ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಪಾಲಿಕೆಯಲ್ಲಿ ಹೆಚ್ಚಲಿದೆ ‘ಸ್ತ್ರೀ’ ಶಕ್ತಿ

ಮಹಿಳೆಯರ ಧ್ವನಿಗೆ ರಾಜಕೀಯ ಪಕ್ಷಗಳು ಕಿವಿಯಾದಾವೇ?
Last Updated 25 ಅಕ್ಟೋಬರ್ 2019, 11:01 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಅಧಿಕಾರದ ಗದ್ದುಗೆ ಏರಲು ರಾಜಕೀಯ ಪಕ್ಷಗಳು ದಾಳ ಉರುಳಿಸಲು ಆರಂಭಿಸಿವೆ. ರಾಜಕೀಯ ಲೆಕ್ಕಾಚಾರಗಳ ನಡುವೆ ಮಹಿಳೆಯರ ಧ್ವನಿ ರಾಜಕೀಯ ಪಕ್ಷಗಳಿಗೆ ಕೇಳಿಸಲಿದೆಯೇ ಎಂಬ ಕುತೂಹಲವೂ ಮೂಡಿದೆ.

ಮರುವಿಂಗಡಣೆ ಪರಿಣಾಮ 41ರಿಂದ 45 ವಾರ್ಡ್‌ಗಳಾಗಿದ್ದು, ಬದಲಾದ ಮೀಸಲಾತಿಯು ಈ ಬಾರಿ ಕಳೆದ ಚುನಾವಣೆಗಿಂತಲೂ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದೆ. ಹಿಂದಿನ ಚುನಾವಣೆಯಲ್ಲಿ ಒಟ್ಟು 41 ವಾರ್ಡ್‌ಗಳ ಪೈಕಿ 14 ವಾರ್ಡ್‌ಗಳಲ್ಲಿ (ಶೇ 34.14) ಮಹಿಳಾ ಮೀಸಲಾತಿ ಕಲ್ಪಿಸಲಾಗಿತ್ತು. ಈ ಬಾರಿ ಒಟ್ಟು 45 ವಾರ್ಡ್‌ಗಳ ಪೈಕಿ 21 ವಾರ್ಡ್‌ಗಳಲ್ಲಿ (ಶೇ 46.66) ಮಹಿಳಾ ಮೀಸಲಾತಿ ಕಲ್ಪಿಸಲಾಗಿದೆ. ಇದರಿಂದಾಗಿ ಸಹಜವಾಗಿಯೇ ಈ ಬಾರಿ ಪಾಲಿಕೆಯಲ್ಲಿ ‘ಸ್ತ್ರೀ ಶಕ್ತಿ’ ಹೆಚ್ಚಲಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 3,80,917 ಮತದಾರರಿದ್ದಾರೆ. ಇವರ ಪೈಕಿ 1,90,506 ಪುರುಷ ಮತದಾರರಿದ್ದು, 1,90,347 (ಶೇ 49.97) ಮಹಿಳಾ ಮತದಾರರಿದ್ದಾರೆ. ಒಟ್ಟು ಮತದಾರರಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದಾರೆ. ಈ ಬಾರಿ ಶೇ 46.66ರಷ್ಟು ವಾರ್ಡ್‌ ಮಹಿಳೆಯರಿಗೆ ಮೀಸಲಾಗಿರುವುದು ಸ್ತ್ರೀವಾದದ ಪ್ರತಿಪಾದಕರಲ್ಲಿ ಆಶಾಕಿರಣ ಮೂಡಿಸಿದೆ.

ಕಳೆದ ಬಾರಿ ಪಾಲಿಕೆ ಅಧಿಕಾರದ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್‌ನಲ್ಲಿ ಮಹಿಳಾ ಮೀಸಲಾತಿ ಇರುವ 14 ವಾರ್ಡ್‌ಗಳ ಜೊತೆಗೆ ವಿನೋಬನಗರದಲ್ಲಿ (ಕಳೆದ ಬಾರಿ 20ನೇ ವಾರ್ಡ್‌) ರೇಖಾ ನಾಗರಾಜ್‌ ಅವರು ಆಯ್ಕೆಯಾಗಿದ್ದರು. ಬಿಸಿಎಂ ‘ಬಿ’ಗೆ ಮೀಸಲಾತಿ ನಿಗದಿಯಾಗಿತ್ತು. ಕಾಂಗ್ರೆಸ್‌ನ ಪ್ರಭಾವಿ ಮುಖಂಡ ನಾಗರಾಜ್‌ ಎ. ಅವರ ಪತ್ನಿ ರೇಖಾ ಅವರು ಕಾಂಗ್ರೆಸ್‌ ಟಿಕೆಟ್‌ ಪಡೆದು ಗೆಲ್ಲುವ ಮೂಲಕ ಮೇಯರ್‌ ಪಟ್ಟವನ್ನೂ ಅಲಂಕರಿಸಿದ್ದರು. ಆದರೆ, ‘ಕಮಲ’ ಪಕ್ಷದಿಂದ ಯಾವೊಬ್ಬ ಮಹಿಳಾ ಪ್ರತಿನಿಧಿಯೂ ಇರಲಿಲ್ಲ.

ಮಹಿಳಾ ಮೀಸಲಾತಿ ಪ್ರಮಾಣ ಹೆಚ್ಚಿರುವುದರಿಂದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಅನಿವಾರ್ಯವಾಗಿ ಮಹಿಳೆಯರಿಗೆ ಅವಕಾಶ ಕಲ್ಪಿಸಲೇಬೇಕಾಗಿದೆ. ಪಕ್ಷೇತರರಾಗಿ ಸ್ಪರ್ಧಿಸುವ ಮಹಿಳೆಯರಿಗೂ ಹೆಚ್ಚಿನ ಅವಕಾಶ ಸಿಕ್ಕಂತಾಗಿದೆ. ಮಹಿಳಾ ಮೀಸಲಾತಿ ಹೊರತುಪಡಿಸಿ ಬೇರೆ ವಾರ್ಡ್‌ಗಳಲ್ಲಿ ರಾಜಕೀಯ ಪಕ್ಷಗಳು ಎಷ್ಟು ಮಹಿಳೆಯರಿಗೆ ಅವಕಾಶ ಮಾಡಿಕೊಡುತ್ತದೆ ಎಂಬ ಕುತೂಹಲವೂ ಮೂಡಿದೆ.

‘ಈ ಬಾರಿ ಮಹಿಳಾ ಮೀಸಲಾತಿ ಹೆಚ್ಚಿರುವುದರಿಂದ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿದೆ. ಪಕ್ಷದ ಸಂಘಟನೆಯಲ್ಲಿ ಹೆಚ್ಚು ತೊಡಗಿಕೊಂಡ ಹಲವು ಕಾರ್ಯಕರ್ತೆಯರು ಸ್ಪರ್ಧಿಸಲು ಉತ್ಸಾಹ ತೋರಿಸುತ್ತಿದ್ದಾರೆ. 23ನೇ ವಾರ್ಡ್‌ನಿಂದ ಸ್ಪರ್ಧಿಸಲು ನಾನೂ ಬಯಸಿದ್ದೇನೆ. ಯಾರಿಗೆ ಟಿಕೆಟ್‌ ಕೊಡಬೇಕು ಎಂಬ ಬಗ್ಗೆ ಶೀಘ್ರದಲ್ಲೇ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಯಮ್ಮ ಎಚ್‌.ಸಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಪಕ್ಷದ ಸಂಘಟನೆಯಲ್ಲಿ ಹಲವು ಕಾರ್ಯಕರ್ತೆಯರು ತೊಡಗಿಕೊಂಡಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಕ್ಕಿರುವುದರಿಂದ ಹಿರಿಯ ಕಾರ್ಯಕರ್ತೆಯರಿಗೂ ಅವಕಾಶ ಸಿಗಬಹುದೇನೋ. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಮೂರು ದಿನಗಳಲ್ಲಿ ಟಿಕೆಟ್‌ ಯಾರಿಗೆ ನೀಡಬೇಕೆನ್ನುವುದು ಅಂತಿಮಗೊಳ್ಳಲಿದೆ’ ಎಂದು ಕಾಂಗ್ರೆಸ್‌ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್‌ ಹೇಳಿದರು.

ಕಳೆದ ಅವಧಿಯಲ್ಲಿ ಮೇಯರ್‌ ಆಗಿದ್ದ ಅನಿತಾಬಾಯಿ ಅವರ ವಾರ್ಡ್‌ ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹೀಗಾಗಿ ಅವರು ತಾವು ಸ್ಪರ್ಧಿಸುವ ಬದಲು ತಮ್ಮ ಕುಟುಂಬದ ಸದಸ್ಯರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.

**

ನಾಲ್ವರು ಮಹಿಳೆಯರಿಗೆ ಮೇಯರ್‌ ಭಾಗ್ಯ

ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 15 ಮಹಿಳೆಯರ ಪೈಕಿ ನಾಲ್ವರಿಗೆ ಮೇಯರ್‌ ಸ್ಥಾನ ಅಲಂಕರಿಸುವ ಭಾಗ್ಯ ಒದಗಿಬಂದಿತ್ತು. ಮೊದಲ ಅವಧಿಗೆ ರೇಣುಕಾಬಾಯಿ ವೆಂಕಟೇಶ್‌ ಒಂದು ವರ್ಷ ಮೇಯರ್‌ ಆಗಿದ್ದರು. ಎಚ್‌.ಬಿ. ಗೋಣೆಪ್ಪ ಅವರ ಸರದಿ ಬಳಿಕ ಅಶ್ವಿನಿ ಪ್ರಶಾಂತ್‌, ನಂತರ ರೇಖಾ ನಾಗರಾಜ್‌ ತಲಾ ಐದು ತಿಂಗಳು ಹಾಗೂ ಅನಿತಾಬಾಯಿ ಮಾಲತೇಶ್‌ ಒಂದು ವರ್ಷ; ಶೋಭಾ ಪಲ್ಲಾಗಟ್ಟೆ 11 ತಿಂಗಳು ಮೇಯರ್‌ ಸ್ಥಾನ ಅಲಂಕರಿಸಿದ್ದರು.ಮಂಜಮ್ಮ ಇ. ಹನುಮಂತಪ್ಪ ಹಾಗೂ ನಾಗರತ್ನಮ್ಮ ಅವರಿಗೆ ಉಪ ಮೇಯರ್‌ ಭಾಗ್ಯ ಒದಲಿದಿತ್ತು.ಈ ಬಾರಿ ಎಷ್ಟು ಸದಸ್ಯೆಯರಿಗೆ ಮೇಯರ್‌ ಹಾಗೂ ಉಪ ಮೇಯರ್‌ ಪಟ್ಟ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

**

ಮಹಿಳಾ ಸಬಲೀಕರಣದ ಕೂಗಿನ ನಡುವೆಯೇ ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಶೇ 46ರಷ್ಟು ಮಹಿಳಾ ಮೀಸಲಾತಿ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಇದು ಆಶಾದಾಯಕ ಬೆಳವಣಿಗೆ.
– ಜಯಮ್ಮ, ಅಧ್ಯಕ್ಷೆ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ

ಈ ಬಾರಿಯ ಚುನಾವಣೆಯಲ್ಲಿ ಸುಮಾರು ಅರ್ಧದಷ್ಟು ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿರುವುದಕ್ಕೆ ಸಂತೋಷವಾಗಿದೆ. ರಾಜಕೀಯದಲ್ಲಿ ಮಹಿಳೆಯರಿಗೂ ಅವಕಾಶ ಸಿಕ್ಕಂತಾಗಲಿದೆ.
– ಅನಿತಾಬಾಯಿ, ಅಧ್ಯಕ್ಷೆ, ಜಿಲ್ಲಾ ಮಹಿಳಾ ಕಾಂಗ್ರೆಸ್‌

ಅಂಕಿ–ಅಂಶಗಳು

45 ಪಾಲಿಕೆ ವ್ಯಾಪ್ತಿಯ ಒಟ್ಟು ವಾರ್ಡ್‌ಗಳು

21 ಮಹಿಳೆಗೆ ಮೀಸಲಾದ ಒಟ್ಟು ವಾರ್ಡ್‌ಗಳು

11 ಸಾಮಾನ್ಯ ಮಹಿಳೆಗೆ ಮೀಸಲಾದ ವಾರ್ಡ್‌ಗಳು

5 ಒಬಿಸಿ ‘ಎ’ ಮಹಿಳೆಗೆ ಮೀಸಲಾದ ವಾರ್ಡ್‌ಗಳು

3 ಎಸ್‌.ಸಿ ಮಹಿಳೆಗೆ ಮೀಸಲಾದ ವಾರ್ಡ್‌ಗಳು

1 ಎಸ್‌ಟಿ ಮತ್ತು ಒಬಿಸಿ ‘ಬಿ’ ಮಹಿಳೆಗೆ ಮೀಸಲಾದ ವಾರ್ಡ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT