ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಗಳಿಂದ ಮನವಿ ಬಂದರೆ ರೈಲು ಓಡಿಸಲು ಸಿದ್ಧ: ಸಚಿವ ಸುರೇಶ್ ಅಂಗಡಿ

ದಾವಣಗೆರೆಯ ರೈಲು ನಿಲ್ದಾಣ ಕಾಮಗಾರಿ ಪರಿಶೀಲನೆ
Last Updated 26 ಜೂನ್ 2020, 14:22 IST
ಅಕ್ಷರ ಗಾತ್ರ

ದಾವಣಗೆರೆ: ‘ರೈಲು ಓಡಿಸುವಂತೆ ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದರೆ ರೈಲು ಸೇವೆ ಪುನರಾರಂಭಿಸಲು ನಾವು ಸಿದ್ಧರಿದ್ದೇವೆ’ ಎಂದು ರೈಲ್ವೆ ರಾಜ್ಯ ಖಾತೆಸಚಿವ ಸುರೇಶ ಅಂಗಡಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಕೊರೊನಾ ಇರುವುದರಿಂದ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಜೊತೆಗೆ ದೇಶದ ಆರ್ಥಿಕತೆಯೂ ವೃದ್ಧಿಯಾಗಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ ಬಂದರೆ ರೈಲು ಸೇವೆ ಪುನರಾರಂಭಿಸಲಾಗುವುದು’ ಎಂದರು.

‘ಸದ್ಯ ರಾಷ್ಟ್ರ ರಾಜಧಾನಿಯಿಂದ ರಾಜ್ಯ ರಾಜಧಾನಿಗಳಿಗೆ ಓಡಿಸುತ್ತಿರುವ ಶ್ರಮಿಕ ರೈಲಿನಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ರೈಲುಗಳು ವಾಪಸ್‌ ಖಾಲಿ ಹೋಗುತ್ತಿವೆ. ನಮ್ಮ ಕಾರ್ಮಿಕರನ್ನು ನಮ್ಮ ರಾಜ್ಯದಲ್ಲೇ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಲು ಆದ್ಯತೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘2022 ಅಂತ್ಯದೊಳಗೆ ದೇಶದ ಎಲ್ಲಾ ರೈಲು ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸುವ ಗುರಿ ಹೊಂದಲಾಗಿದೆ. ಇದೇ ಅವಧಿಯಲ್ಲಿ ಮೀರಜ್‌ನಿಂದ ಬೆಂಗಳೂರುವರೆಗೆ ಜೋಡಿ ಮಾರ್ಗ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವನ್ನೂ ಹೊಂದಿದ್ದೇವೆ. ರಫ್ತಿಗೆ ಅನುಕೂಲವಾಗುವ ಉದ್ದೇಶದಿಂದ ಮುಂಬೈ–ಕೋಲ್ಕತ್ತ ನಡುವಿನ ಜೋಡಿ ಮಾರ್ಗ ಕಾಮಗಾರಿಯನ್ನೂ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್‌.ಎ. ರವೀಂದ್ರನಾಥ, ಎಸ್‌.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್‌, ಮೈಸೂರು ವಿಭಾಗದ ಡಿಆರ್‌ಎಂ ಅಪರ್ಣ ಗಾರ್ಗ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT