ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿಯೆಂಬ ಬಸ್‌ ಹತ್ತಿಯೇ ಹತ್ತುತ್ತೇವೆ; ಜಯಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಣೆ
Last Updated 30 ಸೆಪ್ಟೆಂಬರ್ 2021, 12:37 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮ ಹೋರಾಟ ಅಂತಿಮ ಘಟ್ಟ ತಲುಪುತ್ತಿದೆ. ಬಸ್‌ಸ್ಟ್ಯಾಂಡ್‌ ವರೆಗೆ ಬಂದಿದ್ದೇವೆ. 2ಎ ಎಂಬ ಬಸ್‌ ಹತ್ತಿಯೇ ತೀರುತ್ತೇವೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಮುಖ್ಯಮಂತ್ರಿಗಳನ್ನು ಆಹ್ವಾನಿಸುವುದು, ಸಭೆ ನಡೆಸುವುದು, ಸನ್ಮಾನ ಮಾಡುವುದು, ಮನವಿ ಅರ್ಪಿಸುವುದು, ಉಪ್ಪಿಟ್ಟು ತಿನ್ನುವುದು, ಅವರು ಆಶ್ವಾಸನೆ ನೀಡಿ ತೆರಳುವುದು ಇದನ್ನೇ 25 ವರ್ಷಗಳ ಕಾಲ ಮಾಡಿದೆವು. ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವುದು ಅನಿವಾರ್ಯವಾಯಿತು. ಅದರಂತೆ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಶೇ 98ರಷ್ಟು ಹತ್ತಿರ ಬಂದಿದ್ದೇವೆ. ಇನ್ನು ಶೇ 2 ಕೆಲಸ ಬಾಕಿ ಇದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಆಗ್ರಹಕ್ಕೆ ಹೋರಾಟದ ಸ್ವರೂಪ ನೀಡಿ ಪಾದಯಾತ್ರೆ ಮಾಡಲಾಯಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 23 ದಿನಗಳ ಕಾಲ ಪ್ರತಿಭಟನೆ ಮಾಡಿದೆವು. ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ 6 ತಿಂಗಳ ಕಾಲ ಗಡುವು ಕೇಳಿದರು. ಈಗ ಗಡುವು ಮುಗಿದಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಭರವಸೆ ಈಡೇರಿಸುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅ.1ರ ಒಳಗೆ ಮುಖ್ಯಮಂತ್ರಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದೇ ಇದ್ದರೆ ಮೂರನೇ ಹಂತದ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಕೆಲವರು ಎಸಿರೂಂನಲ್ಲಿ ಕುಳಿತು ಹೋರಾಟ ಮಾಡುತ್ತಾರೆ. ಇನ್ನು ಕೆಲವರು ರಸ್ತೆಗೆ ಬಂದು ಹೋರಾಡುತ್ತಾರೆ. ಕೆಲವರು ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ. ಎರಡೂ ಬೇಕು. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಆದೇಶಪತ್ರ ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ಪ್ರತಿಜ್ಞಾ ಪಂಚಾಯತ್‌ ಸಮಾವೇಶ 31 ದಿನಗಳಿಂದ ನಡೆಯುತ್ತಿದೆ. ಮಾಜಿ ಸಿಎಂ ದಿವಂಗತ ಜೆ.ಎಚ್. ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಅ.1ರಂದು ಬೆಂಗಳೂರಿನ ಭಾರತೀಯ ವಿದ್ಯಾಮಂದಿರದಲ್ಲಿ ಆಯೋಜಿಸಿದ್ದೇವೆ. ಪಂಚಮಸಾಲಿ ಲಿಂಗಾಯತರು, ಗೌಳಿ ಲಿಂಗಾಯತರು, ಗೌಡ ಲಿಂಗಾಯತರು, ದೀಕ್ಷಾ ಲಿಂಗಾಯತರ ಸಂಯುಕ್ತ ಸಮಾವೇಶ ನಡೆಯಲಿದೆ. ಸರ್ಕಾರ ಮೀಸಲಾತಿ ಬಗ್ಗೆ ಭರವಸೆ ನೀಡದೇ ಹೋದರೆ ಮುಂದಿನ ಹೋರಾಟದ ಬಗ್ಗೆ ಅಲ್ಲಿಯೇ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ್, ಎಚ್.ಬಿ. ಅರವಿಂದ್, ತ್ರಿಶೂಲ್ ಪಾಣಿ ಪಟೇಲ್, ಎಸ್ ಓಂಕಾರಪ್ಪ, ಶಾಂತಕುಮಾರ್ ಅವರೂ ಇದ್ದರು.

ಶಾಪ ತಟ್ಟಲಿದೆ

ಮಠದಲ್ಲಿ ಇರಬೇಕಿದ್ದ ಸ್ವಾಮೀಜಿಯವರನ್ನು ಬೀದಿಗೆ ಬರುವಂತೆ ಮಾಡಿದವರಿಗೆ ಶಾಪ ತಟ್ಟಲಿದೆ ಎಂದು ಹಿಂದೆ ಹೇಳಿದ್ದೆ. ಬಿ.ಎಸ್‌. ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಅದೂ ಕಾರಣ ಇರಬಹುದು. ಭರವಸೆ ನೀಡಿ ಮೋಸ ಮಾಡುವವರಿಗೆ ಮುಂದೆಯೂ ಶಾಪ ತಟ್ಟಲಿದೆ ಎಂದು ಅಖಿಲ ಭಾರತ ಲಿಂಗಾತಯ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT