ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯ ಕಾಳಜಿಯೊಂದಿಗೆ ಕೆಲಸ ಮಾಡಿ: ಯದುವೀರ ಒಡೆಯರ್

ಗ್ರಾಮ ಶಿಲಾ ಶಾಸನ ಪ್ರತಿಕೃತಿ ಅನಾವರಣ ಕಾರ್ಯಕ್ರಮದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
Last Updated 3 ಮೇ 2022, 4:16 IST
ಅಕ್ಷರ ಗಾತ್ರ

ದಾವಣಗೆರೆ: ಮುಂದಿನ ಪೀಳಿಗೆ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪರಿಸರ ಹಾಗೂ ಪ್ರಕೃತಿಯ ಕಾಳಜಿಯನ್ನಿರಿಸಿಕೊಂಡು ಕೆಲಸ ಮಾಡಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ತಾಲ್ಲೂಕಿನ ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದಿಂದ ತಾಲ್ಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಸೋಮವಾರ ನಡೆದ ಕುಶಲೋಪರಿ ಸಭಾ ಹಾಗೂ ಗ್ರಾಮ ಶಿಲಾ ಶಾಸನ ಪ್ರತಿಕೃತಿ ಅನಾವರಣ ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಕಾಲದಲ್ಲಿ ಈ ರೀತಿಯ ಕಾರ‍್ಯವನ್ನು ಮಾಡುವುದು ಬಹಳ ಅಪರೂಪ. ಪ್ರಕೃತಿಯ ಸಂರಕ್ಷಣೆ ಮಾಡದೇ ಹೋದರೆ ಮುಂದಿನ ಪೀಳಿಗೆಗೆ ಬಹಳ ಕಷ್ಟ ಆಗಲಿದೆ. ಪ್ರಕೃತಿ ಸಂರಕ್ಷಣೆ ಗ್ರಾಮಗಳಿಂದಲೇ ಆಗಬೇಕು. ನಗರಗಳಲ್ಲಿ ಇದು ಆಗುವುದಿಲ್ಲ. ನಗರಗಳಿಂದ ಆಚೆ ಬರುವವರೆಗೆ ಉಸಿರಾಡುವುದು ಕೂಡ ಕಷ್ಟ. ಬರೀ ಕಾಂಕ್ರೀಟ್ ಕಾಡುಗಳಿಂದ ತುಂಬಿರುತ್ತದೆ ಎಂದು ವಿಷಾದಿಸಿದರು.

‘ಗ್ರಾಮ ವಾತಾವರಣವನ್ನು ಸಂರಕ್ಷಿಸಿ ನಮ್ಮ ಪೂರ್ವಜರು ಪರಿಸರ ಕಾಳಜಿಯನ್ನಿರಿಸಿಕೊಂಡು ಕೆಲಸ ಮಾಡುತ್ತಿದ್ದರು. ಅದೇ ಪದ್ಧತಿ ಅನುಸರಿಸುತ್ತಾ ಮುನ್ನಡೆದರೆ ನಮಗೆ ಹಾಗೂ ಮುಂದಿನ ಪೀಳಿಗೆಗೆ ಬಹಳ ಒಳ್ಳೆಯದಾಗಲಿದೆ. ಗ್ರಾಮಗಳು ಹಾಗೂ ದೇವಾಲಯಗಳು ಸಹ ಇದಕ್ಕೆ ಮಾದರಿ ಆಗಬೇಕು’ ಎಂದರು.

‘ಹಿಂದಿನ ಕಾಲದಲ್ಲಿ ದೇವಾಲಯಗಳಿಗೆ ಹೋಗುವಾಗ ಬುಟ್ಟಿಗಳಲ್ಲಿ ಪೂಜಾ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಇಂದು ಪ್ಲಾಸ್ಟಿಕ್‌ಗಳಲ್ಲಿ ಪೂಜಾ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ಬಿಸಾಡುತ್ತಿದ್ದೇವೆ. ಪ್ಲಾಸ್ಟಿಕ್‌ನಂತಹ ಹಾನಿಕಾರಕ ಉತ್ಪನ್ನ ಬೇರೆ ಯಾವುದೂ ಇಲ್ಲ. ಇದು ವಾತಾವರಣಕ್ಕೆ ಮಾತ್ರವಲ್ಲ, ಆಹಾರದ ಮೂಲಕ ಶರೀರವನ್ನು ಸೇರಿ ಆರೋಗ್ಯಕ್ಕೂ ಹಾನಿ ಉಂಟು ಮಾಡುತ್ತಿವೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ನಿಮ್ಮೆಲ್ಲರ ಪೂರ್ವಜರ ಆಕಾಂಕ್ಷೆ ಶಿಲಾಶಾಸನದಲ್ಲಿದೆ. ಅದಕ್ಕಾಗಿ ಶಿಲಾಶಾಸನಗಳನ್ನು ಸಂರಕ್ಷಣೆ ಮಾಡಬೇಕು. ಬಿ.ಎಲ್.ರೈಸ್ ಅವರು ಸಂಪೂರ್ಣ ಶಿಲಾಶಾಸನಗಳನ್ನು ದಾಖಲೆ ಮಾಡಿರುವುದು ಸ್ಮರಣೀಯವಾದುದು. ಆದರೆ ನಗರೀಕರಣದಿಂದ ಕೆಲವೇ ಶಾಸನಗಳು ಉಳಿದುಕೊಂಡಿವೆ’ ಎಂದು ಆಶಿಸಿದರು.

ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದ ಸದಸ್ಯರು ಶಿಲಾ ಶಾಸನದ ಬೆಳ್ಳಿಯ ಪ್ರತಿಕೃತಿಯನ್ನು ಮಹಾರಾಜರಿಗೆ ನೀಡಿ ಗೌರವಿಸಿದರು.

ಕೋಲ್ಕುಂಟೆ ಗ್ರಾಮಾಭ್ಯುದಯ ಸಂಘದ ಗೌರವಾಧ್ಯಕ್ಷ ಸುಚೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಶಿಕ್ಷಕ ಬಿ.ಎಸ್.ವೀರೇಶ್ ಗ್ರಾಮದ ಇತಿಹಾಸವನ್ನು ವಾಚಿಸಿದರು. ಸಂಘದ ಅಧ್ಯಕ್ಷ ಮಂಜುನಾಥ ಕೆ.ಜಿ., ಪ್ರಧಾನ ಕಾರ್ಯದರ್ಶಿ ಅಶೋಕ ಜಿ.ಎಚ್, ಮಾಜಿ ಶಾಸಕ ಬಸವರಾಜನಾಯ್ಕ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ. ಜೀವನಮೂರ್ತಿ, ಮುಖಂಡರಾದ ಜಿ.ಸಿ. ನಿಂಗಪ್ಪ, ಮೀನಾ ಶ್ರೀನಿವಾಸ, ತುರ್ಚಘಟ್ಟ ಬಸವರಾಜಪ್ಪ, ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾದ ಬಿ.ಜಿ. ಅಜಯ್ ಕುಮಾರ್, ಸೋಗಿ ಶಾಂತಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಅವರೂ ಇದ್ದರು.

ಮೆರವಣಿಗೆಯಲ್ಲಿ ಬಂದ ಯದುವೀರ

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

ಗ್ರಾಮದ ಸ್ವಾಗತ ಕಮಾನಿನ ಬಳಿ ಡೊಳ್ಳು, ಭಜನೆ, ಕಹಳೆ ಹಾಗೂ ತಮಟೆ ಮೊದಲಾದ ಕಲಾಮೇಳ, ಮಂಗಳವಾದ್ಯ,ಹಾಗೂ ಮಹಿಳೆಯರ ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು. ಸಾಲಂಕೃತ ಸಾರೋಟಿನಲ್ಲಿ ಮಹಾರಾಜರನ್ನು ಕರೆತರಲಾಯಿತು. ಪ್ರಾಚೀನ ವೀರಾಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಸೂಜಾರತಿ ಹಾಗೂ ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ಪೂರ್ವಿಕ ಆಳರಸರು ಕೋಲ್ಕುಂಟೆ ಗ್ರಾಮಕ್ಕೆ ಉಂಬಳಿ ನೀಡಿದ ಭೂಭಾಗ ವಿವರವುಳ್ಳ ಶಿಲಾಶಾಸನಗಳನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT