ಗುರುವಾರ , ನವೆಂಬರ್ 14, 2019
19 °C
ದೌರ್ಜನ್ಯ ಪ್ರಕರಣಗಳ ಬಗೆಗಿನ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ

‘ಮೂರು ತಿಂಗಳೊಳಗೆ ಅಂಬೇಡ್ಕರ್‌ ಭವನಕ್ಕೆ ಶಂಕುಸ್ಥಾಪನೆ’

Published:
Updated:

ದಾವಣಗೆರೆ: ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಅಂದಾಜು ವೆಚ್ಚದ ಪಟ್ಟಿ ತಯಾರಿ ಆಗಿದೆ. ಇನ್ನು ಮೂರು ತಿಂಗಳ ಒಳಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಸಮಾಜ ಕಲ್ಯಾಣಧಿಕಾರಿ ಶಿವಾನಂದ ಕುಂಬಾರ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲಾಗುವುದು ಎಂದು ಐದು ವರ್ಷಗಳಿಂದ ಹೇಳುತ್ತಿದ್ದೀರಿ. ಇನ್ನೂ ಆಗಿಲ್ಲ. ಯಾವಾಗ ಆಗುತ್ತದೆ ಎಂದು ಶಾಸಕ ಪ್ರೊ. ಎನ್‌. ಲಿಂಗಣ್ಣ ಪ್ರಶ್ನಿಸಿದಾಗ ಸಮಾಜ ಕಲ್ಯಾಣಾಧಿಕಾರಿ ಈ ಉತ್ತರ ನೀಡಿದರು.

ಹರಿಹರದ ಪ್ರೊ.ಕೃಷ್ಣಪ್ಪ ಭವನ, ಇಲ್ಲಿನ ಜಗಜೀವನರಾಂ ಭವನ, ಹರಳಯ್ಯ ಭವನಗಳನ್ನು ಟ್ರಸ್ಟ್‌ಗಳು ನಡೆಸುತ್ತಿವೆ. ಅವರೊಳಗೆ ಕೆಲವು ಸಮಸ್ಯೆಗಳು ಉಂಟಾಗಿವೆ. ಹಾಗಾಗಿ ಸ್ಥಳೀಯಾಡಳಿಗಳಿಗೆ ಈ ಭವನಗಳನ್ನು ನೀಡಬೇಕು ಎಂದು ಶಿವಾನಂದ ಕುಂಬಾರ್‌ ತಿಳಿಸಿದರು. ಸ್ಥಳೀಯಾಡಳಿತಕ್ಕೆ ನೀಡುವುದು ಸರಿಯಾದ ಕ್ರಮ ಎಂದು ಪ್ರೊ.ಲಿಂಗಣ್ಣ ಧ್ವನಿಗೂಡಿಸಿದರು. ನಿಯಮ ಪ್ರಕಾರ ಸ್ಥಳೀಯಾಡಳಿಕ್ಕೆ ನೀಡಿ, ಸಾಂಕೇತಿಕ ಶುಲ್ಕ ವಿಧಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಅವರಗೆರೆ ಬಳಿ ಎಸ್.ಸಿ, ಎಸ್.ಟಿ ಕಾಲೊನಿಗೆ ರಸ್ತೆ ಇಲ್ಲ. ಅಲ್ಲಿ 76 ಮಂದಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಸಮಿತಿಯ ಸದಸ್ಯ ಎಚ್‌.ಜಿ. ಉಮೇಶ್ ತಿಳಿಸಿದರು. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಆವರಗೆರೆಯಲ್ಲಿ ಸ್ಮಶಾನಕ್ಕೆ ಇರುವ ರಸ್ತೆಯನ್ನು ಖಾಸಗಿ ಜಮೀನಿನವರು ಬೇಲಿ ಹಾಕಿದ್ದಾರೆ. ಮೃತದೇಹ ಒಯ್ಯಲು ರಸ್ತೆ ಇಲ್ಲ ಎಂದು ಉಮೇಶ್‌ ತಿಳಿಸಿದಾಗ, ‘ರಸ್ತೆ ಹಾಳು ಮಾಡಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅವರೂ ಪಾಲಿಕೆ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ’ ಎಂದು ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳ ಬಗ್ಗೆ ಮೊದಲೇ ನಮಗೆ ತಿಳಿಸಬೇಕು ಎಂದು ಶಾಸಕ ಲಿಂಗಣ್ಣ ಹೇಲಿದರು. ಹಿಂದಿನ ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಸದಸ್ಯ ಉಮೇಶ್‌ ಹೇಳಿದರು. ಮುಂದಿನ ಸಭೆಗೆ ಬರುವಾಗ ಅವು ಸರಿಯಾಗಿರಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಹಾಸ್ಟೆಲ್‌ಗಳಿಗೆ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಬೇಕು ಎಂದು ಶಾಸಕರು ಕೋರಿದರು. ವಿಧವಾ ವಿವಾಹ ಆದವರಿಗೆ 2 ಕಂತುಗಳಲ್ಲಿ ₹ 3 ಲಕ್ಷ ನೀಡಲಾಗುತ್ತಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದರು. ಜಾತಿ ನಿಂದನಾ ಪ್ರಕರಣ ದಾಖಲಿಸುವ ಅವಕಾಶವನ್ನು ಎಸ್‌ಸಿ, ಎಸ್‌ಟಿಯವರು ದುರುಪಯೋಗ ಮಾಡಿಕೊಳ್ಳಬಾರದು. ಅಲ್ಲದೇ ನಿಜವಾಗಿಯೂ ಜಾತಿ ನಿಂದನೆ ಮಾಡಿದರೆ ಅಂಥವರಿಗೆ ಶಿಕ್ಷೆಯೂ ಆಗಬೇಕು. ಆ ರೀತಿ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ನಾಗಲಿಂಗಪ್ಪ, ಸುಭಾಸ್‌ಚಂದ್ರ ಭೋಸ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ ಜಿ. ಹಾಜರಿದ್ದರು.

’ಜಾಗೃತಿ ಉಳಿದವರಿಗೆ ಮಾಡಿ‘

ಯಾವುದೆಲ್ಲ ಜಾತಿ ನಿಂದನೆ ಎಂಬ ಬಗ್ಗೆ ಎಸ್‌ಸಿ, ಎಸ್‌ಟಿ ಕಾಲೊನಿಗಳಲ್ಲಿ ಅರಿವು ಮೂಡಿಸುತ್ತಿದ್ದೀರಿ. ಆದರೆ, ಜಾಗೃತಿ ಕಾರ್ಯಕ್ರಮ ಆಗಬೇಕಿರುವುದು ಉಳಿದವರಿಗೆ. ನಿಂದನೆಗೊಳಗಾಗುವವರಿಗಿಂತ ನಿಂದನೆ ಮಾಡುವವರು ಮೊದಲು ತಿದ್ದಿಕೊಳ್ಳಬೇಕು. ಯಾರೂ ನಿಂದನೆ ಮಾಡದಂತೆ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)