ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ನದಿಯಲ್ಲಿ ನೀರಿದ್ದರೂ ತಪ್ಪಿಲ್ಲ ಹಾಹಾಕಾರ..

ಕವಲೆತ್ತಿನ ಜಾಕ್‌ವೆಲ್‌ ವಿದ್ಯುತ್ ಮಾರ್ಗದಲ್ಲಿ ದೋಷ
Published 4 ಜೂನ್ 2023, 0:00 IST
Last Updated 4 ಜೂನ್ 2023, 0:00 IST
ಅಕ್ಷರ ಗಾತ್ರ

ಇನಾಯತ್‌ ಉಲ್ಲಾ ಟಿ.

ಹರಿಹರ: ಇಲ್ಲಿನ ತುಂಗಭದ್ರಾ ನದಿಯಲ್ಲಿ ನೀರಿದ್ದರೂ ನಗರದ ಜನರು ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ವಿದ್ಯುತ್ ವ್ಯತ್ಯಯದಿಂದ ನೀರಿದ್ದರೂ ಸಿಗದ ಸ್ಥಿತಿ ಇಲ್ಲಿನ ನಿವಾಸಿಗಳದ್ದು.

ಕಳೆದ ಮಳೆಗಾಲದಲ್ಲಿ ಉತ್ತಮ ಮಳೆಯಿಂದಾಗಿ ಭದ್ರಾ ಜಲಾಶಯ ಮೈದುಂಬಿದೆ. ಕಾಲುವೆ, ನದಿಗೆ ನಿಗದಿತವಾಗಿ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಆದರೂ ನಗರಕ್ಕಿಲ್ಲ ಕುಡಿಯುವ ನೀರು.

ನಗರಸಭೆ ನಿರ್ಲಕ್ಷ್ಯ ಹಾಗೂ ಬೆಸ್ಕಾಂನ ವಿದ್ಯುತ್‌ ಪೂರೈಕೆ ಸ್ಥಗಿತದಿಂದಾಗಿ ತಿಂಗಳಲ್ಲಿ ನಾಲ್ಕೈದು ದಿನಗಳು ನದಿ ನೀರಿನ ಸರಬರಾಜು ಸ್ಥಗಿತಗೊಳ್ಳುತ್ತಿದೆ. ಇದರಿಂದ ನದಿ ದಡದಲ್ಲಿದ್ದರೂ ನಗರದ ಜನರು ನೀರಿಗಾಗಿ ಪರದಾಡುವಂತಾಗಿದೆ.

ಬೆಸ್ಕಾಂ, ಹೆಸ್ಕಾಂ ಕಣ್ಣಾಮುಚ್ಚಾಲೆ:

ನಗರದಲ್ಲಿರುವ ನೀರು ಶುದ್ದೀಕರಣ ಘಟಕಕ್ಕೆ ನೀರು ಸರಬರಾಜು ಮಾಡುವ ಜಾಕ್‌ವೆಲ್ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ನದಿ ದಡದಲ್ಲಿದೆ. ಇದು ಹೆಸ್ಕಾಂ ವ್ಯಾಪ್ತಿಗೆ ಬರುತ್ತದೆ. ಇದು ಗ್ರಾಮೀಣ ಭಾಗವಾಗಿರುವುದರಿಂದ 24 ಗಂಟೆಯಲ್ಲಿ 8ರಿಂದ 10 ಗಂಟೆ ವಿದ್ಯುತ್ ವ್ಯತ್ಯಯವಾಗುತ್ತದೆ. ಆಗ ನದಿಯಿಂದ ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜು ಮಾಡುವ ಕಾರ್ಯಕ್ಕೆ ಸ್ಥಗಿತಗೊಳ್ಳುತ್ತದೆ. ಇದು ಪಟ್ಟಣದ ಜನರನ್ನು ಹೈರಾಣಾಗಿಸಿದೆ.

ಒಂದು ವೇಳೆ ಹೆಸ್ಕಾಂ ವ್ಯಾಪ್ತಿಯ ಜಾಕ್‌ವೆಲ್‌ನಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗದೆ ನಿರಂತವಾಗಿ ನೀರು ಶುದ್ಧೀಕರಣ ಘಟಕಕ್ಕೆ ಕಳಿಸಿದರೆ, ಬೆಸ್ಕಾಂ ವ್ಯಾಪ್ತಿಯ ಶುದ್ಧೀಕರಣ ಘಟಕದಲ್ಲಿ ವಿದ್ಯುತ್ ಮಾಯವಾಗುತ್ತದೆ. ಆಗಲೂ ನಗರದಲ್ಲಿ ನೀರು ಸರಬರಾಜು ಇರುವುದಿಲ್ಲ.

ಎಕ್ಸ್‌ಪ್ರೆಸ್ ಲೈನ್ ಕನ್ನಡಿಯ ಗಂಟು:

ಗ್ರಾಮೀಣ ಭಾಗದಲ್ಲಿರುವ ಕವಲತ್ತಿನ ಜಾಕ್‌ವೆಲ್ ಘಟಕಕ್ಕೆ ಸಹಜವಾಗಿಯೇ ವಿದ್ಯುತ್ ವ್ಯತ್ಯಯವಾಗುತ್ತದೆ. ಆ ಘಟಕಕ್ಕೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವ ಪ್ರತ್ಯೇಕ ಎಕ್ಸ್‌ಪ್ರೆಸ್‌ ಪವರ್‌ಲೈನ್ ಅಳವಡಿಸಬೇಕು ಎಂಬುದು ದಶಕಗಳ ಬೇಡಿಕೆ ಈಚೆಗೆ ಈಡೇರಿದೆ. ಆದರೆ ಉಪಯೋಗವಾಗಿಲ್ಲ ಎಂದು ದೂರುತ್ತಾರೆ ನಗರಸಭೆ ಸದಸ್ಯ ಆಟೊ ಹನುಮಂತಪ್ಪ.

ಎಕ್ಸ್‌ಪ್ರೆಸ್ ಲೈನ್ ಕಾಮಗಾರಿಯನ್ನು 8 ವರ್ಷಗಳ ಹಿಂದೆ ಏಜೆನ್ಸಿಯೊಂದಕ್ಕೆ ನೀಡಲಾಗಿದೆ. ಆದರೆ ಕಾಮಗಾರಿ ಈಚೆಗೆ ಪೂರ್ಣಗೊಂಡಿದೆ. 8 ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಿದ್ದರೂ ಉಪಯೋಗವಾಗಿಲ್ಲ. ತಾಂತ್ರಿಕ ದೋಷದಿಂದ ವಿದ್ಯುತ್‌ ಪೂರೈಕೆಯೇ ಆಗುತ್ತಿಲ್ಲ. ಇದರಿಂದ ಸಮಸ್ಯೆ ಹೆಚ್ಚಿದೆ.

ನದಿಯಲ್ಲಿ ನೀರಿದ್ದರೂ, ವಿದ್ಯುತ್‌ ಮಾರ್ಗವಿದ್ದರೂ ಪರದಾಡುವ ಸ್ಥಿತಿ ಇಲ್ಲಿನ ಜನರದ್ದು. ಈ ಬಗ್ಗೆ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿ ಎನ್‌.ಇ. ಸುರೇಶಸ್ವಾಮಿ ಒತ್ತಾಯಿಸಿದರು.

₹ ‌40 ಲಕ್ಷ ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಲೈನ್ ಕಾಮಗಾರಿ ಆಗಿದೆ. ತಾಂತ್ರಿಕ ದೋಷದಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಈ ಮಾರ್ಗದ ಪರಿಶೀಲನೆ ನಡೆಸಿ ವರದಿ ನೀಡಲು ರಾಣೆಬೆನ್ನೂರು ಹೆಸ್ಕಾಂ ಕಚೇರಿಗೆ ಕೆಲ ತಿಂಗಳ ಹಿಂದೆ ಪತ್ರ ಬರೆದು ಕೋರಲಾಗಿದೆ. ಆದರೆ ಈವರೆಗೆ ಅವರಿಂದ ಉತ್ತರ ಬಂದಿಲ್ಲ. ಮತ್ತೊಮ್ಮೆ ಪತ್ರ ಬರೆದು ನೀರಿನ ಸಮಸ್ಯೆ ಬಗಹರಿಸಲಾಗುವುದು ಎಂದು ನಗರಸಭೆ ಎಇಇ ನವೀನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಎಕ್ಸ್‌ಪ್ರೆಸ್‌ ಲೈನ್ ಮಾರ್ಗದಲ್ಲಿ ತಾಂತ್ರಿಕ ದೋಷದಿಂದ ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಣೆಬೆನ್ನೂರು ಹೆಸ್ಕಾಂ ಕಚೇರಿಗೆ ಪತ್ರ ಬರೆಯಲಾಗಿದೆ.

-ನವೀನ್ ಕುಮಾರ್‌ ನಗರಸಭೆ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT