ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಡಾಗಳ ಅಭಿವೃದ್ಧಿಗಾಗಿ ₹ 100 ಕೋಟಿ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್‌ ಜಯಂತಿಯಲ್ಲಿ
Last Updated 14 ಫೆಬ್ರುವರಿ 2020, 17:27 IST
ಅಕ್ಷರ ಗಾತ್ರ

ಸೂರಗೊಂಡನಕೊಪ್ಪ (ನ್ಯಾಮತಿ): ಲಂಬಾಣಿ ತಾಂಡಾಗಳ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‌ನಲ್ಲಿ ₹ 100 ಕೋಟಿ ಅನುದಾನ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ಸೂರಗೊಂಡನಕೊಪ್ಪದ ಭಾಯಾಗಡ್‌ನಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್‌ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಂಜಾರ ಕುಲಗುರು ಸಂತ ಸೇವಾಲಾಲ್‌ ಅವರ 281ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಂಬಾಣಿ ಸಮುದಾಯದವರು ವಲಸೆ ಹೋಗುವುದನ್ನು ತಪ್ಪಿಸಲು ತಾಂಡಾಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಶೇಷ ಪ್ಯಾಕೇಜ್‌ ಘೋಷಿಸಲಾಗುವುದು ಎಂದೂ ತಿಳಿಸಿದರು.

‘ಮುಂದಿನ ಎರಡು ವರ್ಷಗಳಲ್ಲಿ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿಯೇ ತೀರುತ್ತೇನೆ’ ಎಂದು ಭರವಸೆ ನೀಡಿದರು.

ಲಂಬಾಣಿ ಕಲೆ, ಸಂಸ್ಕೃತಿ ಹಾಗೂ ಭಾಷೆಯನ್ನು ಅಭಿವೃದ್ಧಿಗೊಳಿಸಲು ಲಂಬಾಣಿ ಕಲೆ ಮತ್ತು ಭಾಷಾ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಂದೆ ಪ್ರಸ್ತಾವ ಇದೆ ಎಂದು ತಿಳಿಸಿದರು.

ಕೊಪ್ಪಳದ ಬಹದ್ದೂರ್‌ ಬಂಡೆಯಲ್ಲಿ ಲಂಬಾಣಿ ಉಡುಪುಗಳ ಬೃಹತ್‌ ಮಾರಾಟ ಮಳಿಗೆ ತೆರೆಯಲು ಅಗತ್ಯ ನೆರವು ನೀಡಲಾಗುವುದು ಎಂದೂ ಭರವಸೆ ನೀಡಿದರು.

ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ‘₹ 1,400 ಕೋಟಿ ವೆಚ್ಚದಲ್ಲಿ ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ನಡುವೆ ರೈಲು ಮಾರ್ಗ ಮಂಜೂರಾಗಿದ್ದು, ಶೀಘ್ರದಲ್ಲೇ ಸರ್ವೆ ಕಾರ್ಯ ಆರಂಭಿಸಲಾಗುವುದು. ಈ ನೂತನ ರೈಲು ಮಾರ್ಗವು ಸೂರಗೊಂಡಗೊಪ್ಪವನ್ನು ಹಾಯ್ದು ಹೋಗುವಂತೆ ಮಾಡಬೇಕು ಹಾಗೂ ಇಲ್ಲಿ ರೈಲು ನಿಲ್ದಾಣ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ನಾನು ಹಾಗೂ ದಾವಣಗೆರೆ ಸಂಸದ ಜಿ.ಎ. ಸಿದ್ದೇಶ್ವರ ಅವರು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ದೆಹಲಿಯಲ್ಲಿ ಫಾಲೋಅಪ್‌ ಮಾಡುತ್ತೇವೆ’ ಎಂದು ಹೇಳಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಬಂಜಾರ ಸಮುದಾಯದ ಏಳ್ಗೆಗಾಗಿ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತೇವೆ’ ಎಂದು ತಿಳಿಸಿದರು.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌ ಸಮಾಜದ ಬೇಡಿಕೆಗಳನ್ನು ಮುಂದಿಟ್ಟರು.

ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಅಶೋಕ ನಾಯ್ಕ, ಮಾಡಾಳ್‌ ವಿರೂಪಾಕ್ಷಪ್ಪ, ವಿಧಾನ ಪರಿಷತ್‌ ಸದಸ್ಯ ರುದ್ರೇಗೌಡ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸವಿತಾಬಾಯಿ ಅವರೂ ಇದ್ದರು.

ದೇಶದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸೇವಾಲಾಲ್‌ ಭಕ್ತರು ಕಾರ್ಯಕ್ರಮಕ್ಕೆ ಬಂದಿದ್ದರು.

ಪ್ರಭು ಚವ್ಹಾಣ್‌ ಮಾತಿಗೆ ಅಸಮಾಧಾನ

ಸಚಿವ ಪ್ರಭು ಚವ್ಹಾಣ್‌ ಅವರು ತಮ್ಮ ಭಾಷಣದಲ್ಲಿ ಬಂಜಾರ ಸಮುದಾಯಕ್ಕೆ ಯಡಿಯೂರಪ್ಪ ಅವರು ನೀಡಿದ ಹಲವು ಕೊಡುಗೆಗಳನ್ನು ಉಲ್ಲೇಖಿಸಿ ‘ರಾಜಾ ಹುಲಿ’ ಎಂದು ಬಣ್ಣಿಸಿದರು. ವೇದಿಕೆಯಲ್ಲಿ ಪಿ.ಟಿ. ಪರಮೇಶ್ವರ ನಾಯ್ಕ ಹಾಗೂ ಕೆಲ ಪದಾಧಿಕಾರಿಗಳು, ಸಿದ್ದರಾಮಯ್ಯ ಅವಧಿಯಲ್ಲಿ ನೀಡಿದ ಕೊಡುಗೆಗಳನ್ನೂ ಹೇಳುವಂತೆ ಆಕ್ಷೇಪಿಸಿದರು.

ಹೆಲಿಕಾಪ್ಟರ್‌ ಟೇಕ್‌ಆಫ್‌ಗೆ ವಿಳಂಬವಾಗುತ್ತಿರುವುದರಿಂದ ಯಡಿಯೂರಪ್ಪ ಅವರೂ ಮಾತು ಮುಗಿಸುವಂತೆ ಸಚಿವರಿಗೆ ತಾಕೀತು ಮಾಡಿದರು.

ಪರಮೇಶ್ವರ ನಾಯ್ಕ ಅವರು ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ಬಂಜಾರ ಸಮುದಾಯಕ್ಕೆ ನೀಡಿದ ಕೊಡುಗೆಗಳ ವಿವರ ನೀಡಿದರು. ಬಂಜಾರ ಸಮುದಾಯದ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವಿನ ಭಿನ್ನಾಭಿಪ್ರಾಯಕ್ಕೆ ವೇದಿಕೆ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT