ಭಾನುವಾರ, ಅಕ್ಟೋಬರ್ 20, 2019
27 °C
ಪುರಾಣ, ಸಂಪ್ರದಾಯ, ನಾಗರಿಕತೆ, ಗ್ರಾಮೀಣ ಬದುಕು ಸಾರುವ ಚಿತ್ರಣ

ಕಣ್ಮನ ಸೆಳೆವ ದಸರಾ ಬೊಂಬೆಗಳ ಲೋಕ

Published:
Updated:
Prajavani

ದಾವಣಗೆರೆ: ವಿಷ್ಣುವಿನ ದಶಾವತಾರ, ರಾಮಾಯಣ, ಮಹಾಭಾರತದ ಚಿತ್ರಣಗಳು, ದಸರಾ ವೈಭವ, ಒನಕೆ ಓಬವ್ವನ ಪರಾಕ್ರಮ, ಬಂಗಾರದಲ್ಲಿ ಮಿಂದೆದ್ದ ಅನಂತ ಶಯನ ಪದ್ಮನಾಭ, ಲಿಂಗ ಸಮಾನತೆ ಸಾರುವ ಅರ್ಧನಾರೀಶ್ವರ, ಮಾತಾ–ಪಿತೃಗಳೇ ದೇವರೆಂದು ಭಾವಿಸಿದ ಶ್ರವಣಕುಮಾರ, ಹಳ್ಳಿ ಸೊಗಡು ಬಿಂಬಿಸುವ ಚಿತ್ರಣ..

ಇಂತಹ ಸುಂದರ ದೃಶ್ಯಗಳನ್ನು ನೋಡಬೇಕೆಂದರೆ ನೀವು ಇಲ್ಲಿನ ವಿನೋಬನಗರದ 3ನೇ ಮುಖ್ಯರಸ್ತೆಯ 11ನೇ ಕ್ರಾಸ್‌ನ ಕೆ. ಚಂದ್ರಿಕಾ ಅವರ ಮನೆಗೆ ಬರಬೇಕು. ನವರಾತ್ರಿಯ ಒಂಬತ್ತು ದಿನಗಳ ಕಾಲ ಇಲ್ಲಿ ಬೊಂಬೆ ದಸರಾವನ್ನು ಕಣ್ತುಂಬಿಕೊಳ್ಳಬಹುದು.

ದಸರಾ ಹಬ್ಬದಲ್ಲಿ ಗೊಂಬೆಗಳನ್ನು ಕೂರಿಸುವುದು ಸಂಪ್ರದಾಯ. ಇದನ್ನು 23 ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ ಚಂದ್ರಿಕಾ. ತಾಯಿ ರೂಢಿಸಿಕೊಂಡು ಬಂದ ಸಂಪ್ರದಾಯವನ್ನು ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರ ಬಳಿ 3 ಸಾವಿರ ಗೊಂಬೆಗಳ ಸಂಗ್ರಹ ಇದೆ. 200ಕ್ಕೂ ಹೆಚ್ಚು ವೈವಿಧ್ಯಮಯ ಪ್ರಸಂಗ ಸಾರುವ 300 ವರ್ಷಗಳ ಗೊಂಬೆಗಳು ಗಮನ ಸೆಳೆಯುತ್ತವೆ.

ಕಲಾತ್ಮಕವಾಗಿ ಗಮನಸೆಳೆವ ಬೊಂಬೆಗಳು ಅವರ ಕುಸುರಿ ಕೆಲಸದಲ್ಲಿ ಮೂಡಿಬಂದಿದೆ. ಮಕ್ಕಳನ್ನು ಸೆಳೆವ ನೃತ್ಯ ಮಾಡುವ ಹುಡುಗಿ, ಆನೆ, ಕುದುರೆಗಳು ಇವೆ. ಬೆಂಗಳೂರಿನಲ್ಲಿ ಅಂಚೆ ಇಲಾಖೆಯ ವಿಮಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಅವರು ಇದನ್ನು ಹವ್ಯಾಸವಾಗಿ ಸ್ವೀಕರಿಸಿದ್ದಾರೆ. ಎಲ್ಲೇ ಗೊಂಬೆಗಳ ಪ್ರದರ್ಶನ ಇದ್ದರೂ ಅಲ್ಲಿ ಚಂದ್ರಿಕಾ ಅವರು ಗೊಂಬೆಗಳ ಹಾಜರಿ ಕಾಣಬಹುದು.

ಕುಂಭಕೋಣಂ, ಕೃಷ್ಣಗಿರಿ, ಕೊಂಡಪಲ್ಲಿ, ಪುದುಚೆರಿ, ಚನ್ನಪಟ್ಟಣದ ಗೊಂಬೆಗಳು ಎಲ್ಲರ ಮನ ಸೆಳೆಯುತ್ತವೆ. ದಸರಾ ಗೊಂಬೆಗಳು ಎಂದ ಮೇಲೆ ಪಟ್ಟದ ಗೊಂಬೆಗಳು, ಅಷ್ಟಲಕ್ಷ್ಮಿಯರು, ಆನೆ, ಪುರಾಣ ಬಿಂಬಿಸುವ ಚಿತ್ರಣ ಇರಲೇಬೇಕು. ಇಲ್ಲೂ ಅದನ್ನು ಕಣ್ತುಂಬಿಕೊಳ್ಳಬಹುದು. ರಾಮಾಯಣದ ರಾಮ, ರಾವಣರ ಯುದ್ಧ ಹಾಗೂ ಬೇಡರ ಕಣ್ಣಪ್ಪ ಶಿವನಿಗೆ ಕಣ್ಣು ನೀಡುವುದು ಈ ಬಾರಿಯ ವಿಶೇಷ.

ಕೃಷ್ಣನ ಬಾಲಲೀಲೆ, ಕೃಷ್ಣ–ಸುಧಾಮರ ಸ್ನೇಹ, ಕಾಳಿಂಗ ನರ್ತನ, ವಿಶ್ವರೂಪ ದರ್ಶನ, ಕಂಬ ಒಡೆದು ಬರುವ ಉಗ್ರನರಸಿಂಹನ ಚಿತ್ರಣ ಬೆರಗು ಮೂಡಿಸುತ್ತದೆ. ಕೈಲಾಸದಲ್ಲಿ ಶಿವನ ಪರಿವಾರ, ತಿರುಪತಿಗೆ ತೆರಳುವ ಭಕ್ತರು, ಧರ್ಮಪ್ರವರ್ತಕ ಆಚಾರ್ಯತ್ರಯರು ಪುರಾಣ ಸಂಸ್ಕೃತಿ ಬಿಂಬಿಸಿದರೆ, ನಾಗರಿಕತೆಯ ಉಗಮ ಸಂಸ್ಕೃತಿಯನ್ನು ತಿಳಿಸುತ್ತದೆ.

’ಕೃಷ್ಣ ಜನ್ಮಾಷ್ಟಮಿಯಲ್ಲೂ ಕೃಷ್ಣನ ಗೊಂಬೆಗಳ ಪ್ರದರ್ಶನ ಇರುತ್ತದೆ. 5 ಸಾವಿರ ಗೊಂಬೆಗಳನ್ನು ಸಂಗ್ರಹಿಸುವ ಗುರಿ ಇದೆ. ದಾವಣಗೆರೆ ನನ್ನ ಊರು. ಹೀಗಾಗಿ ಇಲ್ಲೇ ದಸರಾ ಗೊಂಬೆಯ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದೇನೆ. ಪುತ್ರ ಪವನ್‌ ಇದನ್ನು ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಎಂದು ಖುಷಿಯಿಂದಲೇ ಹೇಳುತ್ತಾರೆ ಚಂದ್ರಿಕಾ.

’ಯಾವುದೇ ಜಾತ್ರೆ, ಪ್ರದರ್ಶನ ಇದ್ದರೂ ಅಲ್ಲಿಗೆ ಹೋಗಿ ಗೊಂಬೆ ತರುತ್ತೇನೆ. ಪ್ರಸಂಗದ ಭಾವವನ್ನು ಪರಿಣಾಮಕಾರಿಯಾಗಿ ಹಿಡಿದಿಡುವ ಗೊಂಬೆಗಳ ಆಯ್ಕೆಗೆ ನನ್ನ ಮೊದಲ ಆದ್ಯತೆ. ಆ ತರಹದ ಬೊಂಬೆಗಳು ನಿಮಗೂ ಕಂಡರೆ ತಿಳಿಸಿ‘ ಎಂದು ಆಸಕ್ತಿಯಿಂದ ಕೇಳಿದರು.

Post Comments (+)