ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಕಟ್ಟುವ ಶಕ್ತಿ ಅಂಗನವಾಡಿ ಸಿಬ್ಬಂದಿಗಿದೆ

ಅಂಗನವಾಡಿ ಸಿಬ್ಬಂದಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಾಹಿತಿ ರಂಜಾನ್‌ ದರ್ಗಾ
Last Updated 4 ಜನವರಿ 2019, 14:01 IST
ಅಕ್ಷರ ಗಾತ್ರ

ದಾವಣಗೆರೆ: ಜಾತಿ, ಮತ, ಪಂಥಗಳ ಹಂಗಿಲ್ಲದ ಮಕ್ಕಳು ಅಂಗನವಾಡಿಗೆ ಬರುತ್ತವೆ. ಅವರಲ್ಲಿ ಸಮಾನತೆಯ, ಜಾತ್ಯತೀತವಾದ ಮೌಲ್ಯಗಳನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ಕಟ್ಟುವ ಅವಕಾಶ ಮತ್ತು ಶಕ್ತಿ ಅಂಗನವಾಡಿ ಸಿಬ್ಬಂದಿಗೆ ಇದೆ ಎಂದು ಸಾಹಿತಿ ರಂಜಾನ್‌ ದರ್ಗಾ ಹೇಳಿದರು.

ನಗರದ ಗುಲ್‌ಷನ್‌ ಶಾದಿಮಹಲ್‌ನಲ್ಲಿ ಶುಕ್ರವಾರ ಹುಸೇನಿಯಾ ಫೌಂಡೇಷನ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದಲ್ಲಿ ಏರ್ಪಡಿಸಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಂಗನವಾಡಿ ಸಿಬ್ಬಂದಿಗೆ ಒಂದು ದಿನದ ಕಾರ್ಯಾಗಾರ ಹಾಗೂ 13ನೇ ವಾರ್ಡ್‌ನ ಗರ್ಭಿಣಿಯರಿಗೆ ಉಲ್ಲನ್‌ ಹೊದಿಕೆ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾವಿರ ಮಕ್ಕಳ ತಾಯಂದಿರು ಎಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಗೌರವಿಸಲಾಗುತ್ತದೆ. ಮಕ್ಕಳಿಗೆ ಆಹಾರ, ಆರೋಗ್ಯ ಮತ್ತು ಅನೌಪಚಾರಿಕ ಶಿಕ್ಷಣ ಕೊಡುವ ಅವರ ಕಾಯಕ ದೊಡ್ಡದು ಎಂದರು.

ಸಮಾಜ ನಾಚಿಕೆಪಟ್ಟುಕೊಳ್ಳುವಷ್ಟು ಸಂಬಳವನ್ನು ಸರ್ಕಾರ ಅಂಗನವಾಡಿ ಸಿಬ್ಬಂದಿಗೆ ನೀಡುತ್ತಿದೆ. ₹ 10 ಸಾವಿರ ವೇತನ ಪಡೆಯಲು ಸಿಬ್ಬಂದಿ 25 ವರ್ಷಗಳ ಹೋರಾಟ ಮಾಡಿದ್ದಾರೆ. ವೃತ್ತಿಯನ್ನು ಪ್ರೀತಿಸಿ, ಮಕ್ಕಳನ್ನು ಪ್ರೀತಿಯಿಂದ ಕಾಣಿ. ಇದರಿಂದ ಕಡಿಮೆ ಸಂಬಳ ಪಡೆದರೂ ಆರೋಗ್ಯಕರ ಜೀವನ ನಡೆಸಲು ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.

ನಾಲ್ಕು ವರ್ಷಗಳಿಂದ ಅಂಗನವಾಡಿಗಳಿಗೆ ಕೇಂದ್ರ ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರದ ಮೇಲೆ ಹೊರೆ ಹೆಚ್ಚಿದೆ. ಇದರಿಂದ ಶಿಶು ಕಲ್ಯಾಣ ಯೋಜನೆ ಖಾಸಗಿಕರಣಗೊಳ್ಳುವ ಅಪಾಯವಿದೆ. ಇದರ ಬಗ್ಗೆ ಎಚ್ಚರದಿಂದಿರಬೇಕು. ಹೋರಾಟ ಮತ್ತು ಸಂಘಟನೆಯಿಂದ ಅಂಗನವಾಡಿ ಸಿಬ್ಬಂದಿಗೆ ಸೌಲಭ್ಯಗಳು ಸಿಕ್ಕಿವೆ. ಸಂಘಟನೆಯನ್ನು ಬಲಗೊಳಿಸಿ, ಹೋರಾಟದ ಧ್ವನಿಯನ್ನು ಗಟ್ಟಿಗೊಳಿಸಲು ಮುಂದಾಗಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ‘ಹುಸೇನಿಯಾ ಫೌಂಡೇಷನ್‌ನವರು ಈ ಹಿಂದೆ ಪೌರಕಾರ್ಮಿಕರು, ರೋಗಿಗಳಿಗೆ ಹೊದಿಕೆಗಳನ್ನು ನೀಡಿದ್ದರು. ಅದಕ್ಕೂ ಮೊದಲು ಮಕ್ಕಳಿಗೆ ಪುಸ್ತಕಗಳನ್ನು ಕೊಟ್ಟಿದ್ದರು. ಈ ವರ್ಷ ಚಳಿ ಹೆಚ್ಚಿರುವುದರಿಂದ ಗರ್ಭಿಣಿಯರಿಗೆ ಹೊದಿಕೆಗಳನ್ನು ನೀಡುತ್ತಿದ್ದಾರೆ. ದುಡಿಮೆಯ ಕೆಲ ಭಾಗವನ್ನು ದಾನ ಮಾಡುವ ಗುಣ ಎಲ್ಲರಲ್ಲೂ ಬೆಳೆಯಲಿ’ ಎಂದು ಆಶಿಸಿದರು.

ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ದಾದಾಪೀರ್‌ ನವಿಲೇಹಾಳ್‌, ‘ಜಾತಿ, ಮತ, ಬಣ್ಣ ಭೇದವಿಲ್ಲದ ವಿಶ್ವಮಾನವ ಗುಣವುಳ್ಳ ಮಗು ನಿಮ್ಮ ಮಡಿಲಿಗೆ ಬಂದು ಬೀಳುತ್ತದೆ. ಅದಕ್ಕೆ ಬಾಲ್ಯದಲ್ಲಿಯೇ ದೊಡ್ಡ ಮೌಲ್ಯಗಳನ್ನು ಕಲಿಸುವ ನಿರಪೇಕ್ಷವಾದ ಕಾಯಕ ಮಾಡಲು ಅಂಗನವಾಡಿ ಸಿಬ್ಬಂದಿ ಮನಸ್ಸು ಮಾಡಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಮಕ್ಕಳಲ್ಲಿ ಹಿಂಸೆ, ಕ್ರೌರ್ಯ ಬಿತ್ತುವ ಕೆಲಸ ಆಗದಂತೆ ಎಚ್ಚರವಹಿಸಬೇಕು’ ಎಂದು ತಿಳಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಕರ್ನಾಟಕ ಮುಸ್ಲಿಂ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಎಚ್‌.ಐ. ಅಬುಸುಫಿಯಾನ್‌, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಸೈಯದ್‌ ಸೈಫುಲ್ಲಾ, ತೋಳಹುಣಸೆಯಲ್ಲಿರುವ ಎಸ್‌ಪಿಎಸ್‌ಎಸ್‌ ವಸತಿ ಶಾಲೆಯ ನಿರ್ದೇಶಕ ಕೆ. ಇಮಾಂ ಮಾತನಾಡಿದರು.

ಹುಸೇನಿಯಾ ಫೌಂಡೇಶನ್‌ ಅಧ್ಯಕ್ಷ ಕೆ. ಖಲಂದರ್‌ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್‌ ಕೆ. ಚಮನ್‌ಸಾಬ್‌, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಎಚ್‌.ಕೆ. ಲಿಂಗರಾಜ್‌, ಸಿಡಿಪಿಒ ವೀಣಾ, ದಾದಾ ಕಲಂದರ್‌, ಡಾ. ಸಿ.ಆರ್‌. ನಸೀರ್‌ ಅಹ್ಮದ್‌, ಜೆಡಿಎಸ್‌ ಮುಖಂಡ ಜೆ. ಅಮಾನುಲ್ಲಾ ಖಾನ್‌ ಇದ್ದರು.

* * *

‘ಒಬ್ಬರೇ ಹೋದರೆ ಹೊರಬರಲು ಆಗದು!’

‘ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸಿ ಮಂಡಕ್ಕಿ ಭಟ್ಟಿ, ವರ್ಕ್‌ಶಾಪ್‌ಗಳಿಗೆ ಕಳುಹಿಸುತ್ತಾರೆ. ಆದರೆ, ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಹಾಜರಾತಿ ನೀಡಿರುತ್ತಾರೆ. ಹೀಗಾದರೆ, ಹೆಚ್ಚುತ್ತಿರುವ ಬಾಲಕಾರ್ಮಿಕ, ಬಾಲ್ಯವಿವಾಹ ಪದ್ಧತಿಗಳನ್ನು ಹೋಗಲಾಡಿಸುವುದು ಹೇಗೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌ ಪ್ರಶ್ನಿಸಿದರು.

‘ಮಂಡಕ್ಕಿ ಭಟ್ಟಿ, ವರ್ಕ್‌ಶಾಪ್‌ಗಳಲ್ಲಿ ದಾಳಿ ನಡೆಸಲು ಅಧಿಕಾರಿಗಳು ಒಬ್ಬರೇ ಹೋದರೆ, ಹೊರಬರಲು ಆಗದು. ಪೊಲೀಸರ ಜತೆಗೇ ಕಾರ್ಯಾಚರಣೆಗೆ ಹೋಗಬೇಕು. ಆದರೆ, ಪೊಲೀಸರಲ್ಲೇ ಕೆಲವರು ದಾಳಿಯ ಮಾಹಿತಿಯನ್ನು ನೀಡುತ್ತಾರೆ. ಭಟ್ಟಿಗಳಲ್ಲಿ ಮಕ್ಕಳು ಸಿಕ್ಕರೂ ಊಟ ನೀಡಲು ಬಂದಿದ್ದರು ಎಂದು ಹೇಳಿ ಪೋಷಕರು ನುಣುಚಿಕೊಳ್ಳುತ್ತಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಆಶಯ ಪೋಷಕರಲ್ಲೂ ಇರಬೇಕು. ಅಧಿಕಾರಿಗಳಿಗೆ ಸಮುದಾಯದ ಮುಖಂಡರೂ ಸಹಕಾರ ನೀಡಬೇಕು’ ಎಂದು ಹೇಳಿದರು.

ಮೂಲಭೂತವಾದದಿಂದ ಮಹಿಳೆಯರಿಗಿಲ್ಲ ಧಾರ್ಮಿಕ ಸ್ವಾತಂತ್ರ್ಯ
ಮಹಿಳೆಯರಿಗೆ ಸಂವಿಧಾನಬದ್ಧವಾಗಿ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದರೂ ಮೂಲಭೂತವಾದದಿಂದಾಗಿ ಸ್ತ್ರೀಯರಿಗೆ ಅದು ದಕ್ಕುತ್ತಿಲ್ಲ. ಇದಕ್ಕೆ ಶಬರಿಮಲೆಯಲ್ಲಿ ನಡೆಯುತ್ತಿರುವ ಸಂಗತಿಗಳೇ ನಿದರ್ಶನ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

12ನೇ ಶತಮಾನದಲ್ಲೇ ಬಸವಣ್ಣ, ಮಹಿಳೆಯರಿಗೆ ಧಾರ್ಮಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಕೊಟ್ಟಿದ್ದರು. ಅವರ ಆಶಯಗಳನ್ನು ಪಾಲಿಸುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸ್ತ್ರೀಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT