ಗಾಳಿ–ಮಳೆ: ನೆಲಕಚ್ಚಿದ ಭತ್ತದ ಬೆಳೆ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಸುರಿದ ಗಾಳಿ ಮಳೆಗೆ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಚಾಪೆ ಹಾಸಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ.
ಸಂಕ್ಲೀಪುರ, ಮಲ್ಲನಾಯ್ಕನಹಳ್ಳಿ, ನಿಟ್ಟೂರು, ಆದಾಪುರ, ಬೂದಿಹಾಳ್, ದೇವರಬೆಳಕೆರೆ ಹಾಗೂ ಹೊಳೆ ಸಾಲಿನ ಉಕ್ಕಡಗಾತ್ರಿ, ನಂದಿಗುಡಿ, ಗೋವಿನಹಾಳು ಭಾಗದಲ್ಲಿ ಮುಂಚಿತವಾಗಿ ನಾಟಿ ಮಾಡಿದ ಭತ್ತದ ತನೆಕಟ್ಟುವ ಹಂತದಲ್ಲಿತ್ತು. ಕೆಲವೆಡೆ ಭತ್ತದ ಬೆಳೆ ಒಣಗಿತ್ತು.
‘ಬಿರುಗಾಳಿ ಜಡಿ ಮಳೆಗೆ ಭತ್ತ ಸಿಲುಕಿ ನೆಲಕಚ್ಚಿದೆ. ಕೆಲವೆಡೆ ನೀರು ಗದ್ದೆಯಲ್ಲಿ ನಿಂತಿದೆ. ಒಕ್ಕಲು ಮಾಡುವುದು ಕಷ್ಟ’ ಎಂದು ರೈತರಾದ ರೇವಣಸಿದ್ದಪ್ಪ, ಗುರುಮೂರ್ತಿ, ಕೊಟ್ರಯ್ಯ, ಸೋಮಶೇಖರಪ್ಪ, ರಾಮಶ್ರೇಷ್ಠಿ ಕುಣಿಬೆಳೆಕೆರೆ ಆತಂಕ ವ್ಯಕ್ತಪಡಿಸಿದರು.
‘ಒಣಗಿರುವ ಭತ್ತದ ಕಾಳು ನೆಲಕ್ಕೆ ಬಿದ್ದು ಮೊಳಕೆ ಒಡೆಯಲಿದೆ. ಹವಾಮಾನ ವೈಪರೀತ್ಯದಿಂದ ಮಳೆ ಸುರಿಯುತ್ತಿರುವುದು ಭತ್ತದ ಬೆಳೆಗಾರರಿಗೆ ನಷ್ಟ ತಂದಿದೆ’ ಎಂದರು.
‘ಬೂದಾಳು ಗ್ರಾಮದಲ್ಲಿ ಕಟಾವು ಮಾಡಿರುವ ಭತ್ತದ ಬೆಳೆ ಒಣಗಿಸುವುದು ಕಷ್ಟವಾಗಿದೆ. ರಾಶಿಯೊಳಗೆ ಕಾವು ಬಂದಿವೆ, ಬಣ್ಣ ಬದಲಾಗಿದೆ, ಒಣಗಿಸುವುದು ಕಷ್ಟ’ ಎಂದು ರೈತ ಸಂತೋಷ್ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ತುರ್ತಾಗಿ ಬೆಳೆ ಹಾನಿ ಅಂದಾಜು ಮಾಡಿ ರೈತರಿಗೆ ನಷ್ಟ ತುಂಬಿಕೊಡುವ ವ್ಯವಸ್ಥೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಗೌಡ, ಹೊಳೆಸಿರಿಗೆರೆ ಫಾಲಾಕ್ಷಪ್ಪ, ಭಾನುವಳ್ಳಿ ಕೊಟ್ರೇಶ್ ಆಗ್ರಹಿಸಿದರು.
ಸಮೀಪದ ಕುಣಿಬೆಳಕೆರೆ- ನಂದಿತಾವರೆ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬುಧವಾರ ಬೀಸಿದ ಬಿರುಗಾಳಿಗೆ ಮರ ಉರುಳಿ ಬಿದ್ದಿದೆ. ಕೆಲವೆಡೆ ವಿದ್ಯುತ್ ಕಂಬ ವಾಲಿವೆ. ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.