ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಂಗೀತ ಕುರ್ಚಿಯಾದ ಜಿ.ಪಂ. ಅಧ್ಯಕ್ಷ ಸ್ಥಾನ

5 ವರ್ಷಗಳಲ್ಲಿ 7 ಅಧ್ಯಕ್ಷರು, 7 ಪ್ರಭಾರ ಅಧ್ಯಕ್ಷರು ಕಾರ್ಯನಿರ್ವಹಣೆ
Last Updated 24 ಡಿಸೆಂಬರ್ 2020, 3:51 IST
ಅಕ್ಷರ ಗಾತ್ರ

ದಾವಣಗೆರೆ: ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯ ತ್ರಿಸ್ತರ ಪಂಚಾಯಿತಿ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯಿತಿ ಮಹತ್ವದ ಸ್ಥಾನ ಹೊಂದಿದೆ. ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನ ಎನ್ನುವುದು ಸಂಗೀತ ಕುರ್ಚಿಯಂತಾಗಿದ್ದು, ಮೊದಲ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದವರಿಗೆ ಕನಿಷ್ಠ ಒಂದು ವರ್ಷ ಪೂರೈಸುವ ಅವಕಾಶವೂ ಸಿಕ್ಕಿಲ್ಲ. ಈ ವರೆಗೆ ಆರು ಮಂದಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರೆ, ಬುಧವಾರ ಏಳನೇ ಅಧ್ಯಕ್ಷರ ಆಯ್ಕೆ ನಡೆದಿದೆ. ಅಲ್ಲದೇ ಏಳು ಮಂದಿ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷತೆಯ ಮೀಸಲಾತಿಯನ್ನು ಎರಡೂವರೆ ವರ್ಷದ ಬದಲು ಐದು ವರ್ಷಕ್ಕೆ ಒಂದೇ ಇರಬೇಕು ಎಂದು 2016ರಲ್ಲಿ ಸರ್ಕಾರ ನಿರ್ಧರಿಸಿತ್ತು. ಆಗ ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿತ್ತು. ಮೊದಲ ಅಧ್ಯಕ್ಷರಾಗಿ ಹಿರೇಮಠ ಕ್ಷೇತ್ರದ ಉಮಾ ಎಂ.ಪಿ. ರಮೇಶ್‌ ಅಧ್ಯಕ್ಷರಾಗಿ 2016ರ ಮೇ 3ರಂದು ಆಯ್ಕೆಯಾಗಿದ್ದರು. ಅವರು ಒಂದು ವರ್ಷ ಐದು ತಿಂಗಳು ಕಾರ್ಯನಿರ್ವಹಿಸಿದರು. ಹೊನ್ನೆಬಾಗಿ ಕ್ಷೇತ್ರದ ಸದಸ್ಯೆ ಮಂಜುಳಾ ಟಿ.ವಿ. ರಾಜು ಅವರು ಏಳು ತಿಂಗಳ ಕಾಲ ಅಧ್ಯಕ್ಷರಾದರು. ಅವರ ನಂತರ ತೆಲಗಿ ಕ್ಷೇತ್ರದ ಜಯಶೀಲ ಕೆ. ಆರ್‌. 2018ರ ಆಗಸ್ಟ್‌ 10ಕ್ಕೆ ಅಧ್ಯಕ್ಷರಾದರು. ಅಷ್ಟು ಹೊತ್ತಿಗೆ ಹರಪನಹಳ್ಳಿ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಯಿಂದ ಬೇರ್ಪಡಿಸಿ ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು. ಹಾಗಾಗಿ ಅವರಿಗೆ ಐದು ತಿಂಗಳ ಅಧಿಕಾರವೂ ಪೂರ್ತಿ ಮಾಡಲಾಗಲಿಲ್ಲ.

ಬಾಡ ಕ್ಷೇತ್ರದ ಸದಸ್ಯೆ ಶೈಲಜಾ ಬಸವರಾಜ ಅವರು ನಾಲ್ಕನೇ ಅಧ್ಯಕ್ಷರಾದರು. ಸುಮಾರು 9 ತಿಂಗಳ ಕಾಲ ಕಾರ್ಯನಿರ್ವಹಿಸಿದರು. ಅವರ ಬಳಿಕ ಹೊದಿಗೆರೆ ಕ್ಷೇತ್ರದ ಯಶೋದಮ್ಮ ಮರುಳಪ್ಪ ಅಧ್ಯಕ್ಷರಾಗಿ ಸುಮಾರು ಆರು ತಿಂಗಳ ಕಾಲ ಅಧಿಕಾರ ಚಲಾಯಿಸಿದರು. ಅವರ ಬಳಿಕ ಕುಂದೂರು ಕ್ಷೇತ್ರದ ದೀಪಾ ಜಗದೀಶ್‌ ಅಧ್ಯಕ್ಷರಾದರು. ಅವರು ನಾಲ್ಕು ತಿಂಗಳು ಅಧಿಕಾರ ಪೂರೈಸಿ ಅಕ್ಟೋಬರ್‌ 11ರ ಒಳಗೆ ರಾಜೀನಾಮೆ ನೀಡಲು ತಿಳಿಸಲಾಗಿತ್ತು. ಕೊರೊನಾ ಕಾರಣದಿಂದ ಅವರಿಗೆ ಎರಡು ತಿಂಗಳು ಹೆಚ್ಚುವರಿಯಾಗಿ ಸಿಕ್ಕಿತು. ಇದೀಗ ಕೊನೇ ಅಧ್ಯಕ್ಷರಾಗಿ ದೊಣೆಹಳ್ಳಿ ಕ್ಷೇತ್ರದ ಕೆ.ವಿ. ಶಾಂತಕುಮಾರಿ ಆಯ್ಕೆಯಾಗಿ ದ್ದಾರೆ. ಅವರ ಅವಧಿ 2021ರ ಮೇ 2ಕ್ಕೆ ಕೊನೆ ಗೊಳ್ಳಲಿದೆ. ಅಂದರೆ ನಾಲ್ಕು ತಿಂಗಳಷ್ಟೇ ಅಧ್ಯಕ್ಷರಾಗಿ ಇರುತ್ತಾರೆ.

ಈ ಮಧ್ಯೆ ಉಪಾಧ್ಯಕ್ಷರಾಗಿದ್ದ ಗೀತಾ ಗಂಗಾ ನಾಯ್ಕ್ ಒಂದು ಬಾರಿ, ಸವಿತಾ ಜೆ. ಕಲ್ಲೇಶಪ್ಪ ಎರಡು ಬಾರಿ, ಸಿ. ಸುರೇಂದ್ರ ನಾಯ್ಕ್‌, ಎನ್‌. ಲೋಕೇಶ್ವರ್‌ ತಲಾ ಒಂದು ಬಾರಿ, ಸಾಕಮ್ಮ ಗಂಗಾಧರ ನಾಯ್ಕ್‌ ಎರಡು ಬಾರಿ ಪ್ರಭಾರ ಅಧ್ಯಕ್ಷರಾಗಿದ್ದರು.

‘ಏಳೆಂಟು ತಿಂಗಳಿಗೊಮ್ಮೆ ಅಧ್ಯಕ್ಷರು ಬದಲಾಗುತ್ತಾ ಹೋದರೆ ಬಿಗಿ ಆಡಳಿತ ಕೊಡಲು ಆಗುವುದಿಲ್ಲ. ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾ ಪಂಚಾಯಿತಿಗೆ ಬಂದ ಅನುದಾನ ಹೇಗೆ ಸದುಪಯೋಗವಾಗಿದೆ. ಎಲ್ಲಿ ದುರುಪಯೋಗವಾಗಿದೆ ಎಂದು ಜಿಲ್ಲೆಯನ್ನು ಅಡ್ಡಾಡಿ ತಿಳಿಯಲು ಆಗುವುದಿಲ್ಲ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಲು ಸಾಧ್ಯವಿಲ್ಲ. ಅಧ್ಯಕ್ಷರಾಗಿ ಆಯ್ಕೆಯಾಗುವಾಗ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿರುತ್ತೇವೆ. ಅವುಗಳನ್ನು ಅನುಷ್ಠಾನಕ್ಕೆ ತರಲು ಆಗುವುದಿಲ್ಲ. ಎಲ್ಲರನ್ನು ಸಂತೃಪ್ತಿಪಡಿಸುವ ಹೊಂದಾಣಿಕೆ ರಾಜಕೀಯ ಪಕ್ಷಗಳಿಗೆ ಅನಿವಾರ್ಯ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಲ್ಲ. ಏಳೆಂಟು ತಿಂಗಳಿಗೊಬ್ಬರು ಅಧ್ಯಕ್ಷರಾದರೆ ಅಧಿಕಾರಿ ವರ್ಗಕ್ಕೆ ಮಾತ್ರ ಖುಷಿ ಯಾಗುತ್ತದೆ. ಯಾಕೆಂದರೆ ಅವರ ಮೇಲೆ ನಿಯಂತ್ರಣ ಸಾಧಿಸುವವರು ಇರುವುದಿಲ್ಲ’ ಎಂದು ಮಾಜಿ ಅಧ್ಯಕ್ಷ ರೊಬ್ಬರು ಬೇಸರ ವ್ಯಕ್ತಪಡಿಸಿದರು.

ಐವರು ಉಪಾಧ್ಯಕ್ಷರು
ಉಪಾಧ್ಯಕ್ಷರಾಗಿ ಐದು ವರ್ಷದಲ್ಲಿ ಐವರು ಆಯ್ಕೆಯಾಗಿದ್ದಾರೆ. ಡಿ. ಸಿದ್ಧಪ್ಪ, ಗೀತಾ ಗಂಗಾನಾಯ್ಕ್, ರಶ್ಮೀ ರಾಜಪ್ಪ, ಸಿ. ಸುರೇಂದ್ರ ನಾಯ್ಕ್‌ ಸಾಕಮ್ಮ ಗಂಗಾಧರ ನಾಯ್ಕ್ ಉಪಾಧ್ಯಕ್ಷರಾದವರು. ರಶ್ಮೀ ರಾಜಪ್ಪ ಅವರು ಹರಪನಹಳ್ಳಿ ತಾಲ್ಲೂಕು ಬಳ್ಳಾರಿಗೆ ಸೇರಿದ್ದರಿಂದ ಮೂರೇ ತಿಂಗಳಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟು ಹೋಗಬೇಕಾಯಿತು. ಉಳಿದವರಿಗೆ ಒಂದು ವರ್ಷಕ್ಕಿಂತ ಅಧಿಕ ಸಮಯ ಉಪಾಧ್ಯಕ್ಷರಾಗಿ ಇರಲು ಅವಕಾಶ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT