ಬೆಳೆವಿಮೆ ಪರಿಹಾರ ಬಿಡುಗಡೆಗೆ ಕ್ರಮ

7
ಕೃಷಿ ಇಲಾಖೆ ಪ್ರಗತಿ ಪರಿಶೀಲಿಸಿದ ಸಚಿವ ಶಿವಶಂಕರ ರೆಡ್ಡಿ

ಬೆಳೆವಿಮೆ ಪರಿಹಾರ ಬಿಡುಗಡೆಗೆ ಕ್ರಮ

Published:
Updated:
Deccan Herald

ದಾವಣಗೆರೆ: ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ ಪಾವತಿಯಾಗಬೇಕಾಗಿರುವ ₹ 12 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಿಸುವ ಕುರಿತು ವಿಮಾ ಕಂಪನಿಯೊಂದಿಗೆ ಮುಂದಿನ ವಾರ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರ ರೆಡ್ಡಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಬೆಳೆ ವಿಮೆಯಲ್ಲಿ ಹಲವು ಗೊಂದಲಗಳಿವೆ. ಅದರ ನೀತಿಗಳಲ್ಲಿ ಕೆಲವು ನ್ಯೂನತೆಗಳಿವೆ. ಪಾಲಿಸಿಯಲ್ಲಿ ಇನ್ನೂ ಕೆಲವು ಬದಲಾವಣೆಗಳಾಗಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌, ‘ಎರಡು ವರ್ಷಗಳಿಂದ ಜಿಲ್ಲೆಯ ರೈತರಿಗೆ ಒಟ್ಟು ₹ 12 ಕೋಟಿ ಬೆಳೆ ವಿಮೆ ಪರಿಹಾರವನ್ನು ವಿಮಾ ಕಂಪನಿ ಪಾವತಿಸಬೇಕಾಗಿದೆ. ಇದರಿಂದಾಗಿ ರೈತರಲ್ಲಿ ಈ ಯೋಜನೆ ಬಗ್ಗೆ ವಿಶ್ವಾಸ ಮೂಡಿಲ್ಲ. ಕಳೆದ ವರ್ಷ ಮುಂಗಾರಿನಲ್ಲಿ 78,380 ರೈತರು ವಿಮೆ ಮಾಡಿಸಿದ್ದರು. ಈ ಬಾರಿ ಕೇವಲ 11,512 ರೈತರು ವಿಮೆ ಕಂತು ಪಾವತಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್‌. ಮಹೇಶ್‌, ‘ಆರಂಭದಲ್ಲಿ ರೈತರು ವಿಮೆ ಪಾವತಿಸಲು ಹಿಂದೇಟು ಹಾಕಿದ್ದರು. ಆದರೆ, ಮಳೆಯಾಗಲಿಲ್ಲ ಎಂಬ ಕಾರಣಕ್ಕೆ ಕೊನೆಯ ದಿನ ರಾತ್ರಿಯವರೆಗೂ ಕಾಯ್ದರೂ ಬ್ಯಾಂಕಿನಲ್ಲಿ ವಿಮೆ ಹಂತು ಪಾವತಿಸಲು ಹಲವು ರೈತರಿಗೆ ಸಾಧ್ಯವಿಲ್ಲ. ಹೀಗಾಗಿ ವಿಮೆ ಕಂತು ಪಾವತಿಸುವ ಅವಧಿ ವಿಸ್ತರಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಅವಧಿ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ’ ಎಂದರು.

ಸಿರಿಧಾನ್ಯಕ್ಕೆ ಉತ್ತೇಜನ ನೀಡಿ:

ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ? ಅದಕ್ಕೆ ತಕ್ಕಂತೆ ಯಾವ ಸಾಮರ್ಥ್ಯದ ಸಂಸ್ಕರಣಾ ಘಟಕ ನಿರ್ಮಿಸಬೇಕು ಹಾಗೂ ಸಿರಿಧಾನ್ಯ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬೇಕು ಎಂಬ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಿ. ಸರ್ಕಾರದಿಂದ ಇದಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. 

ಸಿರಿಧಾನ್ಯಗಳ ಬೆಲೆಯನ್ನು ಕಡಿಮೆಗೊಳಿಸಲು ಏನು ಮಾಡಬಹುದು ಎಂದು ಯೋಚಿಸಿ. ಹಾಲಿನ ಅಂಗಡಿ ಹಾಗೂ ಹಾಪ್‌ಕಾಮ್ಸ್‌ಗಳಲ್ಲೂ ಉತ್ಕೃಷ್ಟ ಗುಣಮಟ್ಟದ ಸಿರಿಧಾನ್ಯಗಳನ್ನು ಮಾರಾಟ ಮಾಡಲು ಸಾಧ್ಯವೋ ಎಂಬ ಬಗ್ಗೆ ಪರಿಶೀಲಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಣ್ಣು ಪರೀಕ್ಷೆ:

‘ಮಣ್ಣು ಆರೋಗ್ಯ ಅಭಿಯಾನ ಯೋಜನೆಯಡಿ ರೈತರ ಹೊಲದ ಮಣ್ಣು ಪರೀಕ್ಷಿಸಿ ಆರೋಗ್ಯ ಚೀಟಿ ಕೊಟ್ಟ ಬಳಿಕ ಅದರಲ್ಲಿ ಸೂಚಿಸಿದಂತೆ ರಸಗೊಬ್ಬರವನ್ನು ಬಳಕೆ ಮಾಡಿದ್ದಾರೆಯೇ? ವಾಸ್ತವದಲ್ಲಿ ಈ ಯೋಜನೆಯಿಂದ ರೈತರ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು’ ಎಂದು ಸಚಿವರು ಸೂಚಿಸಿದರು.

ಕೃಷಿ ಯಂತ್ರಧಾರೆ ಯೋಜನೆ:

ಈ ಯೋಜನೆಯಡಿ ಜಿಲ್ಲೆಗೆ ಒಟ್ಟು 24 ಕೇಂದ್ರಗಳು ಮಂಜೂರಾಗಿವೆ. ಸದ್ಯ 17 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ‘ಜಾನ್‌ಡೀರ್‌’ ಸಂಸ್ಥೆ 11 ಕೇಂದ್ರಗಳನ್ನು ನಡೆಸುತ್ತಿದ್ದು, ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಶರಣಪ್ಪ ಮುದುಗಲ್‌ ದೂರಿದರು.

ಇದಕ್ಕೆ ಪ್ರತಿಯಾಗಿ ಸಂಸ್ಥೆಯ ಅಧಿಕಾರಿ ಗಿರೀಶ್‌, ‘ಐದು ತಿಂಗಳಿಂದ ಸಬ್ಸಿಡಿ ಹಣ ₹ 94 ಲಕ್ಷ ನಮಗೆ ಪಾವತಿಯಾಗಿಲ್ಲ. ನಮ್ಮ ಸೇವೆಯ ಬಗ್ಗೆ ರೈತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೂ ಅಧಿಕಾರಿಗಳು ಏಕೆ ನಮ್ಮನ್ನು ದೂಷಿಸುತ್ತಿದ್ದಾರೆ ತಿಳಿಯುತ್ತಿಲ್ಲ’ ಎಂದು ಪ್ರತ್ಯಾರೋಪ ಮಾಡಿದರು.

ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ನಡೆಸಿ ಸಮಸ್ಯೆಗಳನ್ನು ನಿವಾರಿಸುವಂತೆ ಸಚಿವರು ಸೂಚಿಸಿದರು.

ಕೃಷಿ ಭಾಗ್ಯ:

ಕೃಷಿ ಹೊಂಡಕ್ಕೆ ಕಡ್ಡಾಯವಾಗಿ ಬೇಲಿ ನಿರ್ಮಿಸಿಕೊಳ್ಳುವಂತೆ ರೈತರಿಗೆ ಸೂಚಿಸಬೇಕು. ಸೌರ ವಿದ್ಯುತ್‌ ಬೇಲಿ ನಿರ್ಮಿಸಲು ಸಾಧ್ಯವೋ ಎಂಬ ಬಗ್ಗೆಯೂ ಪರಿಶೀಲಿಸಿ, ಅದಕ್ಕೆ ಸರ್ಕಾರದಿಂದ ಸಬ್ಸಿಡಿ ಹಣ ಕೊಡಿಸಲು ಯತ್ನಿಸೋಣ ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಎಸ್‌. ಅಶ್ವತಿ, ಅಧ್ಯಕ್ಷೆ ಕೆ.ಆರ್‌. ಜಯಶೀಲಾ, ಉಪಾಧ್ಯಕ್ಷೆ ಜಿ. ರಶ್ಮಿ ಹಾಜರಿದ್ದರು.

ಸಬ್ಸಿಡಿ ಹಣ ಪಾವತಿಗೆ ಕ್ರಮ

ಕೃಷಿ ಯಂತ್ರಧಾರೆ ಯೋಜನೆಯಡಿ ಉಪಕರಣ ಖರೀದಿಸುವ ರೈತರ ಖಾತೆಗೆ ಇಲಾಖೆ ಪಾವಸುತ್ತಿರುವ ಸಬ್ಸಿಡಿ ಹಣವನ್ನು ಕಂಪನಿಗೆ ನೀಡುವ ಬದಲು ತಾವೇ ಬಳಸಿಕೊಳ್ಳುತ್ತಿರುವ 24 ಪ್ರಕರಣಗಳು ಹೊನ್ನಾಳಿ ತಾಲ್ಲೂಕಿನಲ್ಲಿ ನಡೆದಿವೆ ಎಂದು ಶರಣಪ್ಪ ಮುದಗಲ್‌ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈ ಬಗ್ಗೆ ಇಲಾಖೆಯ ನಿರ್ದೇಶಕರ ಜೊತೆಗೆ ಚರ್ಚಿಸಿ ನೇರವಾಗಿ ಕಂಪನಿಯ ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವೋ ಎಂಬ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.

 

3.23 ಲಕ್ಷ ಹೆಕ್ಟೇರ್‌ ಜಿಲ್ಲೆಯಲ್ಲಿ ಬಿತ್ತನೆ ಗುರಿ

2.48 ಲಕ್ಷ ಹೆಕ್ಟೇರ್‌ ಜಿಲ್ಲೆಯಲ್ಲಿ ಬಿತ್ತನೆಯಾದ ಪ್ರದೇಶ

2.82 ಲಕ್ಷ ಜಿಲ್ಲೆಯಲ್ಲಿ ವಿತರಿಸಬೇಕಾದ ಮಣ್ಣು ಆರೋಗ್ಯ ಚೀಟಿ

1.44 ಲಕ್ಷ ಜಿಲ್ಲೆಯಲ್ಲಿ ವಿತರಣೆಯಾದ ಮಣ್ಣು ಆರೋಗ್ಯ ಚೀಟಿ

6,753 ಜಿಲ್ಲೆಯಲ್ಲಿ ನಿರ್ಮಾಣಗೊಂಡ ಕೃಷಿ ಹೊಂಡ

3,899 ಜಿಲ್ಲೆಯಲ್ಲಿ ವಿತರಿಸಿದ ಪಾಲಿಥಿನ್‌ ಹೊದಿಕೆ

ಬೆಳೆವಿಮೆ ವಿವರ

₹ 3.53 ಕೋಟಿ 2016–17ನೇ ಸಾಲಿಗೆ ಮುಂಗಾರಿನಲ್ಲಿ ಪಾವತಿಯಾಗದ ಪರಿಹಾರ ಹಣ

₹ 8.09 ಕೋಟಿ 2017–18ನೇ ಸಾಲಿಗೆ ಮುಂಗಾರಿನಲ್ಲಿ ಪಾವತಿಯಾಗದ ಪರಿಹಾರ ಹಣ

11,512 ಪ್ರಸಕ್ತ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !