7
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ

ಬಾಣಂತಿ ಸಾವು: ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ

Published:
Updated:

ದಾವಣಗೆರೆ: ಚಿಕಿತ್ಸೆಗೆ ಸ್ಪಂದಿಸದೆ ಬಾಣಂತಿ ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಆಕೆಯ ಸಂಬಂಧಿಕರು, ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮೇಲೆ ಬುಧವಾರ ಹಲ್ಲೆ ನಡೆಸಿದ್ದಾರೆ.

ತಾಲೂಕಿನ ಕಕ್ಕರಗೊಳ್ಳದ ಷರೀಫಾ ಬಾನು (26) ಅವರಿಗೆ ಎರಡು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕುಟುಂಬದವರು ಅವರನ್ನು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದರು. ಮಂಗಳವಾರ ಗಂಡು ಮಗುವಿಗೆ ಜನ್ಮನೀಡಿದ್ದ ಷರೀಫಾ ಬಾನು ನಿತ್ರಾಣರಾಗಿದ್ದರು. ಹೀಗಾಗಿ, ಸಿಬ್ಬಂದಿ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆಕೆ ಮೃತಪಟ್ಟಿದ್ದು, ವೈದ್ಯರ ತಾತ್ಸಾರದಿಂದಲೇ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ ಸಂಬಂಧಿಕರು, ಕೆಲ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಗಾಂಧಿನಗರ ಠಾಣೆ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

‘ಹೆರಿಗೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ ಮಹಿಳೆ ನಿಶಕ್ತಿಯಿಂದ ಬಳಲುತ್ತಿದ್ದರು. ಅವರಿಗೆ ಅಧಿಕ ರಕ್ತದೊತ್ತಡ, ರಕ್ತಹೀನತೆ ಸಮಸ್ಯೆ ಇತ್ತು. ಶಸ್ತ್ರಚಿಕಿತ್ಸೆ ನಡೆಸುವುದರಿಂದ ತೊಂದರೆ ಆಗಬಹುದು ಎಂದು ಸಂಬಂಧಿಕರಿಗೆ ತಿಳಿಸಿಯೇ ಚಿಕಿತ್ಸೆ ನೀಡಲಾಗಿತ್ತು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತ್ರಿಪುಲಾಂಭ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಳೆಗೆ ಸಹಜ ಹೆರಿಗೆ ಮಾಡಿಸುವ ಶಕ್ತಿ ಇರಲಿಲ್ಲ. ಹೀಗಾಗಿ, ಕರ್ತವ್ಯದಲ್ಲಿದ್ದ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಹೆರಿಗೆ ಮಾಡಿಸಿದ್ದಾರೆ. ಆದರೆ, ರಕ್ತದೊತ್ತಡ ಹೆಚ್ಚಿದ್ದರಿಂದ ಫಿಟ್ಸ್‌ ಬಂದು ಮಹಿಳೆ ಮೃತಪಟ್ಟಿದ್ದಾರೆ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜೆ.ಬಿ. ನೀಲಕಂಠ ಸ್ಪಷ್ಟನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !