ಕಲಾವಿದರ ಉಳಿವಿಗೆ ಬೇಕು ಸುಸಜ್ಜಿತ ರಂಗಮಂದಿರ

7
‘ಸಾಧ್ವಿ ಸರಸ್ವತಿ’ ನಾಟಕ ಪ್ರದರ್ಶನ ಉದ್ಘಾಟಿಸಿದ ಜಾನಪದ ತಜ್ಞ ಡಾ. ಈಶ್ವರಪ್ಪ

ಕಲಾವಿದರ ಉಳಿವಿಗೆ ಬೇಕು ಸುಸಜ್ಜಿತ ರಂಗಮಂದಿರ

Published:
Updated:

ಪ್ರಜಾವಾಣಿ ವಾರ್ತೆ

ದಾವಣಗೆರೆ: ಒಳ್ಳೆಯ ರಂಗಭೂಮಿ ಇಲ್ಲದಿದ್ದರೆ ಸಹಜವಾಗಿಯೇ ಕಲಾವಿದರ ಕೊರತೆಯಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ರಂಗಮಂದಿರ ಇಲ್ಲದಿರುವುದು ಬೇಸರದ ಸಂಗತಿ ಎಂದು ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

ಶ್ರೀಗುರು ವಾದ್ಯವೃಂದ, ಚಿಂದೋಡಿ ಶಾಂತರಾಜ್‌ ಅಸೋಸಿಯೇಷನ್‌ ಆಶ್ರಯದಲ್ಲಿ ವಿನೋಬನಗರದ ಕಲ್ಲೂರು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಸಾಧ್ವಿ ಸರಸ್ವತಿ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ರಂಗಮಂದಿರವಿದೆ. ದಾವಣಗೆರೆ ವೃತ್ತಿ ರಂಗಭೂಮಿಯ ತವರುಮನೆ ಹಾಗೂ ಗಂಡನ ಮನೆಯೂ ಆಗಿದೆ. ಹೀಗಿದ್ದರೂ ಇಂದಿಗೂ ನಮ್ಮಲ್ಲಿ ಸುಸಜ್ಜಿತ ರಂಗಮಂದಿರ ಇಲ್ಲ’ ಎಂದು ಅವರು ವಿಷಾದಿಸಿದರು.

ರಂಗಭೂಮಿ ಜನರ ಮನಸ್ಸನ್ನು ಅರಳಿಸುವ ಶಕ್ತಿ ಕೇಂದ್ರ. ಉತ್ತರ ಕರ್ನಾಟಕದಲ್ಲಿ ಸಂಚರಿಸಿದ್ದ ಹಲವು ನಾಟಕ ಕಂಪನಿಗಳು ಮನರಂಜನೆಯ ಜೊತೆಗೆ ಕರ್ನಾಟಕದ ಇತಿಹಾಸದ ಜ್ಞಾನವನ್ನೂ ಜನರಿಗೆ ನೀಡಿದೆ ಎಂದರು.

‘ಇಂದು ಮಾಧ್ಯಮಗಳ ದೊಡ್ಡ ಪ್ರಹಾರದಿಂದ ರಂಗಭೂಮಿಯು ಕ್ಷೀಣಿಸುತ್ತಿದೆ. ನಮ್ಮ ಅಪ್ಪ, ಅಜ್ಜನ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಾಗಿದೆ. ವೃತ್ತಿ ರಂಗಭೂಮಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಟಕ ಅಕಾಡೆಮಿಯ ಜೊತೆಗೆ ಜನರ ಮೇಲೆಯೂ ಇದೆ’ ಎಂದು ಈಶ್ವರಪ್ಪ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಬಸವಪ್ರಭು ಸ್ವಾಮೀಜಿ, ‘ನಾಟಕ ಬದುಕಿನ ಕನ್ನಡಿ ಇದ್ದಂತೆ. ಇದರಲ್ಲಿ ಜೀವನದ ಪ್ರತಿಬಿಂಬವನ್ನು ನೋಡುತ್ತೇವೆ. ಇದು ಸಮಾಜದ ಹುಳುಕನ್ನು ತೋರಿಸುತ್ತದೆ. ಸಮಾಜದ ಮನಃ ಪರಿವರ್ತನೆ ಮಾಡುವ ಶಕ್ತಿ ರಂಗಭೂಮಿಗೆ ಇದೆ’ ಎಂದು ಅಭಿಪ್ರಾಯಪಟ್ಟರು.

‘ರಂಗಭೂಮಿ ಕಲಾವಿದರು ತಮ್ಮ ಕಷ್ಟವನ್ನು ನುಂಗಿಕೊಂಡು ಎಲ್ಲರಿಗೂ ಮನರಂಜನೆ ನೀಡುತ್ತಿದ್ದಾರೆ. ಎಲ್ಲಿಯವರೆಗೆ ಕಲಾಭಿಮಾನಿಗಳು ಇರುತ್ತಾರೆಯೋ ಅಲ್ಲಿಯವರೆಗೂ ನಾಟಕ ಕಲೆ ಜೀವಂತವಾಗಿರುತ್ತದೆ. ಹೀಗಾಗಿ ಕಲಾರಸಿಕರು ಇನ್ನೂ ಹೆಚ್ಚಾಗಬೇಕು. ಜಿಲ್ಲೆಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಗೊಳ್ಳಬೇಕು’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಗುರು ವಾದ್ಯವೃಂದದ ಅಧ್ಯಕ್ಷ ಮತ್ತು ಸಂಚಾರಿ ಕೆಬಿಆರ್‌ ನಾಟಕ ಕಂಪನಿಯ ಮಾಲೀಕ ಚಿಂದೋಡಿ ಶಂಭುಲಿಂಗಪ್ಪ, ‘ಹಣಕಾಸಿನ ತೊಂದರೆಯ ನಡುವೆಯೂ ಕಲಾಭಿಮಾನಿಗಳು ಹಾಗೂ ಪ್ರೇಕ್ಷಕರು ನೀಡಿದ ಹಣದಿಂದ ಪ್ರತಿ ವರ್ಷ ಮೂರು ನಾಟಕಗಳನ್ನು ಪ್ರದರ್ಶಿಸುತ್ತಿದ್ದೇವೆ. ಸೆಪ್ಟೆಂಬರ್‌ ತಿಂಗಳಲ್ಲಿ ದೆಹಲಿಯಲ್ಲಿ ಮೂರು ದಿನಗಳ ಕಾಲ ನಾಟಕ ಪ್ರದರ್ಶಿಸಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

ಕಲ್ಲೂರು ಕಂಪನಿಯ ಮಾಲೀಕ ಮಂಟೇಶ್‌ ಬಿ. ದಂಡಿನ್‌ ಪ್ರಾರ್ಥಿಸಿದರು. ಚಿಂದೋಡಿ ವೀರೇಶ್‌, ಕಲಾವಿದೆ ಸಂಗೀತಾ ಬಾದಾಮಿ ಹಾಜರಿದ್ದರು.

ಅವೈಜ್ಞಾನಿಕವಾಗಿ ರಂಗಮಂದಿರ ನಿರ್ಮಾಣ: ಆಕ್ರೋಶ

‘₹ 2.50 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಜಿಲ್ಲಾ ರಂಗಮಂದಿರ ಅವೈಜ್ಞಾನಿಕವಾಗಿದೆ. ರಂಗಮಂದಿರದ ನಡುವೆಯೇ ಎರಡು ಪಿಲ್ಲರ್‌ಗಳು ಬಂದಿವೆ. ರಂಗಭೂಮಿ ತಜ್ಞರ ಸಲಹೆಯನ್ನು ಪಡೆಯದೇ ಅಧಿಕಾರಿಗಳು ರೂಪಿಸಿದ ಯೋಜನೆಯಿಂದಾಗಿ ಇಂಥ ಎಡವಟ್ಟಾಗಿದೆ’ ಎಂದು ಚಿಂದೋಡಿ ಶಂಭುಲಿಂಗಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ಸರಿಪಡಿಸಲು ಈಗ ಇನ್ನೂ ₹ 4 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಹಣ ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಸುಸಜ್ಜಿತ ರಂಗಮಂದಿರ ನಿರ್ಮಿಸಬೇಕು ಎಂದು ಪತ್ರ ಚಳವಳಿ ಮೂಲಕ ಜಿಲ್ಲಾಧಿಕಾರಿಯನ್ನು ಒತ್ತಾಯಿಸಬೇಕು’ ಎಂದರು.

ರಾಜ್ಯೋತ್ಸವ, ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾರಿ ಲಾಬಿ ನಡೆಯುತ್ತಿದೆ. 30 ವರ್ಷಗಳಿಂದ ವೃತ್ತಿ ರಂಗಭೂಮಿಯಲ್ಲಿ ಕೆಲಸ ಮಾಡಿದವರಿಗೆ ಪ್ರಶಸ್ತಿ ಲಭಿಸುತ್ತಿಲ್ಲ. ಶಾಸಕರು, ಸಚಿವರು ಹೇಳಿದವರಿಗೆ ಪ್ರಶಸ್ತಿ ಕೊಡಲಾಗುತ್ತಿದೆ. ನಿಜವಾದ ಹಿರಿಯ ಕಲಾವಿದರಿಗೆ ಮಾಸಾಶನ ಸಿಗುತ್ತಿಲ್ಲ. ಯಾರದೋ ಶಿಫಾರಸಿನ ಆಧಾರದ ಮೇಲೆ ಮಾಸಾಶನ ನೀಡುವುದಾದರೆ ಅದನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !