ಕಾಂಗ್ರೆಸ್‌ನವರು ಹಿಂದೆ ಹಂಚಿದ್ದು ಖೋಟಾನೋಟಾ?

ಸೋಮವಾರ, ಜೂನ್ 17, 2019
28 °C
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಪ್ರಶ್ನೆ

ಕಾಂಗ್ರೆಸ್‌ನವರು ಹಿಂದೆ ಹಂಚಿದ್ದು ಖೋಟಾನೋಟಾ?

Published:
Updated:
Prajavani

ದಾವಣಗೆರೆ: ‘ಬಿಜೆಪಿ ದುಡ್ಡು ಹಂಚಿ ಗೆದ್ದಿದೆ ಎಂದು ಆರೋಪಿಸುವವರು ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವಾಗ ಹಂಚಿದ್ದು ಖೋಟಾನೋಟಾ?’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಅವರು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆರೋಪಕ್ಕೆ ತಿರುಗೇಟು ನೀಡಿದರು.

‘ನಾನೂ ನಾಲ್ಕು ಬಾರಿ ಸೋತಿದ್ದೇನೆ. ಸೋಲನ್ನು ಸ್ವೀಕರಿಸಿದ್ದೇನೆ. ಅವರು ದುಡ್ಡು ಹಂಚಿ ಗೆದ್ದಿದ್ದಾರೆ ಎಂದು ನಾನು ಆರೋಪ ಮಾಡಿಲ್ಲ. ಅವರೇನು ಸುಂದರವಾಗಿದ್ದಾರೆ ಎಂದು ಅವರಿಗೆ ಜನ ಮತ ಹಾಕಿದ್ದಾರಾ? ಕೆಲಸ ಮಾಡಿದ್ದಾರೆ ಎಂದು ಗೆಲ್ಲಿಸಿದ್ದಾರಾ? ಜನರು ಕೊಟ್ಟ ತೀರ್ಪನ್ನು ತಲೆಬಾಗಿ ಸ್ವೀಕರಿಸಬೇಕು. ಅದು ಬಿಟ್ಟು ದುಡ್ಡು ಹಂಚಿದ್ದಾರೆ ಎಂದೆಲ್ಲ ಆರೋಪ ಮಾಡುವುದು ಸರಿಯಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾವೆಲ್ಲ ನಮ್ಮ ಅಪ್ಪನನ್ನೇ ಅಪ್ಪ ಎನ್ನುತ್ತೇವೆ. ಬೇರೆಯವರನ್ನು ಅಪ್ಪ ಎನ್ನುವುದಿಲ್ಲ. ಆದರೆ ಇಲ್ಲಿ ಕೆಲವರು ದುಡ್ಡು ಇದ್ದವರನ್ನು ಅಪ್ಪಾಜಿ ಎನ್ನುತ್ತಾರೆ. ಇದು ಯಾವ ಸಂಸ್ಕೃತಿ’ ಎಂದು ಅವರು ಪ್ರಶ್ನಿಸಿದರು.

ಪಾಲಿಕೆಯಲ್ಲಿ ನಮಗೇ ಗೆಲುವು: ಮುಂದೆ ನಡೆಯಲಿರುವ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ. 35ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ಹೇಗೆ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದನ್ನು ನಾವು ಹೇಳಬೇಕಿತ್ತು. ಆದರೆ ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲು ಇಲ್ಲಿನ ಕಾಂಗ್ರೆಸ್‌ ನಾಯಕರೇ ಈ ಬಗ್ಗೆ ಪ್ರಶ್ನಿಸಿದ್ದರು. ಯಾರ್ಯಾರು ಎಲ್ಲೆಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ಗೊತ್ತು ಎಂದು ಆ ನಾಯಕರು ಹೇಳಿದ್ದರು ಎಂದು ಜಾಧವ್‌ ಹೇಳಿದರು.

ಈ ಗೆಲುವಿಗೆ ಕಾರಣರಾದ ಬಿಜೆಪಿಯ ಎಲ್ಲ ಘಟಕದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಚ್‌.ಎನ್‌. ಶಿವಕುಮಾರ್‌, ರಮೇಶ್‌ ನಾಯಕ್‌, ರಾಜಶೇಖರ, ರುದ್ರಮುನಿ ಸ್ವಾಮಿ, ರಾಜನಹಳ್ಳಿ ಶಿವಕುಮಾರ್‌, ಪಿ.ಸಿ. ಶ್ರೀನವಿಆಸ್‌, ಪ್ರಭು ಕಲಬುರ್ಗಿ, ಟಿಂಕರ್‌ ಮಂಜಣ್ಣ, ಆನಂದರಾವ್, ಧನುಷ್‌ ರೆಡ್ಡಿ ಅವರೂ ಇದ್ದರು.

ಎಚ್‌.ಎಸ್‌. ನಾಗರಾಜ್‌ ಮತ್ತು ಸಂಗಡಿಗರ ಉಚ್ಚಾಟನೆ

ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಚ್‌.ಎಸ್‌. ನಾಗರಾಜ್‌ ಮತ್ತು ಅವರ ಏಳೆಂಟು ಸಂಗಡಿಗರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ತಿಳಿಸಿದರು.

ಸಮಾನ ಮನಸ್ಕರ ವೇದಿಕೆ ಎಂದು ಹೇಳಿಕೊಂಡು ಸ್ವಂತ ಹಿತಾಸಕ್ತಿಗಾಗಿ ಅನೇಕ ಕಾರ್ಯಕರ್ತರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಅವರು ಕೈ ಹಾಕಿದ್ದರು. ಬಿಜೆಪಿ ಶಿಸ್ತಿನ ಪಕ್ಷ. ಯಾವ ಅಶಿಸ್ತನ್ನೂ ಸಹಿಸುವ ಪ್ರಶ್ನೆಯೇ ಇಲ್ಲ. ಹಾಗಾಗಿ ಉಚ್ಚಾಟನೆ ಮಾಡಲಾಗಿದೆ. ಈ ವಿಷಯವಾಗಿ ಈಗಾಗಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ವರದಿಯನ್ನು ನೀಡಲಾಗಿದೆ ಎಂದು ಹೇಳಿದರು.

ಎರಡು ಸಂದೇಶ ಕಳುಹಿಸಲು ಹರಕೆಯ ಕುರಿಯಾದ ಮಂಜಪ್ಪ

ಈ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ನಾಯಕರಿಗೆ ಎರಡು ಸಂದೇಶಗಳನ್ನು ಕಳುಹಿಸಿಕೊಡಬೇಕಿತ್ತು. ಅದಕ್ಕಾಗಿ ಮಂಜಪ್ಪ ಅವರನ್ನು ಹರಕೆಯ ಕುರಿ ಮಾಡಲಾಯಿತು ಎಂದು ಯಶವಂತರಾವ್‌ ಜಾಧವ್‌ ಆರೋಪಿಸಿದರು.

‘ನಮ್ಮನ್ನು ಬಿಟ್ಟು ಬೇರೆ ರೀತಿಯಾಗಿ ಆಟವಾಡಲು ಹೈಕಮಾಂಡ್‌ ಹೋದರೆ ಹೀನಾಯವಾಗಿ ಸೋಲಬೇಕಾಗುತ್ತದೆ ಎಂಬುದನ್ನು ಹೈಕಮಾಂಡ್‌ಗೆ ಸಂದೇಶ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಸಂದೇಶ ಜಿಲ್ಲೆಗೆ ರವಾನಿಸಿದ್ದಾಗಿದೆ. ಹಿಂದೆ ಕಾಂಗ್ರೆಸ್‌ನ ಚನ್ನಯ್ಯ ಒಡೆಯರ್‌ ಅವರನ್ನು ಸೋಲಿಸಿದವರು ಯಾರು ಎಂಬುದನ್ನು ನಾನು ಪ್ರಶ್ನೆ ಮಾಡಿದ್ದೆ. ಚನ್ನಯ್ಯ ಒಡೆಯರ್‌ ಕುರುಬ ಸಮಾಜದವರು. ಅದೇ ಸಮಾಜದ ಮಂಜಪ್ಪರನ್ನು ನಿಲ್ಲಿಸಿ ಚನ್ನಯ್ಯ ಒಡೆಯರ್‌ ಅವರ ಸೋಲಿನ ವಿಚಾರವನ್ನು ಮರೆಮಾಚಲಾಯಿತು’ ಎಂದು ವಿವರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !