ಗುರುವಾರ , ಫೆಬ್ರವರಿ 27, 2020
19 °C
ತುರ್ತು ಸಭೆ ಕರೆಯಲು ಜಿ.ಪಂ. ಸದಸ್ಯರ ಒತ್ತಾಯ

ಎಸಿಬಿಗೆ ದೂರು: ಪ್ರತಿಭಟನೆ ಕೈಬಿಟ್ಟ ಗ್ರಾ.ಪಂ ಸದಸ್ಯರು, ಪಿಡಿಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಎಸಿಬಿಗೆ ದೂರು ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಕ್ರಮವನ್ನು ಖಂಡಿಸಿ ಉಪಾಧ್ಯಕ್ಷೆ ರಶ್ಮಿ ರಾಜಪ್ಪ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಸಿದ 18 ಸದಸ್ಯರು, ವಾರದೊಳಗೆ ತುರ್ತು ಸಾಮಾನ್ಯ ಸಭೆ ಕರೆಯುವಂತೆ ಒತ್ತಾಯಿಸಿದರು.

ಅಧ್ಯಕ್ಷೆಯ ನಿಲುವಿನ ವಿರುದ್ಧ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ತಮ್ಮ ಬೆಂಬಲಕ್ಕೆ ಜಿಲ್ಲಾ ಪಂಚಾಯಿತಿಯ 35 ಸದಸ್ಯರೂ ನಿಲ್ಲುತ್ತಾರೆ ಎಂಬ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಡಿಒಗಳು ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದು, ಬುಧವಾರದಿಂದ ಕೆಲಸಕ್ಕೆ ಹಾಜರಾಗಲು ನಿರ್ಧರಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್‌. ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಷಡಕ್ಷರಪ್ಪ ವಿರುದ್ಧ ದೂರು ನೀಡುವ ಮುನ್ನ ಸೌಜನ್ಯಕ್ಕೂ ತಮ್ಮ ಗಮನಕ್ಕೆ ಅಧ್ಯಕ್ಷರು ತರದಿರುವುದಕ್ಕೆ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಶ್ಮಿ ರಾಜಪ್ಪ, ‘235 ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಅಧ್ಯಕ್ಷರು ನಮ್ಮ ಯಾರ ಗಮನಕ್ಕೂ ತಾರದೇ ದೂರು ನೀಡಿದ್ದಾರೆ. ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ. ಹೀಗಾಗಿ ಅಧ್ಯಕ್ಷೆ ಹೊರತುಪಡಿಸಿ ಉಳಿದ 35 ಸದಸ್ಯರು ದೂರನ್ನು ವಾಪಸ್‌ ಪಡೆದುಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಪಕ್ಷದ ವರಿಷ್ಠರಿಗೆ ದೂರು ನೀಡುತ್ತೇವೆ’ ಎಂದು ತಿಳಿಸಿದರು.

ಸದಸ್ಯ ತೇಜಸ್ವಿ ಪಟೇಲ್‌, ‘ಈ ಬೆಳವಣಿಗೆಯಿಂದ ಗ್ರಾಮ ಪಂಚಾಯಿತಿಗಳ ಆಡಳಿತ ವ್ಯವಸ್ಥೆಯೇ ಸ್ಥಗಿತಗೊಂಡಿದೆ. ದೂರಿನ ಪ್ರತಿಯನ್ನು ಪರಿಶೀಲಿಸಿದಾಗ ಭ್ರಷ್ಟಾಚಾರದ ಬಗ್ಗೆ ನಿಖರವಾಗಿ ಉಲ್ಲೇಖಿಸಿಲ್ಲ. ಹೀಗಾಗಿ ಈ ಬಗ್ಗೆ ಚರ್ಚಿಸಲು ವಾರದೊಳಗೆ ತುರ್ತು ಸಾಮಾನ್ಯ ಸಭೆಯನ್ನು ಕರೆಯುವಂತೆ ಸಭೆಯಲ್ಲಿದ್ದ ಸದಸ್ಯರು ಸಹಿ ಮಾಡಿದ ಪತ್ರವನ್ನು ಅಧ್ಯಕ್ಷರಿಗೆ ಕಳುಹಿಸಿಕೊಡುತ್ತಿದ್ದೇವೆ. ಸಭೆ ನಡೆಸಿ ಗೊಂದಲವನ್ನು ನಿವಾರಿಸಬೇಕು. ಒಮ್ಮೆ ಅಧ್ಯಕ್ಷರು ಸಭೆ ಕರೆಯದಿದ್ದರೆ, ಕಾನೂನು ಪ್ರಕಾರ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಪ್ರಕರಣದ ಬಗ್ಗೆ ಸದಸ್ಯರು ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಾವು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿಲ್ಲ. ಆದರೆ, ತಪ್ಪಿತಸ್ಥರನ್ನು ಶಿಕ್ಷಿಸಲು ಹೊರಟಿರುವ ದಾರಿ ಸರಿಯಾಗಿಲ್ಲ. ಜಿಲ್ಲಾ ಪಂಚಾಯಿತಿಗೇ ತನಿಖೆ ನಡೆಸುವ ಶಕ್ತಿ ಇತ್ತು. ನಮ್ಮ ಯಾರ ಗಮನಕ್ಕೂ ತಾರದೇ ಎಸಿಬಿಗೆ ದೂರು ನೀಡಿರುವುದಕ್ಕೆ ನಮಗೂ ಅಸಮಾಧಾನ ಇದೆ. ಪ್ರತಿ ಪಂಚಾಯಿತಿಗೂ ಒಬ್ಬ ತನಿಖಾಧಿಕಾರಿಯನ್ನು ನೇಮಿಸಿದರೆ ಒಂದೂವರೆ ವರ್ಷವಾದರೂ ಇತ್ಯರ್ಥಗೊಳ್ಳುವುದಿಲ್ಲ’ ಎಂದು ತಿಳಿಸಿದರು.

ಸಭೆಯ ಬಳಿಕ ಜಿಲ್ಲಾ ಪಂಚಾಯಿತಿ ಸದಸ್ಯರು ಪ್ರತಿಭಟನಾಕಾರರ ಬಳಿ ಬಂದು ತಾವು ಕೈಗೊಂಡ ನಿರ್ಣಯದ ಪ್ರತಿಯನ್ನು ಪ್ರದರ್ಶಿಸಿದರು. ತಾತ್ಕಾಲಿಕವಾಗಿ ಹೋರಾಟ ಕೈಬಿಡುವಂತೆ ಮಾಡಿದ ಮನವಿಗೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಡಿಒಗಳು ಸ್ಪಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು