ಸಮಾಜ ಒಡೆಯುವವರಿಗೆ ಪಾಠ ಕಲಿಸಿದ ಮತದಾರ

7
ಹಾಲಕೆರೆ ಅನ್ನದಾನೀಶ್ವರ ಸಂಸ್ಥಾನ ಮಠದ ಜಗದ್ಗುರು ಡಾ. ಅಭಿನವ ಅನ್ನದಾನ ಸ್ವಾಮೀಜಿ

ಸಮಾಜ ಒಡೆಯುವವರಿಗೆ ಪಾಠ ಕಲಿಸಿದ ಮತದಾರ

Published:
Updated:
Deccan Herald

ದಾವಣಗೆರೆ: ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಮಹಾ ‍ಪಂಡಿತರಿಗೆ ಕಳೆದ ಚುನಾವಣೆಯಲ್ಲಿ ರಾಜ್ಯದ ಜನರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹಾಲಕೆರೆ ಅನ್ನದಾನೀಶ್ವರ ಸಂಸ್ಥಾನ ಮಠದ ಡಾ. ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.

ನಗರದ ದೇವರಾಜ ಅರಸ್ ಬಡಾವಣೆಯ ಶ್ರೀ ಅನ್ನದಾನೀಶ್ವರ ಶಾಖಾಮಠದ ಕೆ. ತಿಪ್ಪಣ್ಣ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರು ಅನ್ನದಾನ ಮಹಾಶಿವಯೋಗಿಗಳ 41ನೇ ಪುಣ್ಯಾರಾಧನೆ, 216ನೇ ಶಿವಾನುಭವ ಸಂಪದ, 501 ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಧರ್ಮವೊಂದಿದ್ದರೆ ಅದು ವೀರಶೈವ ಲಿಂಗಾಯತ ಸಮಾಜ. ಸರ್ವಜನಾಂಗದ ಪ್ರಗತಿಯೊಂದಿಗೆ ತಾನೂ ಬೆಳೆಯುವ ಸಮಾಜ ಇದು. ಇಂದಿಗೂ ಸಿದ್ದಗಂಗಾ ಮಠ, ಸುತ್ತೂರು ಮಠಗಳು ಸರ್ವಜನಾಂಗದವರಿಗೂ ಅನ್ನ, ಅಕ್ಷರ ದಾಸೋಹ ಸೇವೆಗೈಯುವಲ್ಲಿ ನಿರತವಾಗಿವೆ ಎಂದರು.

ವೀರಶೈವ ಲಿಂಗಾಯತರು ಎಂದಿಗೂ ಒಂದೇ. ಕೆಲವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾದರು. ಅದಕ್ಕೆ ಜನ ಉತ್ತರಿಸಿದ್ದಾರೆ. ಯಾರೇ ಜಾತಿ ಕೇಳಿದರೂ ಉಪಪಂಗಡ ಹೇಳದೇ ವೀರಶೈವ ಲಿಂಗಾಯತರು ಎಂದುತ್ತರಿಸಬೇಕು. ಆಗ ಮಾತ್ರ ನೀವು ಬಸವಣ್ಣ, ಪಂಚಾಚಾರ್ಯರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ವಿವರಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಹೇಳಿಕೆಗೆ ಬದ್ಧರಾಗುವ ಮೂಲಕ ಪಕ್ಷಕ್ಕಿಂತ ಸಮಾಜ ಮುಖ್ಯ ಎಂಬುದನ್ನು ತೋರಿಸಿಕೊಟ್ಟರು. ಈ ವಿಷಯದಲ್ಲಿ ಅವರು ಗಟ್ಟಿ ನಿಲುವು ತಾಳಿದ್ದರಿಂದಲೇ ಈ ವೀರಶೈವ ಮತ್ತು ಲಿಂಗಾಯತ ಎಂದು ಬೇರೆ ಮಾಡುವ ವಿಚಾರ ಚುನಾವಣೆ ಮುಗಿಯುತ್ತಲೇ ತಣ್ಣಗಾಯಿತು ಎಂದರು.

ಆವರಗೊಳ್ಳ ಪುರವರ್ಗಮಠದ ಓಂಕಾರ ಸ್ವಾಮೀಜಿ ಮಾತನಾಡಿ, ‘ಈ ಹಿಂದೆ ಮಠಗಳು ಜಾತ್ಯತೀತವಾಗಿದ್ದವು. ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಾಣುತ್ತಿದ್ದವು. ಆದರೆ, ಇಂದು ಜಾತಿಗೊಂದು ಮಠ ಸೃಷ್ಟಿಗೊಂಡಿದೆ. ಎಲ್ಲರೂ ಜಾತಿ ಕಟ್ಟಳೆಯಲ್ಲಿ ಬಂಧಿಯಾಗಿರುವುದು ಶೋಚನೀಯ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಮಠ ಮಾನ್ಯಗಳು ಜನರು ತಪ್ಪುದಾರಿಯಲ್ಲಿ ನಡೆಯದಂತೆ ಸನ್ಮಾರ್ಗದಲ್ಲಿ ಮುಂದುವರಿಯುವಂತೆ ಮಾರ್ಗದರ್ಶನ ಮಾಡುಕೊಂಡು ಬಂದಿದ್ದಾರೆ ಎಂದು ಶ್ಲಾಘಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗದೇವರು ಆಶೀರ್ವಚನ ನೀಡಿದರು. ಅನ್ನದಾನೀಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಥಣಿ ಎಸ್. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಮಾಜಿ ಸದಸ್ಯ ಡಾ. ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿದರು. ಕನ್ನಡ ಉಪನ್ಯಾಸಕ ಎಫ್.ಎನ್. ಹುಡೇದ್ ಅನ್ನದಾನೀಶ್ವರರ ಕುರಿತು ಉಪನ್ಯಾಸ ನೀಡಿದರು.

ಮತ್ತಿಹಳ್ಳಿ ವೀರಣ್ಣ ಅವರಿಗೆ ವಾಣಿಜ್ಯ ಸಿರಿ ಪ್ರಶಸ್ತಿ, ಸಿಎ ಬಸವರಾಜಪ್ಪ ಬೆಳಗಾವಿ ಅವರಿಗೆ ಗಣಕ ಶ್ರೇಷ್ಠ ಪ್ರಶಸ್ತಿ, ಬಸಮ್ಮ ಇಳಕಲ್ ಜಯಣ್ಣಗೆ ಕಾಯಕಜೀವಿ ಪ್ರಶಸ್ತಿ, ಆದಪ್ಪ ಅವರಿಗೆ ಕಾಯಕಶ್ರೇಷ್ಠ, ಪತ್ರಕರ್ತ ವೀರಪ್ಪ ಎಂ. ಭಾವಿ ಹಾಗೂ ಇ.ಎಂ. ಮಂಜುನಾಥ್ ಅವರಿಗೆ ಪತ್ರಿಕೋದ್ಯಮ ಸಿರಿ ಪ್ರಶಸ್ತಿ, ಹಿರಿಯ ಛಾಯಾಗ್ರಾಹಕ ವಿವೇಕಾನಂದ ಎಲ್. ಬದ್ದಿ ಅವರಿಗೆ ಛಾಯಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಕುಮಾರಸ್ವಾಮಿ ಪ್ರಾರ್ಥಿಸಿದರು. ವೀರಪ್ಪ ಎಂ ಭಾವಿ ಸ್ವಾಗತಿಸಿದರು. ಸುಜಾತ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !