ಶಾಲೆಗಳ ಬಳಿ ತಂಬಾಕು; ಪರವಾನಗಿ ರದ್ದತಿಗೆ ಕ್ರಮ

7
ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ಶಾಲೆಗಳ ಬಳಿ ತಂಬಾಕು; ಪರವಾನಗಿ ರದ್ದತಿಗೆ ಕ್ರಮ

Published:
Updated:
Deccan Herald

ಶಿವಮೊಗ್ಗ: ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿ, ಮುಂಗಟ್ಟು, ವಾಣಿಜ್ಯ ಮಳಿಗೆಗಳ ಪರವಾನಗಿ ರದ್ದು ಮಾಡುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 

ಶಾಲಾ–ಕಾಲೇಜುಗಳ 92 ಮೀಟರ್ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಕಳೆದ ಐದು ತಿಂಗಳಲ್ಲಿ ಜಿಲ್ಲೆಯಲ್ಲಿ ನಿಯಮ  ಉಲ್ಲಂಘಿಸಿದ ಪ್ರಕರಣಗಳಲ್ಲಿ ಒಟ್ಟು ₨ 29,219 ದಂಡ ವಿಧಿಸಲಾಗಿದೆ. ಬರೀ ದಂಡ ವಿಧಿಸಿದರೆ ಸಾಲದು ಅಂತಹ ಅಂಗಡಿಗಳ ಪರವಾನಗಿ ರದ್ದುಗೊಳಿಸಬೇಕು ಎಂದು ತಾಕೀತು ಮಾಡಿದರು.

ಆಹಾರ ಸುರಕ್ಷತೆಗೆ ಕ್ರಮ:

ತಳ್ಳುಗಾಡಿಯಲ್ಲಿ ಬೀದಿ ಬದಿಯಲ್ಲಿ ಆಹಾರ ತಿನಿಸು ಮಾರಾಟ ಮಾಡುವವರು ಮಾತ್ರವಲ್ಲದೆ, ಎಲ್ಲಾ ರೀತಿಯ ಆಹಾರ ಉತ್ಪನ್ನಗಳ ಮಾರಾಟ ಸುರಕ್ಷತಾ ಮಾನದಂಡಕ್ಕೆ ಅನುಗುಣವಾಗಿದೆಯೇ ಎಂದು ಖಾತ್ರಿಪಡಿಸಬೇಕು. ಕಳೆದ ಐದು ತಿಂಗಳ ಅವಧಿಯಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ ಒಟ್ಟು ₨ 12.40 ಲಕ್ಷ ದಂಡ ವಿಧಿಸಲಾಗಿದೆ. ಜಿಲ್ಲೆಯಲ್ಲಿ ಬಿಐಎಸ್‌ ಪ್ರಮಾಣ ಪತ್ರ ಹೊಂದಿರುವ 12 ನೀರಿನ ಘಟಕಗಳಿವೆ. ಸೊರಬದಲ್ಲಿ ಬಿಐಎಸ್ ಪ್ರಮಾಣ ಪತ್ರ ಹೊಂದಿರದ ನೀರಿನ ಘಟಕದ ಪ್ರಕರಣ ಹೈಕೋರ್ಟ್‍ನಲ್ಲಿದೆ. ನೀರಿನ ಗುಣಮಟ್ಟ ಪರಿಶೀಲಿಸಬೇಕು. ಶಿಕಾರಿಪುರ ಬಸ್‍ನಿಲ್ದಾಣದಲ್ಲಿ ಪರವಾನಗಿ ರಹಿತವಾಗಿ ನೀರಿನ ಘಟಕ ಮುಚ್ಚಿಸಬೇಕು ಎಂದು ಸೂಚಿಸಿದರು.

ಸಾಂಕ್ರಾಮಿಕ ರೋಗಗಳ ತಡೆಗೆ ಕ್ರಮ:

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ತೀರ್ಥಹಳ್ಳಿಯಲ್ಲಿ ಕಂಡು ಬಂದಿದ್ದ ಎಚ್1ಎನ್‌1 ರೋಗ ನಿಯಂತ್ರಣದಲ್ಲಿದೆ. ಒಟ್ಟು 22 ಎಚ್1ಎನ್1 ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಮೃತಪಟ್ಟಿದ್ದಾರೆ. 193 ಡೆಂಗೆ ಪ್ರಕರಣಗಳು ಪತ್ತೆಯಾಗಿವೆ. ಶಿಕಾರಿಪುರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದಂತೆ ಕಾಲರಾ 5, ಕರುಳುಬೇನೆ 2,591, ಕಾಮಾಲೆ 195, ಮಲೇರಿಯಾ 22, ಇಲಿಜ್ವರ 45, ಚಿಕುನ್ ಗುನ್ಯಾ 197, ಮಂಗನ ಕಾಯಿಲೆ 17 ಕಾಣಿಸಿಕೊಂಡಿವೆಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 212 ಶಿಶುಗಳು ಹಾಗೂ ಆರು ಅಮ್ಮಂದಿರು ಮೃತಪಟ್ಟಿದ್ದಾರೆ. ಸಾವಿಗೆ ಕಾರಣ ಪತ್ತೆ ಹಚ್ಚಿ ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಘುನಂದನ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶಂಕ್ರಪ್ಪ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ನಟರಾಜ್, ಡಾ.ನಟರಾಜ್, ಡಾ.ಹನುಮಂತಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !