ಸೋಮವಾರ, ಮಾರ್ಚ್ 8, 2021
30 °C
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಮನೋಜ್‌ಕುಮಾರ್‌

ತ್ಯಾಜ್ಯದ ನಿರ್ವಹಣೆ, ಮರುಬಳಕೆಯ ಚಿಂತನೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪಕೃತಿ ಮೇಲೆ ಹಾನಿ ಮಾಡುವ ತ್ಯಾಜ್ಯದ ನಿರ್ವಹಣೆ ಹಾಗೂ ಮರು ಬಳಕೆ ಬಗ್ಗೆ ಇಂದು ಹೆಚ್ಚು ಚಿಂತಿಸುವ ಅಗತ್ಯ ಇದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಮನೋಜ್‌ಕುಮಾರ್‌ ಹೇಳಿದರು.

ಇಲ್ಲಿನ ಬಿಐಇಟಿ ಕಾಲೇಜಿನಲ್ಲಿ ಅಸೋಸಿಯೇಷನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್ ಸಹಯೋಗದಲ್ಲಿ ಗುರುವಾರ ನಡೆದ ತ್ಯಾಜ್ಯ ನಿರ್ವಹಣೆ ಮತ್ತು ಅವುಗಳ ನಾಶ ಕುರಿತ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಕಟ್ಟಡ ಒಡೆದ ಅವಶೇಷಗಳು ಸೇರಿ ಹಲವು ತ್ಯಾಜ್ಯಗಳು ಇಂದು ಕೆರೆ, ನದಿ ಸೇರಿ ಅವು ಕಲುಷಿತಗೊಳ್ಳುತ್ತಿವೆ. ಇಂದು ನಗರ ಪ್ರದೇಶಗಳ ಜನಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಅನುಗುಣವಾಗಿ ಕಟ್ಟಡಗಳು ತಲೆ ಎತ್ತುತ್ತಿವೆ. ಬೆಂಗಳೂರು ನಗರವೊಂದರಲ್ಲೇ ದಿನವೊಂದಕ್ಕೆ 1 ಸಾವಿರ ಮೆಟ್ರಿಕ್‌ ಟನ್‌ ನಿರ್ಮಾಣ ಮತ್ತು ನಾಶ ಮಾಡುತ್ತಿರುವ ಕಟ್ಟಡ ಅವಶೇಷಗಳ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇವುಗಳ ನಿರ್ವಹಣೆ ಬಗ್ಗೆ ಸೂಕ್ತ ಯೋಜನೆಗಳನ್ನು ರೂಪಿಸಿಲ್ಲ. ಪರಿಸರವನ್ನು ಹಾಳು ಮಾಡುತ್ತಿರುವ ನಾವು ಅದನ್ನು ಉಳಿಸುವ ಬಗ್ಗೆ ಗಂಭೀರವಾಗಿ ಆಲೋ‌ಚಿಸಬೇಕು’ ಎಂದು ಕಿವಿಮಾತು ಹೇಳಿದರು.

ತಜ್ಞರ ಯೋಜನೆ, ಚಿಂತನೆಗಳು ಸರ್ಕಾರದ ಮಟ್ಟದಲ್ಲಿ ನೀತಿಗಳಾಗಿ ರೂಪುಗೊಳ್ಳುತ್ತವೆ. ಈ ನಿಟ್ಟಿನಲ್ಲಿ ಇಲ್ಲಿ ವ್ಯಕ್ತವಾಗುವ ಆಲೋಚನೆ, ಚಿಂತನೆ ಉಪಯುಕ್ತವಾಗಬೇಕು. ಕಟ್ಟಡದ ಅವಶೇಷಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಸಂಬಂಧಪಟ್ಟ ಸಂಸ್ಥೆಯನ್ನು ಹೊಣೆಗಾರನ್ನಾಗಿಸುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.

ದುಬೈನ ಎಂಸ್ಕ್ವೇರ್‌ ಕನ್ಸ್‌ಲ್ಟೆಂನ್ಸಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ಮುಸ್ತಫಾ, ‘ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಿರುವ ವಿಷಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಆದರೆ ಪ್ರಸ್ತುತವಾಗಿದೆ. ಯುಐಇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ನಿರ್ಮಾಣ ಮಾರುಕಟ್ಟೆಯಲ್ಲಿ ಸೌದಿ ಅರೇಬಿಯಾದ ನಂತರದ ಸ್ಥಾನದಲ್ಲಿದೆ. ಈ ಹಂತದಲ್ಲಿ ನಾವು ತ್ಯಾಜ್ಯ ನಿರ್ವಹಣೆ ಬಗ್ಗೆಯೂ ಚಿಂತಿಸುವ ಅಗತ್ಯ ಇದೆ. ವರ್ಷವೊಂದಕ್ಕೆ ಜಾಗತಿಕವಾಗಿ 1 ಮಿಲಿಯನ್‌ ಟನ್‌ ತ್ಯಾಜ್ಯ ನಿರ್ಮಾಣ ಕಾಮಗಾರಿಗಳಿಂದ ಉತ್ಪತ್ತಿಯಾಗುತ್ತದೆ. ಸುಸ್ಥಿರ ಪ್ರಕೃತಿಗಾಗಿ ಕಟ್ಟಡ ತ್ಯಾಜ್ಯಗಳನ್ನು ಮರುಬಳಸುವ ಕುರಿತು ಆಲೋಚಿಸಬೇಕಿದೆ’ ಎಂದು ಕಿವಿಮಾತು ಹೇಳಿದರು.

ಬಿಐಇಟಿ ಕಾಲೇಜಿನ ನಿರ್ದೇಶಕ ವೈ. ವೃಷಭೇಂದ್ರಪ್ಪ, ‘ಬೆಂಗಳೂರಿನ ಹೈಕೋರ್ಟ್ ಅನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವ ಆಲೋಚನೆ ಮಾಡಿದಾಗ ಎಂಜಿನಿಯರ್‌ಗಳು ಕೆಲ ಬದಲಾವಣೆ ಮೂಲಕ ‍ಪುನರುಜ್ಜೀವನಗೊಳಿಸಬಹುದು ಎಂಬ ಸಲಹೆ ನೀಡಿದ್ದರಿಂದ ಐತಿಹಾಸಿಕ ಕಟ್ಟಡವೊಂದು ಉಳಿಯುವಂತಾಗಿದೆ. ತಜ್ಞರ ಸಲಹೆಗಳು ಈ ರೀತಿ ಉಪಯುಕ್ತವಾಗಿರಬೇಕು’ ಎಂದು ಸಲಹೆ ನೀಡಿದರು.

ಅಸೋಸಿಯೇಷನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ನ ಅಧ್ಯಕ್ಷ ಸಣ್ಣ ರತ್ನವೇಲ್‌, ಕಾರ್ಯಕ್ರಮದ ವ್ಯವಸ್ಥಾಪಕ ಸಮಿತಿಯ ಜಿ.ಬಿ. ಸುರೇಶ್‌ಕುಮಾರ್‌, ಜಿ.ಎಂ. ಲೋಹಿತಾಶ್ವ, ಜಿ.ಎಚ್. ಬಸವರಾಜ್‌, ಎಚ್‌.ಬಿ. ಅರವಿಂದ್‌, ಆರ್‌. ಎಸ್‌. ವಿಜಯಾನಂದ, ಬಿ.ಆರ್. ಸತೀಶ್‌, ಗರುಡಾ ಧ್ವಜನ್‌ ಸೇರಿ ವಿವಿಧ ರಾಜ್ಯ, ಜಿಲ್ಲೆಗಳ ಸಂಪನ್ಮೂಲ ವ್ಯಕ್ತಿಗಳು, ಶಿಬಿರಾರ್ಥಿಗಳು ಇದ್ದರು.

ಕಟ್ಟಡ ನಿರ್ಮಾಣ ವಸ್ತುಗಳ ಕುರಿತ ಮಳಿಗೆಗಳು ಗಮನ ಸೆಳೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.