ಬುಧವಾರ, ಡಿಸೆಂಬರ್ 11, 2019
26 °C
ಸೂಳೆಕೆರೆ: ನೀರಿನ ಘಟಕ ಪರಿಶೀಲಿಸಿದ ಶಾಸಕ ಮಾಡಾಳ್

6 ತಿಂಗಳಲ್ಲಿ 81 ಹಳ್ಳಿಗಳಿಗೆ ಸೂಳೆಕೆರೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚನ್ನಗಿರಿ: ತಾಲ್ಲೂಕಿನ 81 ಗ್ರಾಮಗಳಿಗೆ ಸೂಳೆಕೆರೆಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ₹ 54.73 ಕೋಟಿ ವೆಚ್ಚದ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮುಂದಿನ ಆರು ತಿಂಗಳಲ್ಲಿ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ತಾಲ್ಲೂಕಿನ ಸೂಳೆಕೆರೆಯ ಕುಡಿಯುವ ನೀರು ಪೂರೈಕೆ ಘಟಕದ ಆವರಣದಲ್ಲಿ ಶನಿವಾರ ನಡೆದ ನೀರು ಪೂರೈಕೆ ಸಂಬಂಧದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಚನ್ನಗಿರಿ ಪಟ್ಟಣಕ್ಕೆ ಮೂರು ದಿನಗಳಿಗೊಮ್ಮೆ ಸೂಳೆಕೆರೆ ನೀರನ್ನು ಪುರಸಭೆಯವರು ಪೂರೈಸುತ್ತಿದ್ದಾರೆ. ಪ್ರತಿ ದಿನ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬುದು ಒತ್ತಾಯ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದಾಗಿ ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.  ಒಂದು ಮೋಟಾರ್ ಕೆಟ್ಟಿದ್ದು, ಅದನ್ನು ಶೀಘ್ರ ದುರಸ್ತಿ ಮಾಡಿಸಿ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ನೀರನ್ನು ಪೂರೈಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿಗೆ ಎಚ್ಚರಿಸಿದರು.

ತಾಲ್ಲೂಕಿನ 81 ಹಳ್ಳಿಗಳಿಗೆ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇರುವ ಕ್ಷೇತ್ರ 35 ಹಳ್ಳಿಗಳಿಗೆ ಸಂಪರ್ಕವನ್ನು ಕಲ್ಪಿಸಲಾಗಿದೆ. ಆರು ತಿಂಗಳಲ್ಲಿ ಎಲ್ಲಾ 81 ಹಳ್ಳಿಗಳಿಗೂ ನೀರನ್ನು ಸರಬರಾಜು ಮಾಡಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಗುತ್ತಿಗೆದಾರರ ಮೇಲೆ ಒತ್ತಡವನ್ನು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಕುಡಿಯುವ ನೀರು ಸರಬರಾಜು ಘಟಕಗಳಿಗೆ ಯಾವುದೇ ರೀತಿಯ ವಿದ್ಯುತ್ ತೊಂದರೆಯಾಗದಂತೆ ನಿಗಾ ವಹಿಸುವಂತೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ತುಮ್ಕೋಸ್ ನಿರ್ದೇಶಕ ಟಿ.ವಿ. ರಾಜು ಪಟೇಲ್, ಎಂ.ಎನ್. ಮರುಳಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಜಿ.ಎನ್. ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಎನ್. ಲೋಕೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಿ.ಆರ್. ರೂಪಾ ಶ್ರೀಧರ್, ಪುರಸಭೆ ಮುಖ್ಯಾಧಿಕಾರಿ ಐ. ಬಸವರಾಜಪ್ಪ, ಬೆಸ್ಕಾಂ ಎಇಇ ನಾಗರಾಜ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು