ಜಗಳೂರು: ತಾಲ್ಲೂಕಿನ 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡುವ ಮೂಲಕ ಬರಪೀಡಿತ ತಾಲ್ಲೂಕನ್ನು ಹಸಿರಾಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಕಾರ್ಮಿಕರಿಗೆ 2000 ಆಹಾರ ಸಾಮಗ್ರಿ ಕಿಟ್ ವಿತರಿಸಿ ಅವರು ಮಾತನಾಡಿದರು.
‘57 ಕೆರೆ ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ. ಎಲ್ಲಾ ಕೆರೆಗಳಿಗೂ ಸಮರ್ಪಕವಾಗಿ ನೀರು ಹರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನಾನು ಉಸ್ತುವಾರಿ ಸಚಿವನಾದ ಸಂದರ್ಭದಿಂದಲೂ ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಜನರ ಕಷ್ಟಗಳನ್ನು ಅರಿತು ಸ್ಪಂದಿಸುವ ಕೆಲಸ ಮಾಡಿದ್ದೇನೆ. ಯಾರೂ ಹಸಿವಿನಿಂದ ನರಳಬಾರದು ಎಂದು ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್‍ಗಳನ್ನು ನೀಡುತ್ತಿದ್ದೇವೆ. ಸರ್ಕಾರದಿಂದ ಸಹಾಯಧನವನ್ನು ನೀಡಲಾಗಿದೆ’ ಎಂದು ಹೇಳಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ‘ಮಾಜಿ ಶಾಸಕರು ಸೇರಿ ಯಾರಿಗೂ ನಾನು ಕೇಡು ಬಯಸಿದವನಲ್ಲ. ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರ ಆರೋಗ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರೆ ಗಾಣಗಟ್ಟೆ ಮಾಯಮ್ಮದೇವಿಯ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ. ಕ್ಷೇತ್ರದ ಜನರ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಬರಪೀಡಿತ ಕ್ಷೇತ್ರದ ಕೆರೆಗಳನ್ನು ತುಂಬಿಸುವುದು ಹಾಗೂ ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸುವುದಷ್ಟೇ ನನ್ನ ಆದ್ಯತೆ’ ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ತಹಶೀಲ್ದಾರ್ ನಾಗವೇಣಿ, ಇಒ ಲಕ್ಷ್ಮೀಪತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ಲಲಿತಮ್ಮ, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್ ಇದ್ದರು. ಸಮಾರಂಭಕ್ಕೂ ಮೊದಲು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರನ್ನು ಸಚಿವರು, ಸಂಸದರು ಹಾಗೂ ಶಾಸಕರು ಭೇಟಿ ಮಾಡಿ ಸಾಂತ್ವನ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.