ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆಯಾಗುತ್ತಿರುವ ಪುಸ್ತಕ ಪ್ರೀತಿ: ಡಾ.ನಾ. ಡಿಸೋಜ

Last Updated 21 ಸೆಪ್ಟೆಂಬರ್ 2021, 4:37 IST
ಅಕ್ಷರ ಗಾತ್ರ

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ, ಅಧ್ಯಯನ ಮಾಡುವ ಮತ್ತು ಪ್ರೀತಿಯಿಂದ ಎದೆಗೊತ್ತಿಕೊಳ್ಳುವ ಮನೋಭಾವ ಕಡಿಮೆಯಾಗುತ್ತಿದೆ ಎಂದು ಲೇಖಕ ಡಾ. ನಾ. ಡಿಸೋಜ ವಿಷಾದ ವ್ಯಕ್ತಪಡಿಸಿದರು.

ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕಿ ಡಿ.ಸಿ. ಚಂಪಾ ಅವರ ‘ಪ್ರೀತಿ ಮೇಡಂ’, ‘ಮೋಡದೊಳಗಿನ ಮಿಂಚು’, ‘ಕೀರ್ತಿಯ ಬೆನ್ನೇರಿ’, ‘ಪ್ರತೀಕ್ಷ’ ಎಂಬ ನಾಲ್ಕು ಕಾದಂಬರಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುಸ್ತಕ ಪ್ರಕಟಣೆ ಕಷ್ಟದ ಉದ್ಯಮ. ಕನ್ನಡ ಸಾಹಿತ್ಯಕ್ಕೆ ಒಳ್ಳೆಯ ದಿನಗಳ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಂಪಾ ಅವರ ನಾಲ್ಕು ಕಾದಂಬರಿ ಒಟ್ಟಿಗೆ ಬಿಡುಗಡೆಗೊಂಡಿರುವುದು ಸಾಹಿತ್ಯ ಕ್ಷೇತ್ರದಲ್ಲಿಯೇ ಬಹುದೊಡ್ದ ಘಟನೆ. ಕಾದಂಬರಿ ಎನ್ನುವ ಶಬ್ದ ನಮ್ಮದಲ್ಲ. ಅದು ನಾವೆಲ್ ಎನ್ನುವ ಪರಾಕೀಯರಿಂದ ಬಂದಿದ್ದು. ಆ ಶಬ್ದವನ್ನು ಪರದೇಶದವರಿಂದ ಸರಬರಾಜು ಮಾಡಿಕೊಳ್ಳಲಾಗಿದೆ. ತೆಲುಗಿನವರು ನಾವೆಲ್ ಅನ್ನು ನವಲಾ ಎಂದು, ಬಂಗಾಳಿಯಲ್ಲಿ ದೀರ್ಘ ಕಥನಾ, ಸಂಸ್ಕೃತದಲ್ಲಿ ಕಥಾ ವ್ಯಾಖ್ಯಾನ ಎಂದು ಕರೆಯಲಾಗುತ್ತದೆ. 140 ವರ್ಷಗಳ ಇತಿಹಾಸವಿರುವ ಕಾದಂಬರಿ ಇವತ್ತು ತುಂಬಾ ಜನಪ್ರಿಯವಾಗಿದೆ ಎಂದು ವಿಶ್ಲೇಷಿಸಿದರು.

‘ಕೇಸರಿ ವಿಲಾಸ' ಎಂಬ ಮೊಟ್ಟ ಮೊದಲ ಕಾದಂಬರಿ 1895 ರಲ್ಲಿ ಬಿಡುಗಡೆಯಾಯಿತು. 1897 ರಲ್ಲಿ ಚೋರ ಗ್ರಹಣ ತಂತ್ರ ಪತ್ತೇದಾರಿ ಕಾದಂಬರಿ ಬಿಡುಗಡೆಗೊಂಡಿತು. ಒಳ್ಳೆಯ ಉದ್ದೇಶ ಹಾಗೂ ಆದರ್ಶಗಳನ್ನಿಟ್ಟುಕೊಂಡು ಈ ಕಾದಂಬರಿಗಳು ಬಿಡುಗಡೆಯಾದವು. 1915 ರಲ್ಲಿ ಎಂ.ಎಸ್. ಪುಟ್ಟಣ್ಣ ಅವರ `ಮಾಡಿದ್ದುಣ್ಣೋ ಮಹಾರಾಯ' ಎಂಬ ಕನ್ನಡ ಕಾದಂಬರಿ ಪ್ರಕಟಗೊಂಡಿತು. ಮೊದಲ ಬಾರಿಗೆ ಗ್ರಾಮೀಣ ಜನರ ಜೀವನವನ್ನು ಚಿತ್ರೀಕರಿಸಿದ ಕಾದಂಬರಿಯಾಗಿತ್ತು. ಗ್ರಾಮೀಣ ಬದುಕಿಗೆ ಮೌಲ್ಯ ಸಿಗುವಂತೆ ಮಾಡಿತ್ತು ಎಂದು ಹೇಳಿದರು.

ಚಂಪಾ ಅವರ ಪ್ರತಿಯೊಂದು ಕಾದಂಬರಿ ಮನುಷ್ಯನ ಸಂಬಂಧಗಳನ್ನು ವಿವರಿಸುವುದರಿಂದ ಅವು ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತವೆ ಎಂದರು.

ಕಾದಂಬರಿಯ ಕರ್ತೃ, ಶಿಕ್ಷಕಿ ಡಿ.ಸಿ. ಚಂಪಾ ಮಾತನಾಡಿದರು. ಪತ್ರಕರ್ತ ಬಿ.ಎನ್. ಮಲ್ಲೇಶ್, ವಾಗ್ಮಿ ಜಗನ್ನಾಥ್ ನಾಡಿಗೇರ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಪ್ರಕಾಶಕ ರಾಮಕೃಷ್ಣ ನೇಕಾರ, ಸಿದ್ಧಗಂಗಾ ಪಿಯು ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಸಿದ್ಧಗಂಗಾ ಸಂಸ್ಥೆ ಸಂಸ್ಥಾಪಕರಾದ ಜಸ್ಟಿನ್ ಡಿಸೋಜ, ಕನ್ನಡ ಅಧ್ಯಾಪಕಿ ಡಾ. ಶೋಭಾ ಚಪ್ಪರದಳ್ಳಿ ಮಠ, ಡಿ.ಎಸ್. ಪ್ರಶಾಂತ್, ಹೇಮಂತ್, ಶಿಕ್ಷಕ ನಾಗರಾಜ್ ಅವರೂ ಇದ್ದರು.

ನಾಗರಾಜ್ ಪ್ರಾರ್ಥಿಸಿದರು. ರೇಖಾ ರಾಣಿ ನಿರೂಪಿಸಿದರು. ರೆವರೆಂಡ್ ಥಾಮಸ್ ಚಿಂದವಾಳ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT