ಬುಧವಾರ, ಜನವರಿ 22, 2020
24 °C
ಜೂನಿಯರ್‌ ರೋಡ್‌ ಸೇಫ್ಟಿ ಆಫೀಸರ್‌ಗಳಾಗಿ ರಸ್ತೆಗಿಳಿಯಲಿರುವ 1, 2ನೇ ತರಗತಿ ವಿದ್ಯಾರ್ಥಿಗಳು

ಸಂಚಾರ ಜಾಗೃತಿ ಮೂಡಿಸಲಿರುವ ಪುಟ್ಟ ಮಕ್ಕಳು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಸ್ತೆ ಸಂಚಾರದ ಬಗ್ಗೆ ಜಾಗೃತಿ ಮೂಡಿಸಲು ಈ ಬಾರಿ ಒಂದು, ಎರಡನೇ ತರಗತಿಯ ಮಕ್ಕಳೇ ಜೂನಿಯರ್‌ ರೋಡ್‌ ಸೇಫ್ಟಿ ಆಫೀಸರ್‌ಗಳಾಗಿ ರಸ್ತೆಗಿಳಿಯಲಿದ್ದಾರೆ. ಹೆಲ್ಮೆಟ್‌ ಹಾಕದ, ಸೀಟ್‌ ಬೆಲ್ಟ್‌ ಧರಿಸದ, ಸಂಚಾರ ನಿಯಮ ಮೀರಿದವರಿಗೆ ಕೈಮುಗಿದು, ಸ್ಟಿಕ್ಕರ್‌ ಅಂಟಿಸಿ ಜಾಗೃತಿ ಮೂಡಿಸಲಿದ್ದಾರೆ.

ಇಂಥ ಹಲವು ಹೊಸ ಪರಿಕಲ್ಪನೆಗಳು ಜ.11ರಿಂದ 17ರ ವರೆಗೆ ನಡೆಯುವ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಮೂಡಿ ಬರಲಿವೆ. ದಾವಣಗೆರೆ ದಕ್ಷಿಣ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಮಂಜುನಾಥ ಅರ್ಜುನ್‌ ಲಿಂಗಾರೆಡ್ಡಿ ಈ ಹೊಸ ಯೋಚನೆಗಳನ್ನು ಮಾಡಿದ್ದಾರೆ.

10 ಹುಡುಗರು ಮತ್ತು 10 ಹುಡುಗಿಯರು ಈ ಜಾಗೃತಿ ಮೂಡಿಸಲಿದ್ದಾರೆ. ಹೆಲ್ಮೆಟ್‌ ಧರಿಸದ ಸವಾರರಿರುವ ಬೈಕ್‌ಗಳಿಗೆ ‘ದಯವಿಟ್ಟು ಹೆಲ್ಮೆಟ್‌ ಧರಿಸಿ’ ಎಂದು ಸ್ಟಿಕ್ಕರ್‌ ಅಂಟಿಸಲಿದ್ದಾರೆ. ಸೀಟ್‌ಬೆಲ್ಟ್‌ ಹಾಕದ ಕಾರುಗಳಿಗೆ ‘ಸೀಟ್‌ಬೆಲ್ಟ್‌ ಧರಿಸಿ’ ಎಂದು ಸ್ಟಿಕ್ಕರ್ ಅಂಟಿಸಲಿದ್ದಾರೆ.

ಪೊಲೀಸ್‌ ನಾಟಕ: ‘ಯಮಲೋಕದಲ್ಲಿ ಯುವಜನರು’ ಎಂಬ ಅರ್ಧ ಗಂಟೆಯ ನಾಟಕವನ್ನು ಪೊಲೀಸರೇ ಪ್ರದರ್ಶಿಸಲಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದ ಕಥಾವಸ್ತು ಇಟ್ಟುಕೊಂಡು ಎಸ್‌ಐ ನಾಟಕ ನಿರ್ದೇಶಿಸಿದ್ದಾರೆ. ಗ್ಲಾಸ್‌ಹೌಸ್‌, ಜಯದೇವ ಸರ್ಕಲ್‌, ರಾಮ್‌ ಆ್ಯಂಡ್‌ ಕೋ ಸರ್ಕಲ್‌ ಸೇರಿ ಏಳು ದಿನ ಏಳು ಕಡೆ ಸಂಜೆ ಹೊತ್ತಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ಅಲ್ಲಿಯೇ 15 ನಿಮಿಷಗಳ ಜಾಗೃತಿ ವಿಡಿಯೊ ಕೂಡ ಪ್ರದರ್ಶನಗೊಳ್ಳಲಿದೆ.

ಕ್ಯಾಂಡಲ್‌ ಮಾರ್ಚ್‌: ಈಚೆಗೆ ಅಪಘಾತದಲ್ಲಿ ನಿಧನರಾದವರ ಫೋಟೊ ಹಾಕಿ ಕ್ಯಾಂಡಲ್‌ ಮಾರ್ಚ್‌ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಮುಂದೆ ಯಾರೂ ಈ ರೀತಿ ಅಪಘಾತದಲ್ಲಿ ಸಾಯಬೇಡಿ ಎಂದು ಸಂದೇಶ ನೀಡಲಾಗುವುದು ಎಂದು ಮಂಜುನಾಥ ಎ. ಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಾಗೃತಿ ಪ್ರದರ್ಶನ: ಸಂಚಾರ ಪೊಲೀಸ್‌ ಠಾಣೆ ಕಾರ್ಯವೈಖರಿ ತಿಳಿಸಲು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಭಾಂಗಣದಲ್ಲಿ ಜಾಗೃತಿ ವಸ್ತು ಪ್ರದರ್ಶನ ನಡೆಯಲಿದೆ. ದಾಖಲಾತಿ, ನಂಬರ್‌ ಪ್ಲೇಟ್‌, ಸಿಗ್ನಲ್ಸ್‌, ಬಾಡಿ ಕ್ಯಾಮೆರಾ, ರೋಡ್‌ ಲೈನ್ಸ್‌, ಲಯನ್‌ ಗಾಡಿ, ಇಂಟರ್‌ಸೆಪ್ಟರ್‌ ಗಾಡಿ, ಬ್ಲಾಕ್‌ ಬೆರಿ, ಎಫ್‌ಟಿವಿಆರ್‌, ವೀಲ್‌ ಲಾಕ್‌, ವಾಕಿಟಾಕಿ ಹೀಗೆ 22 ವಿಷಯಗಳ ಬಗ್ಗೆ 22 ಪೊಲೀಸರು ಮಾಹಿತಿ ನೀಡಲಿದ್ದಾರೆ. ಇದರ ಜತೆಗೆ 10 ನಿಮಿಷದ ಕಿರುಚಿತ್ರ ಪ್ರದರ್ಶನಗೊಳ್ಳಲಿದೆ.

ರಸ್ತೆ ಜಾಗೃತಿ ಮೂಡಿಸುವ ಬರಹ ಮತ್ತು ಚಿತ್ರಗಳಿರುವ 200ಕ್ಕೂ ಅಧಿಕ ಫ್ಲೆಕ್ಸ್‌ಗಳು ಪಿ.ಬಿ. ರಸ್ತೆ ಸಹಿತ ಪ್ರಮುಖ ರಸ್ತೆಗಳಲ್ಲಿ ರಾರಾಜಿಸಲಿವೆ. ಇವುಗಳ ಜತೆಗೆ ರಕ್ತದಾನ, ಆರೋಗ್ಯ ಶಿಬಿರ, ಮಹಿಳೆಯರ ಬೈಕ್‌ ರ‍್ಯಾಲಿ, ಸೈಕಲ್‌ ರ‍್ಯಾಲಿ, ವಿದ್ಯಾರ್ಥಿಗಳ ಜಾಥಾ, ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳೂ ಇರಲಿವೆ.

ರಸ್ತೆಯಲ್ಲಿ ಯಮ, ಚಿತ್ರಗುಪ್ತ!

ಸಪ್ತಾಹದ ಸಮಯದಲ್ಲಿ ಯಮ ಮತ್ತು ಚಿತ್ರಗುಪ್ತ ವೇಷಧಾರಿಗಳು ರಸ್ತೆಯಲ್ಲಿ ಅಡ್ಡಾಡಲಿದ್ದಾರೆ. ಹೆಲ್ಮೆಟ್‌ ಇಲ್ಲದವರು, ನಿಯಮ ಮೀರಿದವರನ್ನು ನಿಲ್ಲಿಸಿ ಕುಣಿಕೆ ಹಾಕಿ, ‘ಹೀಗೆ ಮಾಡಿದರೆ ಯಮಲೋಕಕ್ಕೆ ಕರೆದುಕೊಂಡು ಹೋಗುವೆ’ ಎಂದು ಎಚ್ಚರಿಸಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು