ನಮ್ಮೊಳಗಿನ ಸಂತೋಷ ಕಂಡುಕೊಂಡರೆ ಖಿನ್ನತೆ ಕಾಡದು: ನ್ಯಾಯಾಧೀಶ ಕೆಂಬಲಾಯ್ಯ

7

ನಮ್ಮೊಳಗಿನ ಸಂತೋಷ ಕಂಡುಕೊಂಡರೆ ಖಿನ್ನತೆ ಕಾಡದು: ನ್ಯಾಯಾಧೀಶ ಕೆಂಬಲಾಯ್ಯ

Published:
Updated:

ದಾವಣಗೆರೆ: ‘ಸಂತೋಷ, ನೆಮ್ಮದಿ ನಮ್ಮೊಳಗೇ ಇರುತ್ತದೆ. ನಮ್ಮನ್ನು ನಾವು ನೆಮ್ಮದಿಯಾಗಿ ಇಟ್ಟುಕೊಳ್ಳುವುದನ್ನು ಕಲಿತರೆ ಮಾನಸಿಕ ಖಿನ್ನತೆ ಕಾಡುವುದಿಲ್ಲ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಿಂದ ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆತ್ಮಹತ್ಯೆ ಪಿಡುಗಾಗಿ ಪರಿಣಮಿಸಿದೆ. ಹೀಗಾಗಿ ವಿಶ್ವಾದ್ಯಂತ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಿಸಲಾಗುತ್ತಿದೆ. ಖಿನ್ನತೆ, ಮನೋದೌರ್ಬಲ್ಯ, ನಮ್ಮ ಸುತ್ತಲಿನ ತ್ತಲ ಪರಿಸರ, ನಾವು ಮಾಡುವ ಕೆಲಸ ಪ್ರಮುಖ ಆತ್ಮಹತ್ಯೆಗೆ ಕಾರಣವಾಗಿವೆ’ ಎಂದರು.

‘ನಾವೆಲ್ಲಾ ದುಂಬಿ ಮತ್ತು ಇರುವೆಗಳನ್ನು ನೋಡಿ ಜೀವನ ಪಾಠ ಕಲಿಯಬೇಕು. ಒಂದು ದುಂಬಿ ಒಂದು ಹನಿ ಜೇನಿಗಾಗಿ ಸುಮಾರು 15 ಕಿ.ಮೀ ಸಾಗುತ್ತದೆ. ಇರುವೆ ಕೂಡ ನಿರಂತರವಾಗಿ ದುಡಿಯುತ್ತಲೇ ಇರುತ್ತವೆ. ಇವೆರಡೂ ತಮಗಾಗಿ ಮಾತ್ರ ದುಡಿಯುವುದಿಲ್ಲ. ಬದಲಾಗಿ ಇವು ಸಂಗ್ರಹಿಸಿದ ಆಹಾರವನ್ನು ಯಾರು ಬೇಕಾದರೂ ಬಳಸಬಹುದು. ತಾವು ದುಡಿದಿದ್ದೆಂದು ಅವು ನೊಂದುಕೊಳ್ಳುವುದಿಲ್ಲ. ಇದೇ ರೀತಿ ಮನಷ್ಯನೂ ಬದಕಲು ಕಲಿತಾಗ ಖಿನ್ನತೆ ಆವರಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ, ‘ಆತ್ಮಹತ್ಯೆ ವಿಶ್ವದಾದ್ಯಂತ ಒಂದು ಗಂಭೀರ ವಿಚಾರವಾಗಿದೆ. ಎಲ್ಲ ವಯೋಮಾನದವರು, ಎಲ್ಲ ವರ್ಗದವರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಾವು ಸಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧೀಕ್ಷಕ ಕರ್ಣ ಬಿ. ಕ್ಷತ್ರಿ, ಅತಿ ವ್ಯಾಮೋಹ ಮತ್ತು ಅತಿಯಾದ ಅಭ್ಯಾಸಗಳು ಆಘಾತಕ್ಕೆ ದಾರಿ ಮಾಡಿಕೊಡುತ್ತವೆ. ಯೋಗ, ಧ್ಯಾನ ಮತ್ತು ಉತ್ತಮ ಸಹವಾಸಗಳಿಂದ ಸಕಾರಾತ್ಮಕ ಆಲೋಚನೆಗಳನ್ನು ಮಾಡಬೇಕು. ಮಾನಸಿಕ ಖಿನ್ನತೆಗೊಳಗಾದವರನ್ನು ಗುರುತಿಸಿ ಧೈರ್ಯ ತುಂಬಬೇಕು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ. ಸರೋಜಾಬಾಯಿ ಮಾತನಾಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಮನೋವೈದ್ಯ ಗಂಗಂ ಸಿದ್ದುರೆಡ್ಡಿ ಆತ್ಮಹತ್ಯೆಯ ಕಾರಣಗಳ ಬಗ್ಗೆ ಮಾಹಿತಿ ನೀಡಿದರು.

ಸಮಾಜ ಸೇವಕ ಫೂಲ್‌ಚಂದ್‌ ಷಾ, ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ಪಾಟಿಲ್, ಡಾ. ವಸಂತ್‌ಕುಮಾರ್‌, ವಾರ್ತಾ ಸಹಾಯಕಿ ಭಾಗ್ಯ, ಮನಶಾಸ್ತ್ರಜ್ಞ ವಿಜಯಕುಮಾರ್ ಹಾಜರಿದ್ದರು. ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !