ವಾರ್ಡ್‌ವಾರು ಮೀಸಲಾತಿ ಅವೈಜ್ಞಾನಿಕ

7
ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಆರೋಪ

ವಾರ್ಡ್‌ವಾರು ಮೀಸಲಾತಿ ಅವೈಜ್ಞಾನಿಕ

Published:
Updated:

ದಾವಣಗೆರೆ: ನಗರಪಾಲಿಕೆ ವ್ಯಾಪ್ತಿಯ 45 ವಾರ್ಡ್‌ಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಆರೋಪಿಸಿದರು.

ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ, ಬೇಕಾಬಿಟ್ಟಿಯಾಗಿ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಈಗಾಗಲೇ ಪಾಲಿಕೆಯ ಹಲವು ಸದಸ್ಯರು ಹಾಗೂ ನಾಗರಿಕರು ಆಕ್ಷೇಪಣೆ ಸಲ್ಲಿಸಿದ್ದು, ಸರ್ಕಾರ ಈಗ ನಿಗದಿಪಡಿಸಿರುವ ಮೀಸಲಾತಿಯನ್ನು ರದ್ದುಪಡಿಸಬೇಕು. ಹಾಗೆಯೇ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ ಹೊಸದಾಗಿ ಮೀಸಲಾತಿಯನ್ನು ನಿಗದಿಪಡಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಮೀಸಲಾತಿ ನಿಗದಿ ಮಾಡುವಾಗ ವಾರ್ಡ್‌ಗಳಲ್ಲಿ ಯಾವ ಜನಾಂಗದವರ ಜನಸಂಖ್ಯೆ ಹೆಚ್ಚಾಗಿ ಇದೆ ಎಂಬುದನ್ನು ಗಣನೆಗೆ ತೆಗೆದುಕೊಂಡಿಲ್ಲ. ವಾರ್ಡ್‌ 1ರ ವ್ಯಾಪ್ತಿಗೆ ಸೇರುವ ಗಾಂಧಿನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರೇ ಇದ್ದಾರೆ. ಆದರೆ, ಈ ವಾರ್ಡ್‌ಗೆ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲು ಕಲ್ಪಿಸಲಾಗಿದೆ. ಅದೇ ರೀತಿ ಮಂಡಕ್ಕಿ ಭಟ್ಟಿ, ಬೀಡಿ ಲೇಔಟ್‌ನಲ್ಲಿ ಮುಸ್ಲಿಂ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಅಲ್ಲಿಗೆ ಹಿಂದುಳಿದ ವರ್ಗ (ಬಿ) ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಮರು ವಾಸವಿರುವ ಅಹಮದ್‌ ನಗರದಲ್ಲಿ ಸಾಮಾನ್ಯ ಮಹಿಳೆಗೆ, ಇನ್ನು ಪರಿಶಿಷ್ಟರ ಕಾಲೊನಿಗಳಾದ ಮುದ್ದಾಭೋವಿ ಮತ್ತು ಕೊರಚರ ಹಟ್ಟಿಯಲ್ಲಿ ಹಿಂದುಳಿದ ವರ್ಗ (ಎ)ಕ್ಕೆ ಮೀಸಲಾತಿ ನೀಡಲಾಗಿದೆ. ಹಾಗೆಯೇ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ಶೇ 80ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ವರ್ಗದ ಜನರಿದ್ದಾರೆ. ಈ ವಾರ್ಡ್‌ ಅನ್ನು ಪರಿಶಿಷ್ಟ ಜಾತಿಗೆ ಮೀಸಲು ಇಡಲಾಗಿದೆ. ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವಂಥ ಮೀಸಲಾತಿ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿಲ್ಲ ಎಂದು ದೂರಿದರು.

ಇನ್ನು ಪಿಜೆ ಬಡಾವಣೆ, ನಿಜಲಿಂಗಪ್ಪ ಬಡಾವಣೆಗಳಿಗೆ ಸತತವಾಗಿ 4ನೇ ಅವಧಿಗೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಿಡಲಾಗಿದೆ. ಈ ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾಯಿಸಬೇಕಾಗಿತ್ತು ಎಂದು ಹೇಳಿದರು. ಹಾಗೆಯೇ ಪಾಲಿಕೆ ವ್ಯಾಪ್ತಿಗೆ ನಗರದ ಸುತ್ತಲಿನ ಬೇತೂರು, ಕಲಪನಹಳ್ಳಿ, ಬಾತಿ, ಶಿರಮಗೊಂಡನಹಳ್ಳಿಗಳನ್ನು ಸೇರಿಸಿಕೊಳ್ಳಬೇಕಿತ್ತು. ಇದರಿಂದ ನಗರ ಬೆಳೆಯಲು ಹಾಗೆಯೇ ನಗರದ ಹೊರವಲಯದ ಪ್ರದೇಶಗಳು ಅಭಿವೃದ್ಧಿಯಾಗಲು ಅನುಕೂಲವಾಗುತ್ತಿತ್ತು. ಹೀಗಾಗಿ, ಕೂಡಲೇ ಈ ಬಗ್ಗೆಯೂ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರಸ್‌ ಮುಖಂಡರಾದ ಅಲ್ಲಾವುಲ್ಲಿ ಗಾಜಿಖಾನ್, ಪಿ.ವೈ. ಕುಮಾರ್, ಲಿಯಾಖತ್‌ ಅಲಿ, ಅಬ್ದುಲ್‌ ಜಬ್ಬಾರ್, ಇಬ್ರಾಹಿಂ ಸಾಹೇಬ್, ಅಶ್ರಫ್‌ ಅಲಿ, ಡಿ. ಶಿವಕುಮಾರ್, ರಮೇಶ್‌ ಥಾಮಸ್‌, ರಹಮತ್‌ವುಲ್ಲಾ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !