮ್ಮೂರು, ತಮ್ಮೂರ ಅಭ್ಯರ್ಥಿ ಎಂಬ ಅವಿನಾಭಾವ ಸಂಬಂಧವೇ ಮತದಾನವನ್ನು ಹೆಚ್ಚಿಸಿದೆ.

ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತಗಳು ಎಲ್ಲ ಕಡೆ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು, ಜಾಥಾ, ರ‍್ಯಾಲಿಗಳನ್ನು ಹಮ್ಮಿಕೊಳ್ಳುತ್ತವೆ. ಮತದಾನ ಯಾಕೆ ಮಾಡಬೇಕು ಎಂದು ಸಾರುತ್ತವೆ. ಆದರೂ ಮತದಾನದ ಪ್ರಮಾಣ ಶೇ 70 ದಾಟಿಸುವುದೇ ಕಷ್ಟವಾಗಿ ಬಿಡುತ್ತಿತ್ತು.

ಹಿಂದಿನ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶೇ 69ರಷ್ಟು ಮತದಾನವಾಗಿದ್ದರೆ, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಶೇ 73ರಷ್ಟು ಮತದಾನವಾಗಿತ್ತು. ವಿದ್ಯಾವಂತರೇ ಇರುವ ಪದವೀಧರರ ಕ್ಷೇತ್ರಕ್ಕೆ ಶೇ 62 ಮತ ಚಲಾವಣೆಯಾಗಿದ್ದರೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶೇ 56 ತಲುಪಿದ್ದೇ ಹೆಚ್ಚು ಎಂಬಂತಾಗಿತ್ತು. ಆದರೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಶೇ 85.27, ಎರಡನೇ ಹಂತದಲ್ಲಿ ಶೇ 85.36 ಮತದಾನವಾಗಿದೆ.

‘ಎಲ್ಲ ಚುನಾವಣೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಆದರೆ ಹೆಚ್ಚು ವಿದ್ಯಾವಂತರು, ಬುದ್ಧಿವಂತರು ಇರುವ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ‍ಪಾಲ್ಗೊಳ್ಳುವುದರಿಂದ ಒಟ್ಟು ಶೇಕಡಾವಾರು ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿಶ್ಲೇಷಿಸಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಜನರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ನಗರ ಪ್ರದೇಶದವರು ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ನಗರ ಪ್ರದೇಶದಲ್ಲಿ ಮನೆ ಮುಂದೆ ಸಣ್ಣ ಸಮಸ್ಯೆಯಾದರೂ ನಗರದ ಸ್ಥಳೀಯಾಡಳಿತವನ್ನು ಸಂಪರ್ಕಿಸುತ್ತಾರೆ. ಆದರೆ ಮತ ಹಾಕಲು ಅದೇ ವೇಗದಲ್ಲಿ ಸ್ಪಂದಿಸುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಯನ್ನು ಕೇಳುವ ಗೋಜಿಗೆ ಹೋಗುವುದಿಲ್ಲ’ ಎಂಬುದು ಚಿಂತಕ ತೇಜಸ್ವಿ ಪಟೇಲ್‌ ಅವರ ವಿವರಣೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹತ್ತಿರದವರು, ಪರಿಚಿತರು, ಬಂಧುಗಳು ಸ್ಪರ್ಧಿಸಿರುತ್ತಾರೆ. ಹಾಗಾಗಿ ಜನ ಬೇರೆ ಚುನಾವಣೆಗಿಂತ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುವುದು ಒಂದು ಕಾರಣ. ಚುನಾವಣೆಗೆ ನಿಂತವರು ಕೆಲವು ಆಮಿಷಗಳನ್ನು ನೀಡಿರುತ್ತಾರೆ. ಅವರು ಸ್ಥಳೀಯರೇ ಆಗಿರುತ್ತಾರೆ. ಆಮಿಷಕ್ಕೆ ಒಳಪಟ್ಟವರು ಮತಗಟ್ಟೆಗಳಿಗೆ ಬಾರದೇ ಇದ್ದರೆ ಆಮಿಷ ಒಡ್ಡಿದ್ದವರಿಗೆ ಗೊತ್ತಾಗುತ್ತದೆ. ಅವರು ಚುನಾವಣೆಯ ಬಳಿಕ ಕಾಡತೊಡಗುತ್ತಾರೆ. ಇದರಿಂದ ತಪ್ಪಿಸಿಕೊಳ್ಳಲು ಜನ ಮತದಾನ ಮಾಡಲು ಬರುತ್ತಾರೆ. ಇದು ಎರಡನೇ ಕಾರಣ ಎನ್ನುವುದು ಅವರ ವಿಶ್ಲೇಷಣೆ.

ಆಮಿಷಗಳು ಎಲ್ಲ ಚುನಾವಣೆಗಳಲ್ಲಿ ಇರುತ್ತವೆ. ಅವನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವೇ ಆಗಿಲ್ಲ. ಮತದಾರರಿಗೆ ಮತ ಚಲಾವಣೆಯ ಬಗ್ಗೆ ಜಾಗೃತಿಯೂ ಇದೆ. ಮತ ಜಾಗೃತಿ ಕಾರ್ಯಕ್ರಮಗಳಿಂದ ಮತದಾನ ಭಾರಿ ಹೆಚ್ಚಳವಾಗುತ್ತದೆ ಎಂಬುದು ಸುಳ್ಳು. ಅದರ ಬದಲು ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾರರು ಬಂದಂತೆ ಬೇರೆ ಚುನಾವಣೆಗಳಲ್ಲಿಯೂ ಬರುವಂತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು