ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಬಳಕೆ: ಮಣ್ಣಿಗೆ ಸೆರೆ ಕುಡಿಸಿದಂಗ

ವಿಶ್ವ ಮಣ್ಣು ದಿನಾಚರಣೆಯಲ್ಲಿ ವಾಟರ್‌ ಲಿಟರಸಿ ಫೌಂಡೇಶನ್‌ ಅಧ್ಯಕ್ಷ ಅಯ್ಯಪ್ಪ ಮಸಗಿ
Last Updated 5 ಡಿಸೆಂಬರ್ 2018, 11:26 IST
ಅಕ್ಷರ ಗಾತ್ರ

ದಾವಣಗೆರೆ: ‘ಮಣ್ಣು ಜೀವಸೆಲೆ. ಮುಷ್ಟಿ ಮಣ್ಣಿನಲ್ಲೂ ಕೋಟ್ಯಂತರ ಸೂಕ್ಷ್ಮಜೀವಿಗಳಿರುತ್ತವ. ಕೃಷಿಗೆ ರಾಸಾಯನಿಕ ಹಾಕುವುದು ಮಣ್ಣಿಗೆ ಸಾರಾಯಿ ಕುಡಿಸಿದಂಗ’ ಎಂದು ವಾಟರ್‌ ಲಿಟರಸಿ ಫೌಂಡೇಶನ್‌ ಅಧ್ಯಕ್ಷ ಅಯ್ಯಪ್ಪ ಮಸಗಿ ಹೇಳಿದರು.

ನಗರದ ತರಳವಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ರಾಸಾಯನಿಕಗಳ ಅತಿಯಾದ ಬಳಕೆ, ಸಾವಯವ ಅಂಶಗಳ ಕೊರತೆಯಿಂದಾಗಿ ಸೂಕ್ಷ್ಮಜೀವಿಗಳು ನಾಶವಾಗಿವೆ. ಮಣ್ಣು ಸತ್ವಹೀನವಾಗಿದೆ. ಹೀಗಾಗಿ, ಸಸ್ಯಗಳಿಗೆ ಪೋಷಕಾಂಶ ಸಿಗದಂತಾಗಿದೆ. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಮುಂದೆ ಭಾರಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಹಾರ ಕೊರತೆಯಿಂದಾಗಿ ಹಸಿರು ಕ್ರಾಂತಿ ಜಾರಿಗೆ ತರಲು ಇಂದಿರಾ ಗಾಂಧಿ ಮುಂದಾದರು. ಈ ಸಂದರ್ಭವನ್ನು ಬಳಸಿಕೊಂಡ 7 ಬಹುರಾಷ್ಟ್ರೀಯ ಕಂಪನಿಗಳು ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ಪರಿಚಯಿಸಿದರು. ರೈತರು ರಾಸಾಯನಿಕಗಳ ಬಳಕೆಗೆ ಒಪ್ಪದಿದ್ದರೂ ವಾಮಮಾರ್ಗದ ಮೂಲಕ ಕೃಷಿ ಮೇಲೆ ರಾಸಾಯನಿಕ ಬಳಕೆಯನ್ನು ಹೇರಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಸಾಯನಿಕ ಬಳಕೆ ನಿಜವಾಗಿಯೂ ಬೇಕಿಲ್ಲ. ಆದರೂ ಕಂಪನಿಗಳ ಹಿತಾಸಕ್ತಿಗೆ ಮಣಿದು ರಾಸಾಯನಿಕ ಬಳಕೆ ಮುಂದುವರಿಸಲಾಗಿದೆ. ಇದು ಹೀಗೇ ಮುಂದುವರಿದರೆ ಜೀವ ಸಂಕುಲವೇ ವಿನಾಶದ ಹಾದಿ ಹಿಡಿಯಲಿದೆ ಎಂದು ಎಚ್ಚರಿಸಿದರು.

ದಶಕಗಳಿಂದ ಕಳೆ ನಾಶಕಗಳನ್ನು ಬಳಸಿದರೂ ಕಳೆ ನಾಶವಾಗಿಲ್ಲ. ಕಳೆ ಸಮೃದ್ಧವಾಗಿದ್ದಷ್ಟೂ ಬೆಳೆ ಚೆನ್ನಾಗಿ ಬರುತ್ತದೆ. ಕಳೆಯ ಜತೆಗೆ ಸಹಜೀವನ ಮಾಡುವುದೇ ಉತ್ತಮ ಮಾರ್ಗ. ಇದನ್ನು ರೈತರು ಅರ್ಥ ಮಾಡಿಕೊಂಡು, ಕಳೆಯ ಜತೆಗೇ ಬೆಳೆ ತೆಗೆಯುವ ಜಾಣ್ಮೆ ಬೆಳೆಸಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್‌.ಎ. ರವೀಂದ್ರನಾಥ, ‘ಈ ಹಿಂದೆ ಹೊಲಕ್ಕೆ ಕೊಟ್ಟಿಗೆ ಗೊಬ್ಬರ, ಕೆರೆಗೋಡು ಹಾಕಿ ಹುಲುಸಾದ ಬೆಳೆ ಬೆಳೆಯಲಾಗುತ್ತಿತ್ತು. ಆಗಿನ ಪದ್ಧತಿಯೇ ಚೆನ್ನಾಗಿತ್ತು. ಆದರೆ, ಅತಿಯಾದ ರಾಸಾಯನಿಕ ಬಳಕೆ ಮಾಡಿ, ಮಣ್ಣಿನ ಆರೋಗ್ಯ ಕೆಡಿಸಿ ಕೂತಿದ್ದೇವೆ. ಹೀಗಾಗಿ, ಮಣ್ಣಿನ ಆರೋಗ್ಯ ಸುಧಾರಣೆಗೆ ರೈತರು ಗಮನ ನೀಡಬೇಕು’ ಎಂದು ಸಲಹೆ ನೀಡಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್‌. ದೇವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೇಸಾಯಶಾಸ್ತ್ರ ವಿಷಯತಜ್ಞ ಬಿ.ಒ. ಮಲ್ಲಿಕಾರ್ಜುನ ‘ನೇರ ಕೂರಿಗೆ ಬಿತ್ತನೆ ತಂತ‌್ರಜ್ಞಾನ’ ಕುರಿತು ಉಪನ್ಯಾಸ ನೀಡಿದರು.

ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸದಸ್ಯ ಎಂ.ಕೆ. ರೇಣುಕಾರ್ಯ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಜಿ. ಹನುಮಂತಪ್ಪ, ಆರ್‌ಸಿಎಫ್‌ ಮಾರುಕಟ್ಟೆ ವ್ಯವಸ್ಥಾಪಕ ಸತೀಶ್‌ ವಾಘೋಡೆ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಟಿ.ಆರ್. ವೇದಮೂರ್ತಿ ಇದ್ದರು.

ಕೃಷಿ ವಿಸ್ತರಣೆ ವಿಷಯ ತಜ್ಞ ಜೆ. ರಘುರಾಜ ಸ್ವಾಗತಿಸಿದರು. ತೋಟಗಾರಿಕೆ ವಿಷಯ ತಜ್ಞ ಎಂ.ಜಿ. ಬಸವನಗೌಡ ವಂದಿಸಿದರು.

‘ಮಣ್ಣೇ ಅಕ್ಷಯ ಜಲ ಪಾತ್ರೆ’

ಹಳ್ಳ, ಕೊಳ್ಳ, ನದಿ, ಕೆರೆ, ಜಲಾಶಯಗಳಿಗಿಂತಲೂ ಹೆಚ್ಚು ಪ್ರಮಾಣದ ನೀರನ್ನು ಮಣ್ಣು ಹಿಡಿದಿಟ್ಟುಕೊಳ್ಳಬಲ್ಲದು. ಸಾವಯವ ಪದಾರ್ಥಗಳನ್ನು ಹೆಚ್ಚು ಹೆಚ್ಚಾಗಿ ಮಣ್ಣಿಗೆ ಸೇರಿಸಬೇಕು. ಇದರಿಂದ ಮಣ್ಣಿನ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಅಯ್ಯಪ್ಪ ಮಸಗಿ ತಿಳಿಸಿದರು.

‘ಪ್ರಧಾನಿ, ಮುಖ್ಯಮಂತ್ರಿಗೆ ನೀರು ಬೇಕಿಲ್ಲ. ರಾಜಕಾರಣಿಗಳಿಗೆ ನೀರಿನ ಸಮಸ್ಯೆ ಪರಿಹರಿಸುವ ಅಗತ್ಯವೂ ಇಲ್ಲ. ನೀರು ಬೇಕಾಗಿರುವುದು ನಮಗೆ. ಹೀಗಾಗಿ, ಸಾವಯವ ಕೃಷಿ ಆರಂಭಿಸಿ, ನೀರು ಇಂಗಿಸುವ ಮೂಲಕ ಸಾಮಾನ್ಯ ಜನರೇ ಜಲಕ್ರಾಂತಿ ಮಾಡಬೇಕು’ ಎಂದು ಕರೆ ನೀಡಿದರು.

*
ಸಿರಿಗೆರೆ ಸ್ವಾಮೀಜಿ ಕುಡೀಬೇಡಿ ಎಂದ ಮೇಲೆ ಇಲ್ಲಿನ ಜನ ಹೆಚ್ಚು ಕುಡೀತಿದ್ದಾರೆ. ರೈತರೂ ಅಷ್ಟೆ ಹೆಚ್ಚಿಗೆ ಗೊಬ್ಬರ, ಔಷಧಿ ಬಳಸಬೇಡಿ ಎಂಬ ಕೃಷಿ ಅಧಿಕಾರಿಗಳ ಮಾತು ಕೇಳುತ್ತಿಲ್ಲ.
–ಎಸ್‌.ಎ. ರವೀಂದ್ರನಾಥ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT