ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಜನತಾ ಕಫ್ರ್ಯೂಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ

Last Updated 20 ಮಾರ್ಚ್ 2020, 15:27 IST
ಅಕ್ಷರ ಗಾತ್ರ

ವಿಜಯಪುರ: ‘ಕೊರೊನಾ ವಿರುದ್ಧ ಸಮರ ಸಾರಲು ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕಫ್ರ್ಯೂಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾ.22 ರಂದು ಸ್ವಯಂ ಜನತಾ ಕಫ್ರ್ಯೂ ಹೇರಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಕಾರ್ಯಾಲಯದ ವಿಡಿಯೊ ಸಂವಾದ ಸಭಾಂಗಣದಲ್ಲಿ ಜಿಲ್ಲೆಯ ತಹಶೀಲ್ದಾರ್‌ರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೋಂದಿಗೆ ಶುಕ್ರವಾರ ನೇರ ಸಂವಾದ ನಡೆಸಿದ ಅವರು ಈ ವಿಷಯ ತಿಳಿಸಿದರು.

‘ಮಾ.22 ರಂದು ಜನತಾ ಕಫ್ರ್ಯೂ ಹೇರಿಕೊಳ್ಳುವ ಹಿನ್ನೆಲೆಯಲ್ಲಿ ಎಲ್ಲಾ ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಅಂದು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕಫ್ರ್ಯೂ ಹೇರಿಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಮನವಿ ಮಾಡಿದರು.

‘ಸ್ವಚ್ಛತೆ ಇರದಿರುವುದರಿಂದ ಯಾವುದೇ ಸಮಸ್ಯೆ ಕಂಡುಬಂದರೆ ಅದಕ್ಕೆ ಮುಖ್ಯಾಧಿಕಾರಿ ಹೊಣೆಗಾರರಾಗುತ್ತಾರೆ. ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ಯಾರಾದರೂ ಕರ್ತವ್ಯಲೋಪವೆಸಗಿದರೆ ಅಂತಹವರಿಗೆ ಶಿಕ್ಷೆ ಜರುಗಿಸಲಾಗುವುದು. ಅದರಲ್ಲೂ ಸಿಂದಗಿ, ಚಡಚಣ ಮತ್ತು ತಾಳಿಕೋಟೆ ಅಧಿಕಾರಿಗಳು ಸಾಧ್ಯವಾದಷ್ಟು ಬಸ್ ನಿಲ್ದಾಣಗಳ ಸ್ವಚ್ಛತೆ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

‘ಇಒಗಳು ಪಿಡಿಒಗಳಿಗೆ ಜನತಾ ಕಫ್ರ್ಯೂ ಮತ್ತು ಸ್ವಚ್ಛತೆ ಬಗ್ಗೆ ತಿಳಿಸಬೇಕು. ಅಂದು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಪೂರ್ಣ ಬಂದ್ ಆಗಿರುತ್ತವೆ. ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರೊಂದಿಗೆ ಸಭೆ ಸೇರಿ ಜನರಲ್ಲಿ ಕಫ್ರ್ಯೂ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

‘ಭಾನುವಾರ ಸಂತೆ ಸಂಪೂರ್ಣವಾಗಿ ಬಂದ್ ಆಗಿರುತ್ತದೆ. ಸಾರ್ವಜನಿಕರು ತಮಗೆ ಬೇಕಾದ ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಶನಿವಾರವೇ ಖರೀದಿಸಬೇಕು. ವಿಜಯಪುರದಿಂದ ಕಲಬುರ್ಗಿಗೆ ಹೋಗುವ ಎಲ್ಲಾ ವಾಹನಗಳನ್ನು ರದ್ದುಗೊಳಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ‘ಗ್ರಾಮ ಮಟ್ಟದಲ್ಲಿ ಗ್ರಾಮ ಸಮಿತಿ ರಚಿಸಬೇಕು. ಗ್ರಾಮ ಮಟ್ಟದ ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಲೆಕ್ಕಾಧಿಕಾರಿ, ಆಶಾ ಕಾರ್ಯಕರ್ತೆಯರು, ಗ್ರಾಮದ ಬೀಟ್ ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪಿಡಿಒ ಮತ್ತು ಗ್ರಾ.ಪಂ ಕಾರ್ಯದರ್ಶಿ ಎಲ್ಲರೂ ಸೇರಿಕೊಂಡು ಮಾ.22ರಂದು ಸಾರ್ವಜನಿಕರು ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

‘ಭಾನುವಾರ ಯಾರೂ ಮನೆಯಿಂದ ಹೊರ ಬರಬಾರದು. ಎಲ್ಲಾ ಹೋಟೆಲ್‌ಗಳು, ಮಾಲ್‌ಗಳನ್ನು ಬಂದ್ ಮಾಡಲಾಗುತ್ತಿದ್ದು, ಜನತಾ ಕಫ್ರ್ಯೂ ಬಗ್ಗೆ ಎಲ್ಲಾ ಗ್ರಾಮಗಳಲ್ಲಿ ಡಂಗುರ ಸಾರಬೇಕು’ ಎಂದು ತಿಳಿಸಿದರು.

‘ವಾರ್ಡ್‌ ಸದಸ್ಯರನ್ನು ಸೇರಿಸಿ, ಸಮಿತಿ ರಚಿಸಿ, ಕೊರೊನಾ ಕುರಿತು ಮಾಹಿತಿ ನೀಡಬೇಕು. ಈ ಹಿನ್ನೆಲೆಯಲ್ಲಿ ಪ್ರತಿದಿನ ಎರಡು ಬಾರಿ ಸಭೆ ಸೇರಬೇಕು. ಜನರು ಹೊರಗಡೆ ಬರುವುದನ್ನು ಕಾಯಲು ಸಿಬ್ಬಂದಿ ನೇಮಿಸಲಾಗಿದೆ. ಜೊತೆಗೆ ನೆರೆ ಹೊರೆಯವರು ಕೂಡ ಯಾರಾದರೂ ಹೊರಗೆ ಬಂದರೆ ಅಧಿಕಾರಿಗಳಿಗೆ ತಿಳಿಸಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಎಲ್.ಅರಿಸಿದ್ಧಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT