ಭಾನುವಾರ, ಮೇ 29, 2022
23 °C
12ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಜಿ.ಪಂ. ಸಿಇಒ

ದೇಶದ ಚಿತ್ರಣ ಬದಲಾಯಿಸುವ ಶಕ್ತಿ ಮತದಾನಕ್ಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಮಾನವನ ಮೂಲಭೂತ ಹಕ್ಕುಗಳಲ್ಲಿ ವಿಭಿನ್ನವಾಗಿರುವ ಮತದಾನದ ಹಕ್ಕು ದೇಶದ ಚಿತ್ರಣವನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು.

ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಗುಂಡಾಳ್ ಬ್ಯುಸಿನೆಸ್ ಸಲ್ಯೂಷನ್ಸ್‌, ಮಹಾನಗರ ಪಾಲಿಕೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆ–2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆ ಪ್ರಜಾಪ್ರಭುತ್ವದ ಮುಖ್ಯ ಬುನಾದಿ. ಬಹಳಷ್ಟು ದೇಶಗಳಲ್ಲಿ ಎಲ್ಲರಿಗೂ ಮತದಾನ ಮಾಡುವ ಹಕ್ಕನ್ನು ಕೊಟ್ಟಿಲ್ಲ. ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನ ಮಾಡುವ ವಿಶೇಷ ಹಕ್ಕು ನೀಡಲಾಗಿದೆ. ಆದರೆ, ತಾತ್ಸಾರ ಮನೋಭಾವದಿಂದ ಹೆಚ್ಚಿನ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುತ್ತಿಲ್ಲ ಮತ್ತು ಮತದಾನ ಮಾಡುವ ಆಸಕ್ತಿ ತೋರುತ್ತಿಲ್ಲ. ಇದರಿಂದ ಮತದಾನದ ಪ್ರಮಾಣ ಬಹಳಷ್ಟು ಕಡಿಮೆಯಾಗುತ್ತಿದೆ’ ಎಂದರು.

‘ಹಲವು ದೇಶಗಳಲ್ಲಿ 2ರಿಂದ 4 ಪಕ್ಷಗಳನ್ನು ಮಾತ್ರ ಕಾಣಬಹುದು. ಆದರೆ, ಬಹುಪಕ್ಷಿಯ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ನಮ್ಮಲ್ಲಿ 3 ಸಾವಿರಕ್ಕೂ ಹೆಚ್ಚು ಪಕ್ಷಗಳು ನೋಂದಣಿ ಆಗಿವೆ. ಬೆಳಗಾವಿಯಲ್ಲಿ ಈ ಹಿಂದೆ ನಡೆದ ಚುನಾವಣೆಯೊಂದರಲ್ಲಿ 456 ಅಭ್ಯರ್ಥಿಗಳು ಕಣದಲ್ಲಿದ್ದರೂ ಚುನಾವಣಾ ಆಯೋಗ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿತ್ತು’ ಎಂದು ತಿಳಿಸಿದರು.

‘ಚುನಾವಣಾ ಆಯೋಗವು ಇವಿಎಂ ವ್ಯವಸ್ಥೆ ಜಾರಿಗೆ ತಂದಾಗ ಯಾವುದೇ ಪಕ್ಷಕ್ಕೆ ಮತ ಚಲಾಯಿಸಿದರೂ ಒಂದೇ ಪಕ್ಷಕ್ಕೆ ಮತಗಳು ಬೀಳುತ್ತವೆ ಎಂಬ ಆರೋಪ ಕೇಳಿ ಬಂತು. ಈ ಆರೋಪವನ್ನು ಸುಳ್ಳು ಎಂದು ಖಾತ್ರಿಪಡಿಸಿಕೊಳ್ಳಲು ವಿ.ವಿ. ಪ್ಯಾಟ್ ಅಳವಡಿಸುವ ಮೂಲಕ ಪಾರದರ್ಶಕ ಚುನಾವಣೆ ಮಾಡಿದ ಕೀರ್ತಿ ಚುನಾವಣಾ ಆಯೋಗಕ್ಕೆ ಸಿಕ್ಕಿತು. ಭಾರತ ಚುನಾವಣಾ ಆಯೋಗವು ರಾಷ್ಟ್ರೀಯ ಮತದಾರರ ದಿನ ಆಚರಿಸುವ ಮೂಲಕ ಮತದಾನದ ಮಹತ್ವ ತಿಳಿಸಲು ಮುಂದಾಗಿದೆ’ ಎಂದು ಹೇಳಿದರು. 

ಮತದಾರರ ಪ್ರತಿಜ್ಞಾವಿಧಿ ಬೋಧಿಸಿದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಮತ ಹಾಕಲು ಅರ್ಹತೆ ಇರುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಬೇಕು. ಅದರಂತೆ ಜಾಗೃತ ಮತದಾರ ಅನರ್ಹ ಮತದಾರರನ್ನು ತೆಗೆದುಹಾಕಲು ಸಹಾಯ ಮಾಡಬೇಕು. ನಾವೆಲ್ಲರೂ ಜಾಗೃತ ಮತದಾರರಾಗಬೇಕು. ತಮ್ಮ ತಮ್ಮ ಮತಗಟ್ಟೆಗಳಲ್ಲಿ ತಾವೇ ಚುನಾವಣಾ ಆಯುಕ್ತರ ರಾಯಭಾರಿಯಾಗಿ ಕಾರ್ಯ ನಿರ್ವಹಿಸೋಣ. ಆರೋಗ್ಯಕರ ಮತದಾರರ ಪಟ್ಟಿಗಾಗಿ ಎಲ್ಲರೂ ಶ್ರಮಿಸೋಣ’ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಹೊಸ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾತನ ವಿತರಿಸಲಾಯಿತು.

ಸಿದ್ಧಗಂಗಾ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಗುಂಡಾಳ್ ಬ್ಯುಸಿನೆಸ್ ಡೇಟಾ ಸೆಲ್ಯೂಷನ್ಸ್ ಮುಖ್ಯಸ್ಥ ಮಂಜುನಾಥ ಗುಂಡಾಳ್, ಪಾಲಿಕೆ ಉಪ ಆಯುಕ್ತ ಚಂದ್ರಪ್ಪ ಸಿ., ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಾಲಾಕ್ಷಿ, ಡಿಡಿಪಿಐ ತಿಪ್ಪೇಶಪ್ಪ, ಡಿಡಿಪಿಯು ಶಿವರಾಜ್, ಪಾಲಿಕೆಯ ಸದಸ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.