ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರು’ ಉತ್ತಮ ಸಂದೇಶ ಸಾರುವ ಚಿತ್ರ

ಮಕ್ಕಳ ಚಲನಚಿತ್ರ ವೀಕ್ಷಿಸಿದ ಬಳಿಕ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯೆ
Last Updated 11 ಏಪ್ರಿಲ್ 2021, 7:20 IST
ಅಕ್ಷರ ಗಾತ್ರ

ದಾವಣಗೆರೆ: ಕನಸಿದ್ದರೆ, ಕನಸನ್ನು ನನಸು ಮಾಡಬೇಕು ಎಂಬ ಛಲ ಇದ್ದರೆ ಚಿಂದಿ ಆಯುವವ ಕೂಡ ಜಿಲ್ಲಾಧಿಕಾರಿ ಆಗಬಹುದು ಎಂಬ ಉತ್ತಮ ಸಂದೇಶವನ್ನು ‘ಪಾರು’ ಚಿತ್ರ ಸಾರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಇಲ್ಲಿನ ಪದ್ಮಾಂಜಲಿ ಚಿತ್ರಮಂದಿರದಲ್ಲಿ ಶನಿವಾರ ‘ಪಾರು’ ಮಕ್ಕಳ ಚಿತ್ರ ವೀಕ್ಷಿಸಿದ ಬಳಿಕ ಸಂವಾದದಲ್ಲಿ ಅವರು ಮಾತನಾಡಿದರು.

‘ಐದು ವರ್ಷಗಳ ಬಳಿಕ ಚಿತ್ರಮಂದಿರದೊಳಗೆ ಬಂದು ಸಿನಿಮಾ ನೋಡಿದೆ. ನಾನು ಕೂಡ ಇದೇ ರೀತಿ ಕಷ್ಟಪಟ್ಟು ಮೇಲೆ ಬಂದವನು. ಕನಸು ಕಾಣುವುದಕ್ಕೆ ಯಾವುದೇ ಮೀಸಲಾತಿ ಇಲ್ಲ. ರೊಕ್ಕ ಕೊಡಬೇಕಿಲ್ಲ. ಮಕ್ಕಳಲ್ಲಿ ಕನಸು ಬಿತ್ತುವ ಕಾರ್ಯ ಮಾಡಬೇಕು’ ಎಂದು ತಿಳಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಕನಸು ಬಿತ್ತುವ, ರಾಷ್ಟ್ರ ಕಟ್ಟುವ ಕೆಲಸವನ್ನು ಸರ್ಕಾರಿ ಶಾಲೆಗಳಲ್ಲಿ ನಾವು ಮಾಡುತ್ತಿದ್ದೇವೆ. ಈ ಚಿತ್ರ ಕೂಡ ಅಂಥದ್ದೆ ಕೆಲಸ ಮಾಡಿದೆ. ಮಕ್ಕಳು ಬಹಳ ಅದ್ಭುತವಾಗಿ ನಟನೆ ಮಾಡಿದ್ದಾರೆ. ಏನಾದರೂ ಸಾಧನೆ ಮಾಡಬೇಕು ಅನ್ನಿಸಿದರೆ ಈ ಸಮಾಜ ಒಳ್ಳೆಯದಿದೆ. ನಿಮಗೆ ಯಾರಾದರೂ ಸಹಾಯ ಮಾಡೇ ಮಾಡುತ್ತಾರೆ’ ಎಂದು ಹುರಿದುಂಬಿಸಿದರು.

ಶಾಸಕ ಪ್ರೊ. ಎನ್‌. ಲಿಂಗಣ್ಣ, ‘ಸಮಾಜದಲ್ಲಿ ಬದಲಾವಣೆಯನ್ನು ತರುವ ಇಂಥ ಚಿತ್ರಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು’ ಎಂದು ಆಗ್ರಹಿಸಿದರು. ‘ನಾನು ಬಾಲಕಾರ್ಮಿಕನಾಗಿದ್ದ ದಿನಗಳ ನೋವನ್ನು ಈ ಚಿತ್ರ ನೆನಪಿಸಿತು’ ಎಂದು ರವಿ ನಾರಾಯಣ ತಿಳಿಸಿದರು.

ಲಾಂಗು, ಮಚ್ಚುಗಳಿಲ್ಲದ, ಈ ನೆಲದ ಭಾಷೆಯನ್ನು ಬಳಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಗಳಲ್ಲಿ ತೋರಿಸಬೇಕು ಎಂದು ಪತ್ರಕರ್ತ ಬಿ.ಎನ್‌. ಮಲ್ಲೇಶ್‌, ಅನ್ನ ತಿನ್ನುವ ಎಲ್ಲರೂ ನೋಡಬೇಕು ಎಂದು ಉಪನ್ಯಾಸಕ ದಾದಾಪೀರ್‌ ನವಿಲೇಹಾಳ್‌ ಸಲಹೆ ನೀಡಿದರು.

ಪಾರು ಪಾತ್ರ ಮಾಡಿದ ಹುಡುಗಿಯ ಶಿಕ್ಷಣದ ವೆಚ್ಚವನ್ನು ಆಕೆ ಕಲಿಯುತ್ತಿರುವ ಶಾಲೆಯವರೇ ಭರಿಸುವುದಾಗಿ ತಿಳಿಸಿದ್ದಾರೆ ಎಂದು ಉದ್ಯಮಿ ವಾಸುದೇವ ರಾಯ್ಕರ್‌ ಮಾಹಿತಿ ನೀಡಿದರು. ಈ ಚಿತ್ರದಲ್ಲಿ ಅಭಿನಯಿಸಿದ ಮಕ್ಕಳ ಎಸ್ಸೆಸ್ಸೆಲ್ಸಿ ವರೆಗಿನ ವೆಚ್ಚವನ್ನು ನಮ್ಮ ವೇದಿಕೆ ಭರಿಸಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ರಾಮೇಗೌಡ ಭರವಸೆ ನೀಡಿದರು.

ಉಪನ್ಯಾಸಕ ಡಾ. ಎಚ್‌. ವಿಶ್ವನಾಥ್‌ ₹ 10 ಸಾವಿರವನ್ನು ಈ ಚಿತ್ರದ ನಿರ್ದೇಶಕ ಹನುಮಂತ್‌ ಪೂಜಾರ್‌ ಅವರಿಗೆ ಹಸ್ತಾಂತರಿಸಿದರು. ರಂಗಕರ್ಮಿ ಸಿದ್ಧರಾಜು ಕಾರ್ಯಕ್ರಮ ಸಂಯೋಜಿಸಿದ್ದರು. ಬಾಲಕೃಷ್ಣ, ಆನಂದ ಋಗ್ವೇದಿ, ಸುಕನ್ಯಾ ತ್ಯಾವಣಿ, ಚಿದಾನಂದ, ವಿವಿಧ ಸಂಘಟನೆಗಳ ಸದಸ್ಯರು, ಚಿತ್ರದ ಕಲಾವಿದರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT