ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಅಭಿವೃದ್ಧಿಗೆ ₹180 ಕೋಟಿ ಯೋಜನೆ

ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ತಾಂಡಾ ಅಭಿವೃದ್ಧಿ ನಿಗಮ ನಿರ್ಧಾರ
Last Updated 12 ಫೆಬ್ರುವರಿ 2020, 14:20 IST
ಅಕ್ಷರ ಗಾತ್ರ

ದಾವಣಗೆರೆ: ಬಂಜಾರರ ಸಮಗ್ರ ಅಭಿವೃದ್ಧಿಗೆ ₹ 180 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಗೊಂಡಿದ್ದು, ಅದನ್ನು ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗುವುದು ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ತಿಳಿಸಿದರು.

ಬಂಜಾರರ ಪ್ರಮುಖ ಸ್ಥಳಗಳಾದ ಸೂರಗೊಂಡನಕೊಪ್ಪ, ಬಹದ್ದೂರ್‌ಬಂಡಿ, ಲಾಲ್‌ಧರ್ ಅಭಿವೃದ್ಧಿ ಜೊತೆಗೆ ಕಂದಾಯ ಗ್ರಾಮಗಳ ನಿರ್ಮಾಣ ಮತ್ತು ಬಂಜಾರರು ವಲಸೆ ಹೋಗುವುದನ್ನು ತಡೆಯಲು ನಿಗಮದಿಂದ ಯೋಜನೆ ತಯಾರಿಸಲಾಗಿದೆ. ಕೌಶಲಾಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿಸಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಲಂಬಾಣಿ ಉಡುಪುಗಳನ್ನು ಮಾರಾಟ ಮಾಡಲು ಮಳಿಗೆ ತೆರೆಯುವ ಯೋಜನೆ ಇದೆ. ಗ್ರಾಮೀಣ ಭಾಗಗಳಲ್ಲಿ ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಕಲ್ಪಿಸುವ ಮೂಲಕ ವಲಸೆ ಹೋಗುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ. ಅಲ್ಲದೇ ಆ ಉಡುಪುಗಳಿಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಉದ್ದೇಶವಿದೆ’ ಎಂದು ಹೇಳಿದರು.

‘ರಾಜ್ಯದ 3300 ತಾಂಡಾಗಳಲ್ಲಿ 2 ಸಾವಿರಕ್ಕೂ ಹೆಚ್ಚು ತಾಂಡಾಗಳು ಕಂದಾಯ ಗ್ರಾಮಗಳಾಗಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಅನಧಿಕೃತ ಜನವಸತಿ ಸ್ಥಳಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಯಡಿಯೂರಪ್ಪ ಸರ್ಕಾರ ತೀರ್ಮಾನ ಕೈಗೊಂಡಿದೆ. ಭೂಸುಧಾರಣಾ ಹಾಗೂ ಭೂಕಂದಾಯ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದ್ದು, ರಾಷ್ಟ್ರಪತಿ ಅಂಗೀಕಾರವಾಗಿದೆ. ಇದರಿಂದ ಕಾನೂನು ತೊಡಕು ನಿವಾರಣೆಯಾಗಿದೆ’ ಎಂದರು.

‘ಪಟ್ಟಣಗಳಿಂದ ದೂರವಿರುವ ತಾಂಡಾಗಳು ಮೂಲಸೌಲಭ್ಯಗಳಿಂದ ವಂಚಿತವಾಗಿವೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಏಕಕಾಲದಲ್ಲಿ ಪ್ರತಿ ತಾಂಡಾಗಳಿಂದ ತಲುಪಿಸುವ ಉದ್ದೇಶದಿಂದ ‘ಜಾಗೊ ಬಂಜಾರ’ ನಿಗಮ ವಾರ್ತೆ ಆರಂಭಿಸಲಾಗುತ್ತಿದೆ. ಅದನ್ನು ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ’ ಎಂದು ಹೇಳಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ‘ಬಂಜಾರರ ಅಭಿವೃದ್ಧಿಗೆ 100 ಎಕೆರೆ ಭೂಮಿಯನ್ನು ಕಾಯ್ದಿರಿಸುತ್ತೇವೆ ಎಂದು ಹೇಳಿದ್ದು, ಅದನ್ನು ಅನುಷ್ಠಾನಗೊಳಿಸುವಂತೆ ಮನವಿ ಮಾಡಲಾಗುವುದು. ಸೂರಗೊಂಡನಕೊಪ್ಪದಲ್ಲಿ ಗುಹೆಯೊಳಗೆ ಸೇವಾಲಾಲ್‌ ಜೀವನ ಚರಿತ್ರೆ ಸಿಗುವಂತೆ ಮಾಡಬೇಕು ಹಾಗೂ ಔಷಧವನ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT