ಶನಿವಾರ, ನವೆಂಬರ್ 23, 2019
17 °C
ಎಸ್‌ಸಿಪಿ, ಟಿಎಸ್‌ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಶ್ನೆ

ಮಾಹಿತಿ ಇಲ್ಲದೇ ಇಲಾಖೆಯಲ್ಲಿ ಯಾಕಿರುವಿರಿ

Published:
Updated:
Prajavani

ದಾವಣಗರೆ: ‘ನಾವೇನು ರಾಕೇಟ್‌ ಬಗ್ಗೆ ಕೇಳಲ್ಲ. ಬೇರೆ ಇಲಾಖೆಗಳ ಬಗ್ಗೆಯೂ ಪ್ರಶ್ನಿಸಲ್ಲ. ನಿಮ್ಮ ಇಲಾಖೆಯ ಮಾಹಿತಿ ಕೇಳಿದರೂ ಇಲ್ಲ ಅಂದರೆ ಇಲಾಖೆಯಲ್ಲಿ ಯಾಕೆ ಇರುತ್ತೀರಿ?’

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‌ಸಿಪಿ, ಟಿಎಸ್‌ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಗರಂ ಆದ ಪರಿ ಇದು.

ಮಾಹಿತಿ ಇಲ್ಲದ ಅಧಿಕಾರಿಗಳಿಗೆ, ಇವತ್ತು ಗೈರಾದವರಿಗೆ ನೋಟಿಸ್‌ ನೀಡಿ ಎಂದು ಅವರು ಸೂಚಿಸಿದರು.

ಬಿತ್ತನೆ ಬೀಜ, ಮಣ್ಣು ಪರೀಕ್ಷೆ ಒಳಗೊಂಡಂತೆ ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ಎಸ್‌ಸಿಪಿಯಲ್ಲಿ ₹ 5.98 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 5.65 ಕೋಟಿ ಖರ್ಚು ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದಾಗ, ಯಾವ್ಯಾವ ತಾಲ್ಲೂಕಿಗೆ ಎಷ್ಟೆಷ್ಟು ವೆಚ್ಚವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಕೃಷಿ ಅಧಿಕಾರಿಯಲ್ಲಿ ಈ ಮಾಹಿತಿ ಇರಲಿಲ್ಲ.

ಸಣ್ಣ ನೀರಾವರಿ ಇಲಾಖೆಯ ಮಾಹಿತಿಯನ್ನು ನೀಡುವಾಗ, ಎಷ್ಟು ಚೆಕ್‌ಡ್ಯಾಂ ನಿರ್ಮಿಸಿದ್ದೀರಿ ಎಂದು ಮಹಾಂತೇಶ ಬೀಳಗಿ ಪ್ರಶ್ನಿಸಿದರು. 3 ಎಂದು ಎಂಜಿನಿಯರ್‌ ತಿಳಿಸಿದಾಗ ಎಲ್ಲೆಲ್ಲಿ ನಿರ್ಮಿಸಿದ್ದೀರಿ ಎಂದು ಮರುಪ್ರಶ್ನೆ ಮಾಡಿದರು. ಅಧಿಕಾರಿ ಸರಿಯಾಗಿ ಉತ್ತರಿಸದಾಗ ‘ಎಲ್ಲಿ ನಿಮ್ಮ ಮೇಲಧಿಕಾರಿ?’ ಎಂದು ಕೇಳಿದರು. ಅವರು ಮೀಟಿಂಗ್‌ಗೆ ಹೋಗಿದ್ದಾರೆ ಎಂದು ಎಂಜಿನಿಯರ್‌ ಹೇಳಿದಾಗ, ‘ಜಿಲ್ಲೆಯಲ್ಲಿ ಇವತ್ತು ಈ ಮೀಟಿಂಗ್‌ಗಿಂತ ಪ್ರಮುಖವಾದ ಮೀಟಿಂಗ್‌ ಯಾವುದಿದೆ? ಯಾರ ಅನುಮತಿ ಪಡೆದು ಹೋಗಿದ್ದಾರೆ? ಎಂದು ಹರಿಹಾಯ್ದರು.

ಎಸ್‌ಸಿಪಿಯಲ್ಲಿ 10 ಗುರಿ ಇದ್ದು, 6 ಆಗಿದೆ. 2 ಸ್ಥಳ ಬದಲಾವಣೆಯಾದ ಕಾರಣ ಕೆಲಸ ಇನ್ನಾಗಬೇಕಿದೆ. ಟಿಎಸ್‌ಪಿಯಲ್ಲಿ 8 ಗುರಿ ಇದ್ದು, ಎಲ್ಲ ಕೆಲಸ ಆಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಎಇಇ ಮಾಹಿತಿ ನೀಡಿದರು. ಬಾಕಿ ಇರುವ ಕೆಲಸಕ್ಕೆ ಟೆಂಡರ್‌ ಆಗಿದಾ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಆಗಿದೆ ಎಂದು ಎಇಇ ಉತ್ತರಿಸಿದಾಗ, ಯಾವಾಗ ಆಯಿತು ಎಂದು ಮರು ಪ್ರಶ್ನಿಸಿದಾಗ ಪ್ರಕ್ರಿಯೆಯಲ್ಲಿದೆ ಎಂದರು. ಟೆಂಡರ್‌ ಆಗಿಲ್ವ ಎಂದು ಮತ್ತೆ ಕೇಳಿದರು. ಇಲ್ಲ ಎಂಬ ಉತ್ತರ ಬಂತು.

ಪಂಚಾಯತ್‌ರಾಜ್‌ ಎಂಜಿನಿಯರ್‌ ವಿಭಾಗದ ಅಧಿಕಾರಿಯು 2018–19ರ ಮಾಹಿತಿ ನೀಡತೊಡಗಿದರು. ಈ ಸಭೆ 2019–20ರ ಸಾಲಿನದ್ದು, ನೀವು ಹಳೇ ಮಾಹಿತಿ ನೀಡುತ್ತಿದ್ದೀರಿ. ನಿಮ್ಮಲ್ಲಿ ಮಾಹಿತಿ ಇಲ್ಲ ಕುಳಿತುಕೊಳ್ಳಿ ಎಂದು ಗದರಿಸಿದರು.

ಹಲವು ಅಧಿಕಾರಿಗಳು ಇದೇ ರೀತಿ ಅರ್ಧಂಬರ್ಧ ಮಾಹಿತಿ ನೀಡಿದ್ದು, ಜಿಲ್ಲಾಧಿಕಾರಿಗೆ ಸಿಟ್ಟು ತರಿಸಿತು. ‘ಯಾರಿಗೂ ಇವತ್ತು ಬೈಯ್ಯಲ್ಲ ಎಂದು ನಿರ್ಧರಿಸಿದ್ದೆ. ಅದನ್ನೆಲ್ಲ ಹಾಳು ಮಾಡಿದ್ರಿ. ನಿಮ್ಮ ನಡವಳಿಕೆ ಬದಲಾಯಿಸಿಕೊಳ್ಳದೇ ಇದ್ದರೆ ನಾನು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಫಲಾನುಭವಿಗಳು ಕಡಿಮೆ ಇರುವ ಯೋಜನೆಗಳಲ್ಲಿ ಗುರಿ ಹೆಚ್ಚಿದೆ. ಫಲಾನುಭವಿಗಳು ಹೆಚ್ಚಿರುವಲ್ಲಿ ಗುರಿ ಬಹಳ ಕಡಿಮೆ ಇದೆ ಎಂದು ಶಾಸಕರಾದ ಪ್ರೊ. ಎನ್‌.ಲಿಂಗಣ್ಣ, ಎಸ್‌. ರಾಮಪ್ಪ ತಿಳಿಸಿದರು. ಚನ್ನಗಿರಿ ಶಾಸಕರ ಆಪ್ತ ಕಾರ್ಯದರ್ಶಿಯೂ ಇದರ ವಿವರ ನೀಡಿದರು.

ಸರ್ಕಾರದ ಮಟ್ಟದಲ್ಲಿ ಯಾವುದೆಲ್ಲ ಬದಲಾವಣೆಗಳಾಗಬೇಕೋ ಅದನ್ನು ಪಟ್ಟಿಮಾಡಿಕೊಡಿ. ಅ.31ರಂದು ಕೆಡಿಪಿ ಸಭೆ ಈ ವಿಚಾರಕ್ಕಾಗಿಯೇ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್, ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಅವರೂ ಇದ್ದರು.

ಯೋಜನಾ ಅನುದಾನಕ್ಕಿಂತ ವೇತನವೇ ಜಾಸ್ತಿ
ರೇಷ್ಮೆ ಇಲಾಖೆಯ ಮಾಹಿತಿ ನೀಡುವಾಗ ಎಷ್ಟು ಎಕರೆ ರೇಷ್ಮೆ ಇದೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. 290 ಹೆಕ್ಟೇರ್‌ ಎಂದು ಅಧಿಕಾರಿ ಮಾಹಿತಿ ನೀಡಿದರು. ವರ್ಷಕ್ಕೆ ಎಲ್ಲಾ ಯೋಜನೆಗಳಡಿ ಒಟ್ಟು ಎಷ್ಟು ಅನುದಾನ ನಿಮ್ಮ ಇಲಾಖೆಗೆ ಬರುತ್ತದೆ ಎಂದು ಮಾಹಿತಿ ಕೇಳಿದಾಗ ಅಂದಾಜು ₹ 1.5 ಕೋಟಿ ಎಂದು ಅಧಿಕಾರಿ ತಿಳಿಸಿದರು.

ಡಿಡಿ, ಎಡಿ, ತರಬೇತುದಾರರು, ಸಿಬ್ಬಂದಿ ಎಂದು ರೇಷ್ಮೆ ಇಲಾಖೆಗೆ ತಿಂಗಳಿಗೆ ಒಟ್ಟು ಬರುವ  ₹ 16 ಲಕ್ಷ ಎಂಬ ಮಾಹಿತಿ ಪಡೆದರು. ‘ಇಲಾಖೆಗೆ ಬರುವ ಅನುದಾನಗಳಿಗಿಂತ ನಿಮ್ಮ ವೇತನವೇ ಹೆಚ್ಚಾಯಿತಲ್ರಿ. ರೇಷ್ಮೆ ಬೆಳೆಯುವರ ಸಂಖ್ಯೆ ಹೆಚ್ಚು ಮಾಡಿ. ಈ ಇಲಾಖೆಯವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಇವರಿಗೆ ಕೆಲಸ ಕಡಿಮೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇತರ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ, ಸಂಸ್ಕೃತಿ ಇಲಾಖೆಗೆ ಪ್ರಭಾರವೂ ಇಲ್ಲ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಜವಾಬ್ದಾರಿಯನ್ನು ಚಿತ್ರದುರ್ಗದ ಆ ಇಲಾಖೆಯ ಸಹಾಯಕ ನಿರ್ದೇಶಕರಿಗೆ ನೀಡಲಾಗಿತ್ತು. ‘ನನ್ನಿಂದ ಆಗಲ್ಲ. ಬೇರೆ ಯಾರಿಗೆ ಬೇಕಾದರೂ ಜವಾಬ್ದಾರಿ ನೀಡಿ’ ಎಂದು ಅವರು ಪತ್ರ ಬರೆದಿದ್ದಾರೆ ಎಂದು ಡಿ.ಸಿ. ತಿಳಿಸಿದರು.

ಪ್ರತಿಕ್ರಿಯಿಸಿ (+)