ನೋಟಿನ ಜೊತೆ ವೋಟಿನ ಆಶೀರ್ವಾದ!

ಭಾನುವಾರ, ಏಪ್ರಿಲ್ 21, 2019
32 °C
ಮಂಡಕ್ಕಿ ಹಂಚುವುದೇ ದೊಡ್ಡಸ್ತಿಕೆ ವಿಚಾರ: ಸಿಪಿಐ ಮುಖಂಡ ರಾಮಚಂದ್ರಪ್ಪ ಮೆಲುಕು

ನೋಟಿನ ಜೊತೆ ವೋಟಿನ ಆಶೀರ್ವಾದ!

Published:
Updated:
Prajavani

ದಾವಣಗೆರೆ: ‘ಎಪ್ಪತ್ತರ ದಶಕದಲ್ಲಿ ನಡೆದ ಚುನಾವಣೆಗಳಲ್ಲಿ ‘ನೋಟು ಕೊಡಿ; ವೋಟು ಕೊಡಿ’ ಎಂಬ ಘೋಷವಾಕ್ಯ ಚಿರಪರಿಚಿತವಾಗಿತ್ತು. ಎಡಪಕ್ಷಗಳವರು ಹಾಗೂ ಕೆಲ ಪಕ್ಷೇತರ ಅಭ್ಯರ್ಥಿಗಳು ಕೈಮುಗಿದು ಈ ಘೋಷಣೆ ಕೂಗುತ್ತ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರೆ, ಜನ ಅವರ ಜೋಳಿಗೆಗೆ ₹ 10, ₹ 20ರ ನೋಟುಗಳನ್ನು ಹಾಕುತ್ತಿದ್ದರು; ಜೊತೆಗೆ ಚುನಾವಣೆಯಲ್ಲಿ ಮತವನ್ನೂ ನೀಡಿ ಆಶೀರ್ವದಿಸುತ್ತಿದ್ದರು...’

ಲೋಕಸಭಾ ಚುನಾವಣೆಯ ಗತವೈಭವವನ್ನು ಮೆಲುಕು ಹಾಕಿದ ಸಿಪಿಐ ರಾಜ್ಯ ಘಟಕದ ಸಹಾಯಕ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ, ‘ಇಂದು ಪರಿಸ್ಥಿತಿ ಬದಲಾಗಿದೆ. ಹಣ ಕೊಟ್ಟು ಮತ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಹಣ ಬಲದ ಮೇಲೆ ಚುನಾವಣೆ ನಡೆಯುತ್ತಿರುವುದಕ್ಕೆ ಕಳವಳವನ್ನೂ ವ್ಯಕ್ತಪಡಿಸಿದರು.

‘ಕರಪತ್ರಗಳನ್ನು ಹಿಡಿದು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದೆವು. ಗೋಡೆ ಬರಹ, ಪೋಸ್ಟರ್‌ಗಳನ್ನು ಅಂಟಿಸಿ ಮತದಾರರ ಗಮನ ಸೆಳೆಯಲು ಯತ್ನಿಸುತ್ತಿದ್ದೆವು. ಕಾರ್ಯಕರ್ತರು ಸೈಕಲ್‌ನಲ್ಲಿ ಹಳ್ಳಿಗಳನ್ನು ಸುತ್ತಾಡಿ ಪ್ರಚಾರ ನಡೆಸುತ್ತಿದ್ದರು. ಆಟೊಕ್ಕೆ ಮೈಕ್‌ ಕಟ್ಟಿಕೊಂಡು ಊರೂರು ಪ್ರಚಾರ ಮಾಡುವುದೇ ದೊಡ್ಡ ವಿಚಾರವಾಗಿತ್ತು. ಆದರೆ, ಇಂದು ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲೇ ಅಭ್ಯರ್ಥಿಗಳ ಬಗ್ಗೆ ಹೆಚ್ಚು ಪ್ರಚಾರವಾಗುತ್ತಿದೆ. ಹಿಂದೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಬಸ್‌ಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಪ್ರಚಾರ ಮಾಡಿ ಬರುತ್ತಿದ್ದರು. ಆದರೆ, ಇಂದು ನಾಯಕರಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆಯನ್ನು ಮೊದಲೇ ಸಿದ್ಧಪಡಿಸಿಡಬೇಕು. ಪ್ರಚಾರ ಸಭೆಗಳಿಗೆ ಬಸ್‌ಗಳನ್ನು ಕಳುಹಿಸಿ ಜನರನ್ನು ಕರೆದುಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ’ ಎಂದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಮಚಂದ್ರಪ್ಪ ಅವರು ಬದಲಾದ ಚುನಾವಣಾ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದರು.

ಸರಳ–ಸಜ್ಜನಿಕೆಯೇ ಪ್ರಧಾನ: ‘ಸಂಸದರಾದ ಇಮಾಂ ಸಾಬ್‌, ಕೊಂಡಜ್ಜಿ ಬಸಪ್ಪ ಅವರು ತಾವು ಮಾಡಿದ ಕೆಲಸಗಳಿಂದಲೇ ಗುರುತಿಸಿಕೊಂಡಿದ್ದರು. ಅವರ ಸರಳ–ಸಜ್ಜನಿಕೆಯನ್ನು ನೋಡಿಯೇ ಜನ ಮತ ಹಾಕುತ್ತಿದ್ದರು. ಮೂರು ಬಾರಿ ಸಂಸದರಾಗಿದ್ದ ಚನ್ನಯ್ಯ ಒಡೆಯರ್‌ ಬಸ್‌ನಲ್ಲೇ ಸಂಚರಿಸಿ ಪ್ರಚಾರ ನಡೆಸುತ್ತಿದ್ದರು. ಇವರ ಆಡಳಿತಾವಧಿಯಲ್ಲಿ ಯಾವುದೇ ರೀತಿಯ ಹಗರಣಗಳು ನಡೆದಿಲ್ಲ. ತಮ್ಮ ಸಾಧನೆಗಳನ್ನೇ ಇಟ್ಟುಕೊಂಡು ಮತಯಾಚಿಸುತ್ತಿದ್ದರು. ಆದರೆ, ಇಂದು ಚುನಾವಣೆಯಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳೂ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಐದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಸಂಸತ್ತಿನಲ್ಲಿ ಮಾತನಾಡದ ‘ಅಸಂಸದೀಯ’ ವ್ಯಕ್ತಿಗಳೇ ಆಯ್ಕೆಯಾಗುತ್ತಿದ್ದಾರೆ’ ಎಂದು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಅಬ್ಬರದ ಪ್ರಚಾರಕ್ಕೆ ಕಡಿವಾಣ: ಈ ಹಿಂದೆ ಅಭ್ಯರ್ಥಿಗಳು ಹಳ್ಳಿಗಳಲ್ಲಿ ಪ್ರಚಾರ ಸಭೆ ನಡೆಸಿ ಮಂಡಕ್ಕಿ ಹಂಚಿದರೆ ಅದೇ ದೊಡ್ಡಸ್ತಿಕೆ ವಿಚಾರವಾಗಿತ್ತು. ಪಕ್ಷದ ನಾಯಕರು, ಅಭ್ಯರ್ಥಿಯ ಸಜ್ಜನಿಕೆಯನ್ನು ನೋಡಿ ಜನ ಮತ ಹಾಕುತ್ತಿದ್ದರು. ಎಂಬತ್ತರ ದಶಕದಿಂದ ಈಚೆಗೆ ಕ್ರಮೇಣ ಚುನಾವಣೆಯಲ್ಲಿ ಹಣ–ಹೆಂಡ ಹಂಚುವುದು ಮುಂಚೂಣಿಗೆ ಬಂದಿತು. ಮತದಾರರಿಗೆ ವಿವಿಧ ಬಗೆಯ ಉಡುಗೊರೆಗಳನ್ನು ನೀಡಿ ಆಮಿಷವೊಡ್ಡಲು ಆರಂಭಿಸಿದರು. ಹೀಗಾಗಿ ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಿ ಅಬ್ಬರದ ಪ್ರಚಾರಕ್ಕೆ ಕಡಿವಾಣ ಹಾಕಿದೆ. ಚುನಾವಣೆ ಬಗ್ಗೆ ಪ್ರಚಾರ ಮಾಡಲು ಶೇ 60ರಷ್ಟು ಹಣವನ್ನು ಆಯೋಗವೇ ಭರಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೂ ಸ್ಪರ್ಧಿಸಲು ಸಾಧ್ಯವಾಗಿದೆ ಎಂದು ಸಮಾಧಾನ ವ್ಯಕ್ತಪಡಿಸಿದರು.

‘ಒಂದೇ ವೇದಿಕೆಯಡಿ ಚರ್ಚಿಸಲಿ’

‘ಹಿಂದೆ ಚುನಾವಣೆ ವೇಳೆ ದೊಡ್ಡ ಹೋಬಳಿಗಳಲ್ಲಿ ಊರಿನ ಮುಖಂಡರು ಬಹಿರಂಗ ಸಭೆ ಏರ್ಪಡಿಸುತ್ತಿದ್ದರು. ಅಲ್ಲಿಗೆ ಎಲ್ಲಾ ಅಭ್ಯರ್ಥಿಗಳೂ ಬಂದು ತಾವು ಮಾಡಬೇಕೆಂದಿರುವ ಕೆಲಸಗಳ ಬಗ್ಗೆ ತಿಳಿಸಿ ಪ್ರಣಾಳಿಕೆ ಬಗ್ಗೆ ವಿವರ ನೀಡುತ್ತಿದ್ದರು. ಆದರೆ, ಇಂದು ಅಭ್ಯರ್ಥಿಗಳು ಪ್ರಚಾರ ಸಭೆಗಳಲ್ಲಿ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಗೆದ್ದು ಬಂದರೆ ಕ್ಷೇತ್ರಕ್ಕೆ ಏನು ಮಾಡುತ್ತೇವೆ ಎಂಬುದು ಗೌಣವಾಗುತ್ತಿದೆ’ ಎಂದು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

‘ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಲು ಚುನಾವಣಾ ಆಯೋಗವೇ ಪ್ರಚಾರದ ಸಂಪೂರ್ಣ ವೆಚ್ಚವನ್ನು ಭರಿಸಬೇಕು. ಹೋಬಳಿ ಮಟ್ಟದಲ್ಲಿ ನಿಗದಿತ ದಿನದಂದು ಪ್ರಚಾರ ಸಭೆಯನ್ನು ಏರ್ಪಡಿಸಿ ಒಂದೇ ವೇದಿಕೆಯಡಿ ಎಲ್ಲಾ ಅಭ್ಯರ್ಥಿಗಳಿಗೂ ತಮ್ಮ ಪ್ರಣಾಳಿಕೆ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು. ಆರ್ಥಿಕವಾಗಿ ದುರ್ಬಲರಾಗಿದ್ದರೂ, ತಮ್ಮ ಬುದ್ಧಿಮತ್ತೆ ಹಾಗೂ ದೂರದೃಷ್ಟಿಯಿಂದ ಮತದಾರರ ಮನ ಗೆಲ್ಲಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

**

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಮಹಾತ್ಮ ಗಾಂಧಿ ಅವರೇ ಬಂದು ಚುನಾವಣೆಗೆ ಸ್ಪರ್ಧಿಸಿದರೂ ಭದ್ರತಾ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎಂಬ ವಾತಾವರಣ ನಿರ್ಮಾಣಗೊಂಡಿದೆ.
– ಎಚ್‌.ಕೆ. ರಾಮಚಂದ್ರಪ್ಪ, ಸಿಪಿಐ ರಾಜ್ಯ ಸಹಾಯಕ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !