ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಉತ್ತಮ ಆದಾಯ ತರುವ ಕರಬೂಜ

ಹೊನ್ನಾಳಿ ತಾಲ್ಲೂಕಿನ ನೂರಾರು ಎಕರೆ ಪ್ರದೇಶದಲ್ಲಿ ಉತ್ತಮ ಬೆಳೆ
Last Updated 28 ಫೆಬ್ರುವರಿ 2023, 5:57 IST
ಅಕ್ಷರ ಗಾತ್ರ

ಹೊನ್ನಾಳಿ: ಬೇಸಿಗೆ ಬಂತೆಂದರೆ ಕರಬೂಜ ಹಣ್ಣುಗಳ ಘಮ ಹೊನ್ನಾಳಿಯ ಎಲ್ಲೆಡೆ ಪಸರಿಸಿರುತ್ತದೆ. ಬಣ್ಣ ಹಾಗೂ ಸುವಾಸನೆಯ ಮೂಲಕ ದಾರಿ ಹೋಕರನ್ನು ಸೆಳೆಯುವ ಈ ಕರಬೂಜ ಹಣ್ಣುಗಳು ಆರೋಗ್ಯಕ್ಕೆ ಹಿತಕರ.

ಬೇಸಿಗೆಯ ಆರಂಭದ ದಿನಗಳಲ್ಲಿ ಶುರುವಾಗುವ ಇದರ ಮಾರಾಟ ಮೂರು ತಿಂಗಳ ಅವಧಿಗೆ ಕೋಟ್ಯಂತರ ರೂಪಾಯಿಗಳ ವಹಿವಾಟು ಕಂಡುಕೊಳ್ಳುತ್ತದೆ. ಈ ಹಣ್ಣುಗಳು ಜ್ಯೂಸ್, ಸೀಕರಣೆಗೆ ಪ್ರಸಿದ್ಧ. ಮಧುಮೇಹ ಇರುವವರು, ಬಾಣಂತಿಯರು ಸಹ ಯಾವುದೇ ಆತಂಕವಿಲ್ಲದೇ ಈ ಹಣ್ಣುಗಳನ್ನು ಸೇವಿಸಬಹುದು ಎನ್ನುತ್ತಾರೆ ರೈತರು.

ದಿನವೊಂದಕ್ಕೆ ಸಗಟು ದರದಂತೆ ₹ 8 ಲಕ್ಷದಿಂದ ₹ 10 ಲಕ್ಷದವರೆಗೂ ಮಾರುಕಟ್ಟೆ ಹೊಂದಿರುವ ಈ ಹಣ್ಣು, ಹೆಚ್ಚು ಕಡಿಮೆ ಕೇವಲ ಎರಡು ತಿಂಗಳಲ್ಲಿ ₹ 80 ಲಕ್ಷದಿಂದ ₹ 1 ಕೋಟಿವರೆಗೂ ವಹಿವಾಟು ನಡೆಸುತ್ತದೆ ಎನ್ನುತ್ತಾರೆ ಈ ಹಣ್ಣು ಮಾರುವ ದಲ್ಲಾಳರು.

ಹೊನ್ನಾಳಿ ತಾಲ್ಲೂಕಿನ ಹೊಳೆಮಾದಾಪುರ ಸೇರಿದಂತೆ ದೇವನಾಯನಕಹಳ್ಳಿ, ಬೇಲಿಮಲ್ಲೂರು, ಹರಳಹಳ್ಳಿಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಕರಬೂಜ ಬೆಳೆಯುತ್ತಾರೆ. ‘ಇದಕ್ಕೆ ಇಬ್ಬನಿ ಹಾಗೂ ಶೀತ ಗುಣ ಹೊಂದಿರುವ ನೆಲ ಸೂಕ್ತವಾದ ಪ್ರದೇಶವಾದ್ದರಿಂದ ಹೆಚ್ಚಾಗಿ ತೇವಾಂಶವಿರುವ ಪ್ರದೇಶಗಳಲ್ಲಿ ಹಾಗೂ ನದಿ ದಡದಲ್ಲಿ ಬೆಳೆಯುತ್ತಾರೆ. ಇದಕ್ಕೆ ಹೆಚ್ಚು ನೀರು ಹಾಯಿಸುವ ಅಗತ್ಯವಿಲ್ಲ. ಕೇವಲ ಸಗಣಿ ಗೊಬ್ಬರ ಬಳಸಿ ಬೆಳೆಯಲಾಗುತ್ತದೆ. ರೋಗ ಬಂದಾಗ ಸರ್ಕಾರಿ ಗೊಬ್ಬರ, ಔಷಧವನ್ನು ಅನಿವಾರ್ಯವಾಗಿ ಸಿಂಪಡಿಸಬೇಕಾಗುತ್ತದೆ’ ಎನ್ನುತ್ತಾರೆ ರೈತರು.

‘3 ತಿಂಗಳ ಬೆಳೆಯಾಗಿರುವ ಈ ಹಣ್ಣಿನ ಬೀಜ ಬಿತ್ತನೆಯನ್ನು ಡಿಸೆಂಬರ್ ತಿಂಗಳಲ್ಲಿ ಆರಂಭಿಸಲಾಗುತ್ತದೆ. ಭೂಮಿ ಹದ ಮಾಡಿಕೊಂಡು ಸಲಾಕೆಯಲ್ಲಿ ಸರಿ ತೆಗೆದು ಗುಣಿ ಮಾಡಿ ಸಗಣಿ ಗೊಬ್ಬರ ಹಾಕಲಾಗುತ್ತದೆ. 20 ದಿನ ಬಿಟ್ಟು ನೆನೆ ಇಟ್ಟ ಬೀಜಗಳನ್ನು ಒಣಬಟ್ಟೆಯಿಂದ ಒರೆಸಿ ಅರಳೆಲೆಯಲ್ಲಿ ಬಟ್ಟೆ ಸುತ್ತಿ ಕಟ್ಟಲಾಗುತ್ತದೆ. 2 ದಿನಗಳಿಗೆ ಬೀಜ ಮೊಳಕೆ ಬರುತ್ತದೆ. ಆ ಮೇಲೆ ಮಡಿ ಮಾಡಿ ಬೀಜ ಭೂಮಿಯಲ್ಲಿ ಉಳುವುದರ ಜೊತೆಗೆ ಸಗಣಿ ಗೊಬ್ಬರ ಹಾಕಲಾಗುತ್ತದೆ’ ಎನ್ನುತ್ತಾರೆ ರೈತರಾದ ಕುಬೇರಪ್ಪ, ಕೆಂಗಟ್ಟೆ ರಾಜಪ್ಪ, ಶಿವಾನಂದಪ್ಪ ಮತ್ತು ಮದರ್ ಸಾಬ್. ‘ಬೀಜ ಹಾಕಿದ 8 ದಿನಗಳಿಗೆ ಎರಡು ಎಲೆಗಳು ಚಿಗುರೊಡೆಯುತ್ತವೆ. ಆಗ ಅದನ್ನು ಕಿತ್ತು ಗುಣಿಗಳಿಗೆ ಗೊಬ್ಬರ ಸಹಿತ ಸಸಿಯನ್ನು ಹಚ್ಚಲಾಗುತ್ತದೆ’ ಎನ್ನುತ್ತಾರೆ ಮಾದಾಪುರದ ರೈತ ಮಾರುತಿ.

‘ಕೇವಲ 3 ತಿಂಗಳಿಗೆ ಈ ಬೆಳೆ ಫಲಕ್ಕೆ ಬರುತ್ತದೆ. ಹಣ್ಣುಗಳ ಆಕಾರದ ಮೇಲೆ ದರವನ್ನು ನಿಗದಿ ಮಾಡಲಾಗುತ್ತದೆ’ ಎನ್ನುತ್ತಾರೆ ವ್ಯಾಪಾರಿ ಮತ್ತು ಗೃಹರಕ್ಷಕ ದಳದ ಮುಖ್ಯಸ್ಥರಾದ ಕಳ್ಳಿ ನಾಗರಾಜ್. ಹಣ್ಣುಗಳನ್ನು ಪ್ರತಿ ದಿನ ಬೆಳಗಿನ ಜಾವ 4 ಗಂಟೆಗೆ ಮುಕ್ತ ಮಾರುಕಟ್ಟೆಗೆ ತರಲಾಗುತ್ತದೆ. ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿರಾಳಕೊಪ್ಪ, ಬಂಕಾಪುರ, ಕಡೂರು, ಬೀರೂರು, ತರಿಕೇರಿ ಭಾಗಗಳ ರೈತರು ಪ್ರತಿದಿನ ಬೆಳಗಿನ 4ರ ಹೊತ್ತಿಗೆ ಮಾರುಕಟ್ಟೆಗೆ ಬಂದು ಖರೀದಿ ಮಾಡುತ್ತಾರೆ. 4ರಿಂದ ಬೆಳಿಗ್ಗೆ 9ರವರೆಗೆ ವಹಿವಾಟು ನಡೆಯುತ್ತದೆ.

.........

ರೋಗ ಬಾಧೆ ಸಂಭವವೂ ಇದೆ

‘ಎಲ್ಲ ಬೆಳೆಗಳಂತೆ ಈ ಹಣ್ಣುಗಳಿಗೂ ರೋಗ ಬಾಧೆ ತಪ್ಪಿದ್ದಲ್ಲ. ಬುಡ ಕೊಳೆರೋಗ, ಕಡಕ್ ರೋಗ, ಬುಟ್ರಿ ರೋಗ ಬಂದು ಬೆಳೆ ನಾಶವಾಗುವ ಸಂಭವವೂ ಇದೆ. ಈ ಆಪತ್ಕಾಲ ಬಿಟ್ಟರೆ ಉಳಿದಂತೆ ರೈತರು ಅಲ್ಪಾವಧಿಯಲ್ಲಿಯೇ ಒಳ್ಳೆಯ ಲಾಭ ಗಳಿಸುತ್ತಾರೆ’ ಎನ್ನುತ್ತಾರೆ ಹಣ್ಣು ವ್ಯಾಪಾರಿ ಅಲ್ಲಾಭಕ್ಷು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT